ಮೀನುಗಾರಿಕೆ ಸುದ್ದಿಗಳು
ಮಂಗಳೂರು : ಕರಾವಳಿ ಭಾಗದ ಮೀನುಗಾರರಿಗೆ ಮೀನುಗಾರಿಕೆಯೇ ಜೀವಾಳ. ಹವಾಮಾನ ವೈಪರಿತ್ಯದಿಂದಾಗಿ ಸದಾ ಹೊಡೆತ ತಿನ್ನುತ್ತಿದ್ದ ಮೀನುಗಾರರಿಗೆ ಈ ಬಾರಿ ಕೊರೊನಾ ಸರಿಯಾಗಿಯೇ ಪೆಟ್ಟುಕೊಟ್ಟಿದೆ. ಒಂದು ಕಡೆ ಸಾಲಮನ್ನಾ ಯೋಜನೆಯ ಹೆಸರಲ್ಲಿ ಸರಕಾರ ಮೋಸ ಮಾಡಿದ್ರೆ, ಇನ್ನೊಂದು ಕಡೆ ಕೊರೊನಾದಿಂದಾಗಿ ಮೀನುಗಾರಿಕೆಗೆ ತೆರಳಲಾರದೆ, ಮೀನುಗಾರರ ಬದುಕು ಬೀದಿಗೆ ಬಿದ್ದಿದೆ.
ಕೊರೊನಾ ಮಹಾಮಾರಿ ವಿಶ್ವದಾದ್ಯಂತ ಭಯ ಹುಟ್ಟಿಸಿದೆ. ಕೊರೊನಾ ಸೋಂಕು ಹರಡೋ ಭೀತಿಯಿಂದಲೇ ದೇಶದಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಜನರು ಕಳೆದ 7 ದಿನಗಳಿಂದಲೂ ಮನೆಯಲ್ಲಿಯೇ ಬಂಧಿಯಾಗಿದ್ದಾರೆ. ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ಕೂಡ ಬೋಟ್ ಗಳನ್ನು ಬಂದರಿನಲ್ಲಿ ಲಂಗರು ಹಾಕಿ ಮನೆಯಲ್ಲಿಯೇ ಕುಳಿತಿದ್ದಾರೆ. ಹೊರ ರಾಜ್ಯ, ಜಿಲ್ಲೆಗಳಿಂದ ಬಂದಿರುವ ಮೀನುಗಾರಿಕಾ ಕಾರ್ಮಿಕರು ತಮ್ಮೂರಿಗೆ ತೆರಳಲಾರದೆ ಬಂದರಿನಲ್ಲಿಯೇ ಉಳಿದುಕೊಂಡಿದ್ದಾರೆ. ಹಲವು ಸಂಘಟನೆಗಳು ಇವರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಿವೆ. ಆದರೆ ಹಲವು ಬೋಟ್ ಗಳಲ್ಲಿ ಲಕ್ಷಾಂತರ ಮೌಲ್ಯದ ಮೀನುಗಳು ಇಂದಿಗೂ ಕೊಳೆಯುತ್ತಿದ್ರೆ, ಲಕ್ಷಾಂತರ ಮೀನುಗಾರರ ಕುಟುಂಬಗಳು ಹೊತ್ತಿನ ತುತ್ತಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಮಂಗಳೂರು, ಮಲ್ಪೆ, ಗಂಗೊಳ್ಳಿ, ಹಂಗಾರಕಟ್ಟೆ, ಭಟ್ಕಳ, ಕಾರವಾರ, ಹೊನ್ನಾವರ, ತದಡಿ, ಬೇಲೆಕೇರಿ ಬಂದರುಗಳ ಮೂಲಕ ವರ್ಷಂಪ್ರತಿ ಸುಮಾರು 10,000ಕ್ಕೂ ಅಧಿಕ ಬೋಟುಗಳಲ್ಲಿ ಮೀನುಗಾರಿಕೆ ನಡೆಯುತ್ತಿದೆ. 2017-18ನೇ ಸಾಲಿನಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 3,232 ಕೋಟಿ ರೂಪಾಯಿ ಮೌಲ್ಯದ ವಹಿವಾಟು ನಡೆದಿತ್ತು.
ಈ ಪೈಕಿ 2,92,061 ಟನ್ ಮೀನು ಹಿಡಿಯಲಾಗಿತ್ತು. ಆದರೆ 2018-19ನೇ ಸಾಲಿನಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಮತ್ಸ್ಯಕ್ಷಾಮ ಎದುರಾಗಿತ್ತು. ಹೀಗಾಗಿ ಮೀನುಗಾರಿಕೆಯ ವಹಿವಾಟಿಗೆ ಹೊಡೆತಕೊಟ್ಟಿತ್ತು. ಕಳೆದ ಬಾರಿ 3,166 ಕೋಟಿ ಮೌಲ್ಯದ 2,77,747 ಟನ್ ಮೀನು ಹಿಡಿಯಲಾಗಿದೆ. ಆದರೆ ಈ ಬಾರಿ ಆರಂಭದಿಂದಲೂ ಮೀನುಗಾರಿಕೆಗೆ ಒಂದಿಲ್ಲೊಂದು ವಿಘ್ನ ಎದುರಾಗುತ್ತಲೇ ಇತ್ತು. ಉತ್ತಮವಾಗಿ ಮೀನುಗಾರಿಕೆ ನಡೆಯುತ್ತೇ ಅನ್ನೋ ನಿರೀಕ್ಷೆಯಲ್ಲಿದ್ದಾಗಲೇ ಅಪ್ಪಳಿಸಿದ ಕೊರೊನಾ ಮಹಾಮಾರಿ ಇದೀಗ ಮೀನುಗಾರರ ಬದುಕನ್ನೆ ಚಿಂದಿ ಮಾಡಿದೆ.
ಎಪ್ರಿಲ್ 14ರ ವರೆಗೆ ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿರೋದ್ರಿಂದಾಗಿ ಮೀನುಗಾರಿಕೆಗೆ ತೆರಳದಂತೆ, ಬಂದರುಗಳಲ್ಲಿ ಮೀನುಗಾರಿಕೆ ನಡೆಸದಂತೆ ಸರಕಾರ ಆದೇಶ ಹೊರಡಿಸಿದೆ. ಹೀಗಾಗಿ ಲಾಕ್ ಡೌನ್ ಆದೇಶ 21 ದಿನಗಳಿಗೆ ಸೀಮಿತವಾದ್ರೆ ನಂತರ ಕೆಲವು ದಿನಗಳ ಮಟ್ಟಿಗಾದ್ರೂ ಮೀನುಗಾರಿಕೆ ನಡೆಸಬಹುದಾಗಿದೆ. ಒಂದೊಮ್ಮೆ ಲಾಕ್ ಡೌನ್ ಅವಧಿ ವಿಸ್ತರಣೆಯಾದ್ರೆ ಮೀನುಗಾರರು ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗುವುದು ನಿಶ್ಚಿತ. ಕರಾವಳಿ ಭಾಗದ ಲಕ್ಷಾಂತರ ಮಂದಿ ಮೀನುಗಾರಿಕೆಯನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಇದೀಗ ಮೀನುಗಾರಿಕೆಯೇ ಬಂದ್ ಆಗಿರುವುದರಿಂದ ಮೀನುಗಾರರು ಕಣ್ಣೀರು ಸುರಿಸುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕೊರೊನಾ ಹಿನ್ನೆಲೆಯಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿವೆ. ಆದ್ರೆ ಮೀನುಗಾರರಿಗೆ ಅನುಕೂಲವಾಗುವ ಯಾವೊಂದು ಯೋಜನೆಗಳನ್ನು ಪ್ರಕಟಿಸಿಲ್ಲ.
ಮುಂಗೈಗೆ ತುಪ್ಪ ಸವರಿದ ಸಾಲಮನ್ನಾ
ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮೀನುಗಾರರ ಸಾಲಮನ್ನಾ ಯೋಜನೆಯನ್ನು ಜಾರಿಗೆ ತಂದಿತ್ತು. ಸಿಎಂ ಯಡಿಯೂರಪ್ಪ ಬಜೆಟ್ ನಲ್ಲಿ ಸಾಲಮನ್ನಾ ಯೋಜನೆ ಘೋಷಿಸುತ್ತಿದ್ದಂತೆಯೇ ಕರಾವಳಿ ಭಾಗದ ಮೀನುಗಾರರು ಖುಷಿಯಾಗಿದ್ರು. 50,000 ರೂಪಾಯಿ ವರೆಗಿನ ಸಾಲ ಮನ್ನಾ ಆಯ್ತು ಅಂತಾ ಸುಮ್ಮನಾಗಿದ್ರು.
ಆದರೆ ಸಾಲಮನ್ನಾ ಯೋಜನೆ ಜಾರಿಯಾದ ಕೆಲವೇ ದಿನಗಳಲ್ಲಿ ಬ್ಯಾಂಕುಗಳು ಮೀನುಗಾರರಿಂದ ಸಾಲ ಮರುಪಾವತಿ ಮಾಡುವಂತೆ ಒತ್ತಡ ಹೇರಿದ್ದವು. ಈ ಕುರಿತು ಮೀನುಗಾರರು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಮೀನುಗಾರಿಕಾ ಸಚಿವರು ತಾನು ಲೀಡ್ ಬ್ಯಾಂಕ್ ಜೊತೆ ಮಾತನಾಡಿದ್ದೇನೆ. ಯಾರೂ ಕೂಡ ಸಾಲ ಪಾವತಿ ಮಾಡುವುದು ಬೇಡಾ ಅಂತಾನೇ ಹೇಳುತ್ತಿದ್ದರು, ಆದರೆ ಇತ್ತ ರಾಷ್ಟ್ರೀಯಕೃತ ಬ್ಯಾಂಕಿನ ಮ್ಯಾನೇಜರ್ ಗಳು ಮೀನುಗಾರರಿಗೆ ಇನ್ನಿಲ್ಲದ ಕಿರುಕುಳವನ್ನು ನೀಡಿ, ಬಹುತೇಕರಿಂದ ಸಾಲವನ್ನ ವಸೂಲಿ ಮಾಡಿದ್ದಾರೆ.
ಹಲವು ಮೀನುಗಾರರ ವೈಯಕ್ತಿಕ ಖಾತೆಯಲ್ಲಿ ಕೂಡಿಟ್ಟಿದ್ದ ಹಣವನ್ನೇ ಮೀನುಗಾರರ ಸಾಲಕ್ಕೆ ವಜಾ ಮಾಡಲಾಗಿದೆ. ಈ ಬಗ್ಗೆ ಬ್ಯಾಂಕಿನವರಲ್ಲಿ ಕೇಳಿದ್ರೆ ಸರಕಾರದಿಂದ ಸಾಲಮನ್ನಾ ಯೋಜನೆಯ ಬಗ್ಗೆ ನಮಗೆ ಯಾವುದೇ ಪತ್ರಗಳು ಬಂದಿಲ್ಲಾ ಅನ್ನುತ್ತಿದ್ದಾರೆ. ಮೀನುಗಾರಿಕಾ ಸಚಿವರಿಗೆ ಈ ವಿಷಯ ತಿಳಿದಿದ್ರೂ ಮೀನುಗಾರರ ನೆರವಿಗೆ ಮಾತ್ರ ಧಾವಿಸುತ್ತಿಲ್ಲ.
ಇದೀಗ ಕೊರೊನಾದಿಂದಾಗಿ ಮೀನುಗಾರರ ಬದುಕು ದುಸ್ಥರವಾಗಿದೆ. ಒಂದು ಕಡೆ ಮೀನುಗಾರರ ನೆರವಿಗೆ ಸರಕಾರ ನೀಡಿರೋ ಸಾಲ, ಇನ್ನೊಂದು ಕಡೆ ಬೋಟುಗಳಿಗಾಗಿ ಬ್ಯಾಂಕುಗಳಿಂದ ಮಾಡಿದ ಸಾಲ. ಹೀಗೆ ಸಾಲದ ಕಂತು ಕಟ್ಟುವುದು ಮೀನುಗಾರರಿಕೆ ಕಷ್ಟಸಾಧ್ಯ. ಇಂತಹ ಸಂದರ್ಭದಲ್ಲಿ ಸರಕಾರ ಮನ್ನಾ ಮಾಡಿದ ಸಾಲ ಪಾವತಿ ಮಾಡಬೇಕೆಂಬ ಚಿಂತೆ ಮೀನುಗಾರರನ್ನು ಕಾಡುತ್ತಿದೆ. ಸಾಲ ಮನ್ನಾ ಹೆಸರಲ್ಲಿ ರಾಜ್ಯ ಸರಕಾರ ಕರಾವಳಿ ಭಾಗದ ಮೀನುಗಾರರಿಗೆ ವಂಚನೆ ಮಾಡಿದೆ ಅಂತಾ ಮೀನುಗಾರರು ಆರೋಪಿಸುತ್ತಿದ್ದಾರೆ.
ಕೊರೊನಾ ಸಂಕಷ್ಟದಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಮೀನುಗಾರರ ನೆರವಿಗೆ ಧಾವಿಸಬೇಕಾದ ಅನಿವಾರ್ಯತೆಯಿದೆ. ಕಳೆದೊಂದು ವರ್ಷದ ಹಿಂದೆಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಘೋಷಣೆ ಮಾಡಿರುವ ಸಾಲಮನ್ನಾ ಯೋಜನೆಯನ್ನು ಜಾರಿಗೆ ತಂದು, ಮೀನುಗಾರಿಕಾ ಸಚಿವರು ಮೀನುಗಾರರನ್ನು ಸಾಲದಿಂದ ಮುಕ್ತಿ ದೊರಕಿಸಬೇಕಾದ ಅನಿವಾರ್ಯತೆಯಿದೆ.
ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ ಮುನ್ನಡೆಸಲು ಸಾಧ್ಯ
ಮಾಧ್ಯಮ ಮುನ್ನೆಡೆಯಲ್ಲು ನಿವು 100,500,1000,2500,5000,10000,50000,1 ಲಕ್ಷ. ದೇಣಿಗೆ ಸಹಾಯ ನೀಡಬಹುದು
ಗೂಗಲ್ ಪೇ ಪೋನ ಪೇ ಮೂಲಕ ಕೂಡ ನೀಡಬಹುದು 9008329745
ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ನೀಡಲು ಈ ಕೇಳಗಿನ ಕೋಡ ಬಳಸಿ ಆನ್ ಲೈನ್ ದೇಣಿಗೆ ನೀಡಬಹುದು
Amaresh kamanakeri
A/c 62053220183 IFC-SBIN0020354 ಪೋನ ನಂ 9008329745
Be the first to comment