-
ಗಾಳದ ಕಣ್ಣಪ್ಪ
ನಿಜಶರಣ ಅಂಬಿಗರ ಚೌಡಯ್ಯ
ಜೊತೆಗೆ ಇನ್ನೊಬ್ಬ ಕೋಲಿ ಸಮಾಜದವಚನಕಾರ
ಈತ ವೃತ್ತಿಯಲ್ಲಿ ಮೀನುಗಾರ. ಅಲ್ಲಮಪ್ರಭು ಇವನ ಆದರ್ಶ ಮೂರ್ತಿಯಾಗಿರಬಹುದು. ಆದ್ದರಿಂದಲೋ ಏನೋ ಇವನು ಅಲ್ಲಮಪ್ರಭುವಿನ ಹೆಸರಿನಿಂದಲೇ ವಚನಗಳನ್ನು ರಚಿಸಿದ್ದಾನೆ. ಕಲ್ಯಾಣದ ತ್ರಿಪುರಾಂತಕೇಶ್ವರನ ಕೆರೆಯಲ್ಲಿ ಮೀನು ಹಿಡಿಯುವುದು ಇವನ ನಿತ್ಯದ ಕಾಯಕ. ಇವನ ಪತ್ನಿ ರೇಚವ್ವೆ. ಸತಿಪತಿಗಳೀರ್ವರೂ ಶಿವಾನುಭವಗೋಷ್ಠಿಯಲ್ಲಿ ಭಾಗವಹಿಸುತ್ತಿದ್ದರು. ಒಮ್ಮೆ ಇವನಿಗೆ ಗಣಪರ್ವ ಮಾಡಬೇಕೆಂಬ ಆಸೆಯಾಯಿತು. ಅಂದು ಲಿಂಗಪೂಜೆಗೆ ಕುಳಿತಾಗ `ನಿನಗೇನು ಬೇಕು’ ಎಂಬ ಅವ್ಯಕ್ತ ಧ್ವನಿ ಕೇಳಿಸಿತು. ತನಗೆ ಒಂದು ಸ್ವರ್ಣಮತ್ಸ್ಯ ಬೇಕು ಎಂದ ಕಣ್ಣಪ್ಪ. `ಆಗಲಿ’ ಎಂಬ ಉತ್ತರವೂ ಕೇಳಬಂದಿತು. ಅಂದು ತ್ರಿಪುರಾಂತಕ ಕೆರೆಯಲ್ಲಿ ಬಲೆಯನ್ನು ಹಾಕಿದಾಗ ಒಂದು ಸ್ವರ್ಣಮತ್ಸ್ಯ ದೊರೆಯಿತು. ಅದನ್ನು ಮಾರಿ ಬಂದ ಹಣದಿಂದ ಗಣಪರ್ವ ಮಾಡಲು ತೀರ್ಮಾನಿಸಿ ಶಿವಾನುಭವ ಮಂಟಪಕ್ಕೆ ಬಂದು ಜಂಗಮಮೂರ್ತಿಗಳಿಗೆ ಬಿನ್ನಹಮಾಡಿದನು. ಕಣ್ಣಪ್ಪನ ಮನೆಗೆನಕ ಬಂದ ಜಂಗಮರು ಅಲ್ಲಿ ಸತ್ತು ಬಿದ್ದ ಮೀನುಗಳ ವಾಸನೆಯನ್ನು ತಡೆಯಲಾರದೆ ಅಸಹ್ಯಪಟ್ಟು ಬಸವಣ್ಣನ ಮಹಾಮನೆಗೆ ಬಂದರು. ಅವರನ್ನು ಕಣ್ಣಪ್ಪ ಮತ್ತೆ ಕರೆಯಲು ಬಂದಾಗ ಜಂಗಮರು ಅವನಿಗೆ ಛೀಮಾರಿ ಹಾಕಿ ಅವನ ಲಿಂಗವನ್ನು ಕಿತ್ತು ಹೊರಗೆ ಹಾಕಿದರು. ಇತ್ತ ಬಸವಣ್ಣನ ಮಹಮನೆಯಲ್ಲಿ ಲಿಂಗಪೂಜೆಗೆ ಕುಳಿತ ಜಂಗಮರು ತಮ್ಮ ಕರಡಿಗೆಯನ್ನು ಬಿಚ್ಚಿದಾಗ ಸೆಜ್ಜೆಯಲ್ಲಿ ಲಿಂಗಗಳೇ ಇರಲಿಲ್ಲ. ವಿಷಯ ತಿಳಿದ ಬಸವಣ್ಣ ಕಣ್ಣಪ್ಪನ ಮನೆಗೆ ಅವರನ್ನು ಕರೆದುಕೊಂಡು ಹೋಗಿ ಅವರ ತಪ್ಪನ್ನು ಮನ್ನಿಸುವಂತೆಯೂ ಅವರ ಇಷ್ಟಲಿಂಗಗಳನ್ನು ಹಿಂತಿರುಗಿಸುವಂತೆಯೂ ಕೇಳಿಕೊಂಡನು. ಕಣ್ಣಪ್ಪ ಜಂಗಮರನ್ನು ತ್ರಿಪುರಾಂತಕ ಕೆರೆಯ ಬಳಿಗೆ ಕರೆದುಕೊಂಡು ಹೋಗಿ ತಾನು ಧ್ಯಾನಾಸಕ್ತನಾದನು. ಸ್ವಲ್ಪ ಹೊತ್ತಿನಲ್ಲಿಯೇ ಕಳೆದುಹೋದ ಲಿಂಗಗಳು ನೀರಿನಲ್ಲಿ ತೇಲಿಬಂದವು. ಜಂಗಮರು ತಮ್ಮ ತಮ್ಮ ಲಿಂಗಗಳನ್ನು ಪಡೆದು ಕಣ್ಣಪ್ಪನನ್ನು ಸ್ತುತಿಸಿ ಹೋದರು. ಈ ಪವಾಡಕಥೆ ಪಾಲ್ಕುರಿಕೆ ಸೋಮೇಶ್ವರ ಪುರಾಣ, (ಪರ್ವತೇಶನ) ಚತುರಾಚಾರ್ಯ ಪುರಾಣ, ಬಸವೇಶ್ವರ ಪುರಾಣ ಕಥಾಸಾಗರ, ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರ, ಶರಣಲೀಲಾಮೃತ ಮೊದಲಾದ ಕೃತಿಗಳಲ್ಲಿ ಕಂಡುಬರುತ್ತದೆ. ಗಾಳದ ಕನ್ನ(ಯ್ಯ)ನ ಸಾಂಗತ್ಯ ಎಂಬ ಅಜ್ಞಾತಕವಿಯೊಬ್ಬನ ಸಾಂಗತ್ಯ ಕೃತಿ (ಅಪೂರ್ಣ- ಓಲೆಪ್ರತಿ) ಹುಬ್ಬಳ್ಳಿಯ ಶ್ರೀ ಜಗದ್ಗುರು ಮೂರು ಸಾವಿರ ಮಠದ ಹಸ್ತಪ್ರತಿ ಸಂಗ್ರಹದಲ್ಲಿ ಸಿಗುತ್ತದೆ. ನೋಡಿ:ಶ್ರೀ ಜಗದ್ಗುರು ಮೂರುಸಾವಿರ ಮಠದ ವರ್ಣನಾತ್ಮಕ ಹಸ್ತಪ್ರತಿಸೂಚಿ, ಪು. 100-1, (1989)
ಗಾಣದ ಕಣ್ಣಪ್ಪನ (ಗಾಳದ ಕಣ್ಣಪ್ಪ )ವಿಷಯದಲ್ಲಿ ಒಂದು ಪ್ರಮಾದವು ನಡೆದು ಹೋಗಿದೆ.
ಗಾಳದ ಕಣ್ಣಪ್ಪನಾಗಬೇಕಾದ ಗಾಣದ ಕಣ್ಣಪ್ಪ:
ವೃತ್ತಿಯಲ್ಲಿ ಗಾಣದ ಕಣ್ಣಪ್ಪನು ಮೀನುಗಾರನು. ಪ್ರಾಯಶಃ ಪಾಠಾಂತರದ ಸಮಯದಲ್ಲಿ ಗಾಳದ ಬದಲಾಗಿ ಗಾಣವಾಗಿದ್ದು ಇಂತಹ ಒಂದು ಪ್ರಮಾದಕ್ಕೆ ಕಾರಣವಾಗಿರಬಹುದು. ಸುಮಾರು ಹತ್ತು ವಚನಗಳನ್ನು ರಚಿಸಿದ ಗಾಳದ ಕಣ್ಣಪ್ಪ ತನ್ನ ಆರಾಧ್ಯ ಗುರು ಅಲ್ಲಮರನ್ನು ವಚನಗಳ ತುಂಬೆಲ್ಲಾ ಸ್ಮರಿಸಿದ್ದಾರೆ. ಗಾಳದ ಕಣ್ಣಪ್ಪನು ಅಲ್ಲಮರ ಹೆಸರಿನಲ್ಲಿ ವಚನ ರಚಿಸಿದ್ದಾನೆ. ‘ಗೊಹೇಶ್ವರನ ಶರಣ ಅಲ್ಲಮ’ ಆತನ ವಚನಾಂಕಿತ.
ತ್ರಿಪುರಾಂತಕ ಕೆರೆಯಲ್ಲಿ ಮೀನು ಹಿಡಿಯುವ ಉದ್ಯೋಗಿಯಾದ ಗಾಳದ ಕಣ್ಣಪ್ಪನು ಅತ್ಯಂತ ಅನುಭಾವಿಕ ವಚನಗಳನ್ನು ಬರೆದಿದ್ದಾನೆ. ಇವನ ಪತ್ನಿ ರೇಚವ್ವೆ. ಗಾಳದ ಕಣ್ಣಪ್ಪನ ಸಾಂಗತ್ಯ ಕೃತಿ ಹಸ್ತ ಪ್ರತಿಯನ್ನು ಈಗಲೂ ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ಕಾಣುತ್ತೇವೆ.
ಗಾಳ ಇದು ಮೀನು ಹಿಡಿಯುವ ಸಾಧನ. ಆದರೆ ಬದಲಾದ ಪಾಠಾಂತರದಲ್ಲಿ ಗಾಣವಾಗಿ ಈಗಲೂ ಅನೇಕ ಗಾಣಿಗರು ಈತನನ್ನು ಗಾಣಿಗ ಎಂದು ತಪ್ಪಾಗಿ ಗ್ರಹಿಸಿದ್ದಾರೆ. ಕಣ್ಣಪ್ಪನ ಬಹುತೇಕ ವಚನಗಳಲ್ಲಿ ಮೀನುಗಾರಿಕೆಗೆ ಸಂಬಂಧಪಟ್ಟ ಪದಗಳು ಬರುತ್ತವೆ. ಇಂತಹ ಹಿಂದುಳಿದ ಜಾತಿಯ ವಚನಕಾರರು ಕಲ್ಯಾಣದ ಆಂದೋಲನದಲ್ಲಿ ಪಾಲ್ಗೊಂಡಿದ್ದರು. ಗಾಳದ ಕಣ್ಣಪ್ಪನ ಒಂದು ವಚನ-
ಒಂದೇ ಕೋಲಿನಲ್ಲಿ ಮೂರುಲೋಕ ಮಡಿಯಿತು
ಬಿಲ್ಲಿನ ಕೊಪ್ಪು ಹರಿ ನರಿ ಸಿಡಿದು ನಾರಾಯಣನ ತಾಗಿತ್ತು.
ನಾರಾಯಣನ ಹಲ್ಲು ಮುರಿದು ಬ್ರಹ್ಮನ ಹಣೆಯೊಡೆಯಿತ್ತು.
ಹಣೆ ಮುರಿದು ರುದ್ರನ ಹಣೆಗಿಚ್ಚಿನಲ್ಲಿ ಬಿದ್ದಿತ್ತು, ನಷ್ಟವಾಯಿತ್ತು.
ಗೊಹೇಶ್ವರನ ಶರಣ ಅಲ್ಲಮ ಬದುಕು ನಾಮ ನಷ್ಟವಾಯಿತ್ತು.
ಇದು ಗಾಳದ ಕಣ್ಣಪ್ಪನ ವಚನವಾಗಿದೆ.
ಮೀನುಗಾರನಾದ ಕಣ್ಣಪ್ಪನು ತನ್ನ ಒಂದು ಕೋಲಿನಲ್ಲಿ ಮೂರು ಲೋಕವು ಮಡಿಯಿತ್ತು, ಸತ್ಯ ಶ್ರದ್ಧೆಯಿಂದ ಮಾಡಿದ ಕಾಯಕವು ಮೂರುಲೋಕಕ್ಕಿಂತ ಮಿಗಿಲಾಗಿತ್ತು ಎನ್ನುತ್ತಾನೆ. ಕೋಲು ಕಾಯಕದ ಸಂಕೇತವಾಗಿ ನಿಲ್ಲುತ್ತದೆ. ಭ್ರಮೆ ಭ್ರಾಂತಿಯ ಮೂರುಲೋಕದ ಕಲ್ಪನೆ ಸುಳ್ಳಾಯಿತು.
ಕೋಲಿಗೆ ಅಂಟಿಕೊಂಡ ಬಿಲ್ಲಿನ ಕೊಪ್ಪು ಅಂದರೆ ಕೊಂಡಿ ಸಿಡಿದು ನಾರಾಯಣನ ದೇಹಕ್ಕೆ ತಾಗಿತ್ತು.
ನಾರಾಯಣನಿಗೆ ತಾಗಿದ ಬಿಲ್ಲಿನ ಸಿಡಿದ ಶಿಬಿಕೆ ಆತನ ಹಲ್ಲು ಮುರಿದು ಬ್ರಹ್ಮನ ಹಣೆಗೆ ತಾಗಿ ನೋವು ಮಾಡಿತ್ತು. ಹಣೆ ಮುರಿದು ರುದ್ರನ ಹಣೆಗಿಚ್ಚಿನಲ್ಲಿ ಬಿದ್ದಿತ್ತು, ನಷ್ಟವಾಯಿತ್ತು. ರುದ್ರದೇವ ಲಯದ ಸಂಕೇತ. ಅದು ಅವನ ಹಣೆಗಿಚ್ಚಿನಲ್ಲಿ ಬಿದ್ದು ನಷ್ಟವಾಯಿತ್ತು. ಗೊಹೇಶ್ವರನ ಶರಣ ಅಲ್ಲಮನ ಬದುಕು ನಾಮ ನಷ್ಟವಾಯಿತ್ತು- ಅಂದರೆ ಒಡಲಿಗೆ ದುಡಿಯುವ ಕಾಯಕದಿಂದ ಬದುಕು ನಾಮ ನಷ್ಟವಾಗುತ್ತದೆ. ಸಮಷ್ಟಿಗೆ ದುಡಿಯಬೇಕೆನ್ನುವ ಸಂದೇಶ ಇಲ್ಲಿ ಕಂಡುಬರುತ್ತದೆ.
ಮಾಹಿತಿಯ ಮೂಲ
Bayalu,
Vachana sahitya.
Be the first to comment