ಮಿರತ್ (ಉತ್ತರ ಪ್ರದೇಶ): ಮೀರತ್‌ನಲ್ಲಿ ಹೆಲಿಕಾಪ್ಟರ್ ಕಳ್ಳತನವಾಗಿದೆ ಎಂದು ಪೈಲಟ್ ಒಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದ್ದಾರೆ.
ಎಸ್‌ಎಆರ್ ಏವಿಯೇಷನ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್‌ನ ಪೈಲಟ್ ರವೀಂದ್ರ ಸಿಂಗ್ ಎಂಬುವವರು ತಮ್ಮ ಸಂಸ್ಥೆಯ ಹೆಲಿಕಾಪ್ಟರ್ ಕಳ್ಳತನವಾಗಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
ಮೇ ತಿಂಗಳಿನಲ್ಲಿ ಕೆಲವರು ಟ್ರಕ್‌ನಲ್ಲಿ ಹೆಲಿಕಾಪ್ಟರ್ ಬಿಡಿಭಾಗಗಳನ್ನು ತೆಗೆದುಕೊಂಡು ಹೋದರು. ಅವರನ್ನು ತಡೆದಾಗ ತಮ್ಮ ಮೇಲೆ ಹಲ್ಲೆ ನಡೆಸಲಾಯಿತು ಎಂದು ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಖಿಲೇಶ್ ಯಾದವ್, ‘ರಾಜ್ಯ ಸರ್ಕಾರದ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇಲ್ಲಿಯವರೆಗೆ, ಉತ್ತರ ಪ್ರದೇಶದ ದುರ್ಷ್ಕಮಿಗಳು ಕೊಲೆ, ದರೋಡೆ ಮತ್ತು ಅತ್ಯಾಚಾರದಂತಹ ಕೃತ್ಯಗಳ ಮೂಲಕ ಬಿಜೆಪಿ ಸರ್ಕಾರದ ಕಾನೂನು ಮತ್ತು ಸುವ್ಯವಸ್ಥೆಯನ್ನು ನೆಲಸಮ ಮಾಡುತ್ತಿದ್ದರು. ಆದರೆ, ಈಗ ಮೀರತ್‌ನಲ್ಲಿ ಹೆಲಿಕಾಪ್ಟರ್ ಅನ್ನು ಕಳ್ಳತನ ಮಾಡಿ ಟ್ರಕ್‌ನಲ್ಲಿ ಕೊಂಡೊಯ್ಯಲಾಗಿದೆ. ಇದು ವಿಮಾನ ನಿಲ್ದಾಣದ ಭದ್ರತೆಯ ಪ್ರಶ್ನೆಯಾಗಿದೆ. ಅಲ್ಲಿನ ಭದ್ರತೆಗೆ ಏನಾಗಿದೆ?’ ಎಂದು ಕಿಡಿಕಾರಿದ್ದಾರೆ.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ಪೊಲೀಸರು, ‘ಎಸ್‌ಎಆರ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಹೆಲಿಕಾಪ್ಟರ್ ಅನ್ನು ಮತ್ತೊಂದು ಸಂಸ್ಥೆಗೆ ಮಾರಾಟ ಮಾಡಿದೆ. ಇದು ತಿಳಿದಿರದ ಕಾರಣ ಹೆಲಿಕಾಪ್ಟರ್ ಕಳ್ಳತನವಾಗಿದೆ ಎಂದು ಪೈಲಟ್ ದೂರು ನೀಡಿದ್ದಾರೆ’ ಎಂದು ಹೇಳಿದ್ದಾರೆ.
ಹೆಲಿಕಾಪ್ಟರ್ ಅನ್ನು ಮತ್ತೊಂದು ಕಂಪನಿಗೆ ಮಾರಾಟ ಮಾಡಲಾಗಿದೆ. ಹೊಸ ಮಾಲೀಕರು ಕಳ್ಳತನದ ದಿನದಂದು ಟ್ರಕ್ ಮೂಲಕ ಹೆಲಿಕಾಪ್ಟರ್ ಅನ್ನು ಸಾಗಿಸಿದ್ದಾರೆ. ಹೊಸ ಕಂಪನಿಯು ಕಾನೂನು ಮಿತಿಯಲ್ಲಿಯೇ ಕ್ರಮಗಳನ್ನು ಕೈಗೊಂಡಿದೆ. ಯಾವುದೇ ತಪ್ಪು ಮಾಡಿಲ್ಲ. ಆದರೆ, ಮಾರಾಟದ ಬಗ್ಗೆ ಪೈಲಟ್‌ಗೆ ತಿಳಿದಿರಲಿಲ್ಲ’ ಎಂದು ಸರ್ಕಲ್ ಅಧಿಕಾರಿ ಅಂತರಿಕ್ಷ್ ಜೈನ್ ತಿಳಿಸಿದ್ದಾರೆ.
Be the first to comment