ಹೊಸದಿಲ್ಲಿ: ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಒಂದು ರಾಷ್ಟ್ರ, ಒಂದು ಚುನಾವಣೆ ಪರಿಕಲ್ಪನೆ ಕುರಿತು ಸಮಾಲೋಚನೆ ನಡೆಸಿದಾಗ, ಹೈಕೋರ್ಟ್ ಗಳ ಮೂವರು ಮಾಜಿ ಮುಖ್ಯ ನ್ಯಾಯಾಧೀಶರು ಹಾಗೂ ಒಂದು ರಾಜ್ಯದ ಚುನಾವಣಾ ಆಯುಕ್ತರು ಈ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದರು ಎಂದು ರಾಮನಾಥ್ ಕೋವಿಂದ್ ಅವರ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆದರೆ, ಸುಪ್ರೀಂ ಕೋರ್ಟ್ ನ ಮಾಜಿ ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ, ರಂಜನ್ ಗೊಗೊಯಿ, ಶಾರದ್ ಅರವಿಂದ್ ಬೊಬ್ಡೆ ಹಾಗೂ ಯು.ಯು.ಲಲಿತ್ ಅವರು ಒಂದೇ ಬಾರಿಗೆ ಚುನಾವಣೆ ನಡೆಸಲು ಲಿಖಿತ ಸಮ್ಮತಿ ಸೂಚಿಸಿದ್ದಾರೆ ಎಂದು ಕೋವಿಂದ್ ವರದಿಯಲ್ಲಿ ಹೇಳಲಾಗಿದೆ.
ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯ ವರದಿಯನ್ನು ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದ್ದು, ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವುದಕ್ಕೂ ಮುನ್ನ ಮೊದಲ ಹಂತದ ಕ್ರಮವಾಗಿ ಸ್ಥಳೀಯ ಸಂಸ್ಥೆಗಳಿಗೆ 100 ದಿನಗಳೊಳಗಾಗಿ ಏಕಕಾಲಕ್ಕೆ ಚುನಾವಣೆ ನಡೆಸಲು ತೀರ್ಮಾನಿಸಿದೆ.
ಒಂದು ರಾಷ್ಟ್ರ, ಒಂದು ಚುನಾವಣೆ ಪ್ರಸ್ತಾವನೆಗೆ ಕಲ್ಕತ್ತಾ ಹೈಕೋರ್ಟ್ ನ ಮಾಜಿ ಮುಖ್ಯ ನ್ಯಾಯಾಧೀಶ ಗಿರೀಶ್ ಚಂದ್ರ ಗುಪ್ತ, ಮದ್ರಾಸ್ ಹೈಕೋರ್ಟ್ ನ ಮಾಜಿ ಮುಖ್ಯ ನ್ಯಾಯಾಧೀಶ ಸಂಜೀಬ್ ಬ್ಯಾನರ್ಜಿ ಹಾಗೂ ದಿಲ್ಲಿ ಹೈಕೋರ್ಟ್ ನ ಮಾಜಿ ಮುಖ್ಯ ನ್ಯಾಯಾಧೀಶ ಅಜಿತ್ ಪ್ರಕಾಶ್ ಶಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಒಂದು ರಾಷ್ಟ್ರ, ಒಂದು ಚುನಾವಣೆ ಪರಿಕಲ್ಪನೆಯನ್ನು ಏಳು ಮಾಜಿ ಚುನಾವಣಾ ಆಯುಕ್ತರು ಅನುಮೋದಿಸಿದ್ದರೆ, ತಮಿಳುನಾಡಿನ ಮಾಜಿ ಚುನಾವಣಾ ಆಯುಕ್ತ ವಿ.ಪಳನಿಕುಮಾರ್ ಆಕ್ಷೇಪಿಸಿದ್ದಾರೆ ಎಂದೂ ವರದಿಯಲ್ಲಿ ಹೇಳಲಾಗಿದೆ.
Be the first to comment