ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕುಡಿವ ನೀರಿಗೆ ತೊಂದರೆಯಾಗುವುದು ಬೇಡ:ಜಿಲ್ಲಾಧಿಕಾರಿಗಳು

ವರದಿ: ಸುನೀಲ್ ಬಾವಿಕಟ್ಟಿ ಬೀದರ

ಜೀಲ್ಲಾ ಸುದ್ದಿಗಳು

ಬೀದರ್, ಜಿಲ್ಲೆಯ ಯಾವುದೇ ತಾಲೂಕಿನಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ್ ಅವರು ಎಲ್ಲ ತಹಸೀಲ್ದಾರರು ಮತ್ತು ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏ.6ರಂದು ಎಲ್ಲ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವೆರು, ಜಿಲ್ಲೆಯ ಯಾವುದೇ ಕಡೆಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಇದೆ ಎಂದು ಕಂಡು ಬಂದ ಕೂಡಲೇ ಅಲ್ಲಿ ಕೂಡಲೇ ಬೋರವೆಲ್ ಕೊರೆಯಿಸಿ ನೀರಿಗೆ ತೊಂದರೆಯಾದಗದಂತೆ ನೋಡಿಕೊಳ್ಳಬೇಕು. ಬೋರವೆಲ್ ಕೊರೆಯಿಸಿದರೂ ನೀರು ಸಿಗದಿದ್ದಲ್ಲಿ ಅಂತ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುವ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಿದರು.
ನಿವೃತ್ತಿ ವೇತನ ಮತ್ತು ಪ್ರಧಾನಮಂತ್ರಿ ಜನ್‍ಧನ್ ಯೋಜನೆಯಡಿಯಲ್ಲಿ ಹಣ ಪಡೆದುಕೊಳ್ಳಲು ಜನರು ಬ್ಯಾಂಕುಗಳ ಮುಂದೆ ಸಾಲಾಗಿ ನಿಲ್ಲುವುದು ಕಂಡು ಬಂದಿದ್ದು, ಅವರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿಲ್ಲ. ಹೀಗಾಗಿ ಆಯಾ ಖಾತೆದಾರರಿಗೆ ಅವರ ಮನೆಮನೆಗೆ ಹಣ ತಲುಪಿಸುವ ವ್ಯವಸ್ಥೆಯನ್ನು ತುರ್ತಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಲೀಡ್ ಬ್ಯಾಂಕ್ ಮ್ಯಾನೇಜರ್ ಅವರಿಗೆ ತಿಳಿಸಿದರು.
ಎಲ್ಲ ತಾಲೂಕಿನಲ್ಲಿ ಎಪಿಎಂಸಿ ಮಾರುಕಟ್ಟೆಗಳನ್ನು ಆರಂಭಿಸಲು ಆದೇಶಿಸಲಾಗಿದ್ದು, ಇನೂ ಕೆಲವು ಕಡೆಗಳಲ್ಲಿ ತೆರೆಯದಿರುವುದು ಕಂಡು ಬಂದಿದೆ. ಅಂತಲ್ಲಿ ಕೂಡಲೇ ತೆರೆಯಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಎಲ್ಲ ತಾಲೂಕುಗಳ ಎಪಿಎಂಸಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ 723 ನ್ಯಾಯಬೆಲೆ ಅಂಗಡಿಗಳಿದ್ದು, 402 ಪಡಿತರ ಅಂಗಡಿಗಳಿಗೆ ಅಗತ್ಯ ಆಹಾರಧಾನ್ಯ ಶೇಖರಿಸಲಾಗಿದ್ದು,. 321 ಪಡಿತರ ಅಂಗಡಿಗಳಿಗೆ 2 ಅಥವಾ 3 ದಿನಗಳಲ್ಲಿ ಆಹಾರ ಧಾನ್ಯ ಸರಬರಾಜು ಮಾಡಲಾಗುವುದು. ಈಗಾಗಲೇ ಶೇಖರಿಸಲಾಗಿದ್ದ ಪಡಿತರವನ್ನು ನಿಯಮಾನುಸಾರ ವಿತರಣೆಗೆ ಕ್ರಮ ವಹಿಸಲಾಗುತ್ತಿದೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಕೇಂದ್ರ ಸ್ಥಾನದಲ್ಲಿದ್ದು ಕೆಲಸ ನಿರ್ವಹಿಸಿ: ಎಲ್ಲ ತಾಲೂಕುಗಳಲ್ಲಿ ನಾಡ ತಹಸೀಲ್ದಾರರು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಪಡಿತರ ವಿತರಣೆ ಬಗ್ಗೆ ನಿಗಾ ವಹಿಸುವಂತೆ ನೋಡಿಕೊಳ್ಳಲು ಎಲ್ಲ ತಹಸೀಲ್ದಾರರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಸಭೆಯಲ್ಲಿ ಸಿಇಓ ಗ್ಯಾನೇಂದ್ರಕುಮಾರ ಗಂಗವಾರ ಹಾಗೂ ಇನ್ನಿತರ ಅಧಿಕಾರಿಗಳು ಇದ್ದರು.

Be the first to comment

Leave a Reply

Your email address will not be published.


*