ಯಾವುದೇ ಪತ್ರ ಬರೆದಿಲ್ಲ ಎಂದು ಸಿಎಂ ಘಂಟಾಘೋಷವಾಗಿ ಹೇಳಿದ್ದರು. ಆದರೆ ಇದಕ್ಕೆ ವ್ಯತಿರಿಕ್ತವಾಗಿರುವಂತೆ ದಾಖಲೆ ಹೊರಬರಲಾರಂಭಿಸಿವೆ.
2014ರಲ್ಲಿ ಸಿದ್ದರಾಮಯ್ಯ ಪತ್ನಿ ಮುಡಾಗೆ ಮನವಿ ಸಲ್ಲಿಸಿ, ನನ್ನ ಜಮೀನಿನಲ್ಲಿ ಮುಡಾ ನಿವೇಶನ ಮಾಡಿ ಹಂಚಿದೆ. ಇದಕ್ಕೆ ಪರಿಹಾರ ನೀಡುವಂತೆ ಕೋರಿದ್ದರು. ಈ ವೇಳೆ ಮಾರುಕಟ್ಟೆ ದರ ಅಥವಾ 40:60 ಅನುಪಾತದಲ್ಲಿ ಪರಿಹಾರ ನೀಡಲು ಮುಡಾ ನಿರ್ಧರಿಸಿತ್ತು. ಇದಕ್ಕೆ ಪಾರ್ವತಿಯವರು ಬದಲಿ ಜಮೀನಿನನ್ನೇ ಕೊಡಬೇಕೆಂದು ಒತ್ತಾಯಿಸಿದ್ದರು. ಈ ಕುರಿತು ಸಭೆಯ ನಡಾವಳಿಯಲ್ಲಿ ನಮೂದಾಗಿದೆ. ಈ ಹಿಂದೆ ಮುಡಾಗೆ ಪತ್ನಿ ಪತ್ರವನ್ನೇ ಬರೆದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬಹಿರಂಗವಾಗಿಯೇ ತಿಳಿಸಿದ್ದರು. ಆದರೆ ಪತ್ನಿ ಮುಡಾಗೆ ಪತ್ರ ಬರೆದ ಬಗ್ಗೆ ರಾಜ್ಯಪಾಲರಿಗೆ ನೀಡಿದ ಉತ್ತರದಲ್ಲಿ ಸಿಎಂ ಉಲ್ಲೇಖಿಸಿದ್ದರು.
ಇನ್ನೊಂದು ಮುಡಾದ ತಿಳಿವಳಿಕೆ ಪತ್ರದಲ್ಲಿ, ಪಾರ್ವತಿಯವರ ಕೋರಿಕೆ ಪತ್ರದ ಬಗ್ಗೆ ಉಲ್ಲೇಖಿಸಿ, 50:50 ಅನುಪಾತದಲ್ಲಿ ನಿವೇಶನ ಕೊಡಬೇಕೆಂಬ ಕೋರಿಕೆಯ ಕುರಿತು ಪ್ರಸ್ತಾಪಿಸಿ, 3.16 ಎಕರೆ ಜಮೀನಿಗೆ ಸಂಬಂಧಿಸಿದ ಹಕ್ಕು ದಾಖಲಾತಿಗಳನ್ನು ಹಾಜರುಪಡಿಸಿ ಮೂರು ದಿನದೊಳಗೆ ಪರಿತ್ಯಾಜನಾ ಪತ್ರ ಮಾಡಿಸಿಕೊಡುವಂತೆ ಹಾಗೂ ಮೂಲ ದಾಖಲಾತಿಗಳನ್ನು ಹಾಜರುಪಡಿಸಿ ಪ್ರಾಧಿಕಾರದ ಸುಪರ್ದಿಗೆ ಸಲ್ಲಿಸುವಂತೆ ಮುಡಾ ವಿಶೇಷ ಭೂಸ್ವಾಧೀನಾಧಿಕಾರಿ ಪಾರ್ವತಿಯವರಿಗೆ ಸೂಚಿಸಿದ್ದರು.
ಇದೇ ರೀತಿ ಮುಡಾ ನಡಾವಳಿಯ ಇನ್ನೊಂದು ಕಂತಿನ ದಾಖಲೆ ಇಷ್ಟರಲ್ಲೇ ಬಿಡುಗಡೆಯಾಗಲಿದೆ. ಈಗಾಗಲೇ ವೈಟ್ನರ್ ಬಳಕೆ ಮಾಡಿದ ದಾಖಲೆ ಹರಿದಾಡುತ್ತಿದ್ದು ಮತ್ತೊಂದು ದಾಖಲೆಯಲ್ಲಿ ಮೃತ ವ್ಯಕ್ತಿ ಹೆಸರಿನಲ್ಲಿ ಭೂಸ್ವಾಧೀನ ಮಾಡಿರುವುದಕ್ಕೆ ಸಂಬಂಧಿಸಿದ ದಾಖಲೆ ಬಹಿರಂಗವಾಗಿದೆ. ಇನ್ನು ಇದೇ ವಿಚಾರ ಇಟ್ಟುಕೊಂಡು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿ, ಮಾರುಕಟ್ಟೆ ದರದಲ್ಲಿ ಜಮೀನಿನ ಪರಿಹಾರ ಅಥವಾ 40:60ರ ಅನುಪಾತದಲ್ಲಿ ನಿವೇಶನ ನೀಡುವ ಮುಡಾ ಪ್ರಸ್ತಾವನೆಯನ್ನು ನಿರಾಕರಿಸಿ 50:50ರ ಅನುಪಾತದಲ್ಲಿಯೇ ಬದಲಿ ನಿವೇಶನ ನೀಡಲೇಬೇಕು ಎಂದು ಸಿಎಂ ಸಾಹೇಬರ ಧರ್ಮಪತ್ನಿ ‘ಒತ್ತಾಯ’ ಮಾಡಿದ್ದಾರೆ ಎಂದು ಕುಟುಕಿದ್ದಾರೆ.
ಬಿಜೆಪಿ ಕೂಡ ಟೀಕಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ನಾನು ಮುಡಾಕ್ಕೆ ಸೈಟು ಕೊಡಿ ಎಂದು ಪತ್ರವೇ ಬರೆದಿಲ್ಲ, ನನ್ನ ಶ್ರೀಮತಿ ಕೂಡ ಪತ್ರ ಬರೆದಿಲ್ಲ ಎಂದಿದ್ದ ಸಿಎಂ ಅವರೇ, ನಿಮ್ಮ ಹೆಸರನ್ನು ಸುಳ್ಳುರಾಮಯ್ಯ ಎಂದು ಬದಲಾಯಿಸಿಕೊಳ್ಳಿ. ನೀವು ಕಟ್ಟಿರುವ ಕಪ್ಪು ಚುಕ್ಕೆಗಳ ಸುಳ್ಳಿನ ಮಹಲು ಸಂಪೂರ್ಣ ಕುಸಿಯುವ ಮುನ್ನ ಗೌರವಯುತವಾಗಿ ರಾಜೀನಾಮೆ ನೀಡಿ ಎಂದು ಬಿಜೆಪಿ ಚಾಟಿ ಬೀಸಿದೆ.ಕುಮಾರಸ್ವಾಮಿ ಅವರು ಎಕ್ಸ್ ಖಾತೆಯಲ್ಲಿ ಎತ್ತಿರುವ ಪ್ರಶ್ನೆಗಳಿಗೆ ಅನೇಕ ನೆಟ್ಟಿಗರು ಟೀಕೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಸರ್ಕಾರ ಅಸ್ಥಿರಕ್ಕೆ ದೇವೇಗೌಡ, ಎಚ್ಡಿಕೆ ಯತ್ನ: ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾತು ಕೊಟ್ಟಿರುವ ಬಗ್ಗೆ ಸಿಎಲ್ಪಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಾಹಿತಿ ನೀಡಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಅವರಿಗೆ ನಿಖರವಾದ ಮಾಹಿತಿ ಇರುವುದರಿಂದಲೇ ಸಿಎಲ್ಪಿಯಲ್ಲಿ ಹೇಳಿದ್ದಾರೆ. ನಮ್ಮ ಎಚ್ಚರಿಕೆಯಲ್ಲಿ ಇರಬೇಕೆಂಬ ಸೂಚನೆ ನೀಡಿದ್ದಾರೆ ಎಂದರು. ದೇವೇಗೌಡ, ಕುಮಾರಸ್ವಾಮಿ ಅವರು ಷಾ ಅವರಿಗೆ ಸರ್ಕಾರ ಬೀಳಿಸುವ ಮಾತು ಕೊಟ್ಟಿರಬಹುದು. ಆದ್ದರಿಂದಲೇ ಕಳೆದ ಹಲವು ತಿಂಗಳಿನಿಂದ ಇಂತಹ ಪ್ರಯತ್ನಗಳು ನಡೆಯುತ್ತಿವೆ. ಹಿಂದೆಯೂ ಸಿಎಂ ಇದರ ಬಗ್ಗೆ ತಿಳಿಸಿದ್ದರು. ಯಾರು ಎಷ್ಟೇ ಪ್ರಯತ್ನ ಮಾಡಿದರೂ ಇನ್ನೂ ನಾಲ್ಕು ವರ್ಷ ಈ ಸರ್ಕಾರವನ್ನು ಬೀಳಿಸಲು ಸಾಧ್ಯವಾಗುವುದಿಲ್ಲವೆಂದರು.
ಎಚ್ಡಿಕೆ ಪ್ರಶ್ನೆಗಳು
ಸಿದ್ದರಾಮಯ್ಯನವರೇ ಈಗ ಹೇಳಿ, ಯಾರ ತಟ್ಟೆಯಲ್ಲಿ ಏನು ಸತ್ತು ಬಿದ್ದಿದೆ? ಅಥವಾ ಕಪ್ಪುಚುಕ್ಕೆಯನ್ನು ವೈಟ್ನರ್ ನುಂಗಿತ್ತಾ..?
ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ
ಸಿದ್ದರಾಮಯ್ಯ ಪತ್ನಿ ಹೆಸರಿನಲ್ಲಿ ಕಾನೂನು ಬಾಹಿರವಾಗಿ 14 ನಿವೇಶನ ಪಡೆದಿದ್ದಾರೆ. ಆದರೆ, ಇದು 14 ನಿವೇಶನಕ್ಕೆ ಸೀಮಿತವಾದುದಲ್ಲ, ಐದು ಸಾವಿರ ಕೋಟಿ ರೂ. ಹಗರಣ.ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ.
Be the first to comment