ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಕಾರ್ಯಗತಗೊಳಿಸಲು ಕರ್ನಾಟಕ ರೈಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿ ಲಿಮಿಟೆಡ್‌ಗೆ (K-RIDE)ಹೆಚ್ಚಿನ ತಾಂತ್ರಿಕ ಸಾಮರ್ಥ್ಯದ ಅಗತ್ಯವಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಹೇಳಿದ್ದಾರೆ.
ಕೆಲವು ವಾರ ಕಳೆದ ನಂತರ ಬೆಂಗಳೂರಿಗೆ ಭೇಟಿ ನೀಡಿ ಉಪನಗರ ರೈಲ್ವೆ ಯೋಜನೆ (ಬಿಎಸ್‌ಆರ್‌ಪಿ) ಪರಿಶೀಲಿಸುವುದಾಗಿ ಸಚಿವರು ತಿಳಿಸಿದ್ದಾರೆ. ಕಳೆದ ಬಾರಿ ಪರಿಶೀಲಿಸಿದಾಗ K-RIDE ಸಂಸ್ಥೆಯಲ್ಲಿ ತಾಂತ್ರಿಕ ಸಾಮರ್ಥ್ಯದ ಅಗತ್ಯತೆ ಇತ್ತು. ಏಕೆಂದರೆ ಉಪನಗರ ರೈಲು ಯೋಜನೆ ಬಹಳ ಸಂಕೀರ್ಣವಾದ ಯೋಜನೆಯಾಗಿದೆ. ಆದ್ದರಿಂದ ಕೆ-ರೈಡ್ ಒಂದು ಸಂಸ್ಥೆಯಾಗಿ ಹೆಚ್ಚಿನ ತಾಂತ್ರಿಕ ಸಾಮರ್ಥ್ಯದ ಅಗತ್ಯವಿದೆ. ಅದನ್ನೇ ನಾವು ಕಳೆದ ಬಾರಿ ಪರಿಶೀಲಿಸಿದ್ದೇವೆ ಎಂದು ವೈಷ್ಣವ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.
ಉಪ ನಗರ ರೈಲು ಯೋಜನೆಯಲ್ಲಿ ರಾಜ್ಯ ಸರ್ಕಾರ ಶೇ.51 ರಷ್ಟು ಪಾಲು ಹೊಂದಿದೆ. ಹೀಗಾಗಿ ಎಲ್ಲವೂ ಸರಾಗವಾಗಿ ನಡೆಯಲು ಕೇಂದ್ರವು ರಾಜ್ಯ ಸರ್ಕಾರದೊಂದಿಗೆ ಕೆಲಸ ಮಾಡಬೇಕು. ಇದು ಕೇವಲ ಏಕಪಕ್ಷೀಯವಲ್ಲ, ಇದು ರಾಜ್ಯ ಮತ್ತು ಕೇಂದ್ರ ಸಹಭಾಗಿತ್ವದ ಯೋಜನೆಯಾಗಿದ್ದು, ರಾಜ್ಯವು ಶೇ. 51 ರಷ್ಟು ನಿಯಂತ್ರಣವನ್ನು ಹೊಂದಿದೆ. ಕಳೆದ ಬಾರಿ ಬೆಂಗಳೂರಿಗೆ ಭೇಟಿ ನೀಡಿದ್ದಾಗ ತಾಂತ್ರಿಕ ಸಾಮರ್ಥ್ಯ ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೆ ಎಂದು ಸಚಿವರು ಹೇಳಿದರು.
ಮುಂಬೈನಿಂದ ಅಹಮದಾಬಾದ್‌ಗೆ ಬುಲೆಟ್ ರೈಲು ಯೋಜನೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕಾಮಗಾರಿ ಪ್ರಗತಿಯು ಉತ್ತಮವಾಗಿದೆ. ಈಗಾಗಲೇ 327 ಕಿಲೋಮೀಟರ್ ಉದ್ದದ ಮೇಲ್ಸುತುವೆ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಾಯೋಗಿಕವಾಗಿ ಅತ್ಯಂತ ವೇಗವಾಗಿ ಸಾಗುತ್ತಿದೆ. ಸಮುದ್ರದೊಳಗಿನ ಸುರಂಗ ಕಾಮಗಾರಿಯೂ ಆರಂಭವಾಗಿದೆ. ಮೊದಲ ವಿಭಾಗವು 2026 ರಲ್ಲಿ ಪ್ರಾರಂಭವಾಗಬೇಕಿದೆ ಎಂದು ಸಚಿವರು ತಿಳಿಸಿದರು.
Be the first to comment