ಕಲಬುರ್ಗಿ, ಆ. 20: ಈ ದೇಶದ ಯುವಕರಿಗೆ 18 ವರ್ಷಕ್ಕೆ ಮತದಾನದ ಹಕ್ಕು, ಟೆಲಿಫೋನ್, ಐಟಿ, ಬಿಟಿ ಕ್ರಾಂತಿ ಸೇರಿದಂತೆ ಅನೇಕ ಕ್ರಾಂತಿಗಳನ್ನು ಮಾಡಿದ ಬದಲಾವಣೆಯ ಹರಿಕಾರ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು. ಈ ದೇಶದ ಯುವಕರ ಸ್ಪೂರ್ತಿ ಇವರು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.
ಕಲಬುರ್ಗಿಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ನಡೆದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “18 ವರ್ಷಕ್ಕೆ ಯುವಕರಿಗೆ ಬಂದೂಕು ನೀಡಿ ಈ ದೇಶ ಕಾಯುವಂತಹ ದೊಡ್ಡ ಕರ್ತವ್ಯವನ್ನು ಸೈನ್ಯದಲ್ಲಿ ನೀಡುತ್ತೇವೆ. ದೇಶ ಕಾಯುವ ವಯಸ್ಸಿನ ಯುವಕರಿಗೆ ಮತದಾನದ ಹಕ್ಕನ್ನು ಏಕೆ ನೀಡಬಾರದು ಎಂದು 21 ವರ್ಷಕ್ಕೆ ಇದ್ದ ಮತದಾನದ ಹಕ್ಕನ್ನು 18 ವರ್ಷಕ್ಕೆ ಕಡಿಮೆ ಮಾಡಿದರು” ಎಂದು ಅಭಿಪ್ರಾಯಪಟ್ಟರು.
“ಈ ಹಿಂದೆ ಅಪರೂಪಕ್ಕೆ ಜನರ ಬಳಿ ಫೋನ್ ಇರುತ್ತಿತ್ತು. ಮನೆಗೆ ಫೋನ್ ಸಂಪರ್ಕ ಬೇಕು ಎಂದರೆ ಸಂಸದರಿಂದ ಶಿಫಾರಸ್ಸು ಮಾಡಿಸಬೇಕಿತ್ತು. 10- 15 ವರ್ಷಗಳ ಕಾಲ ಕಾಯಬೇಕಿತ್ತು. ಯಾರಿಗಾದರೂ ಕರೆ ಮಾಡಲು ಗಂಟೆಗಟ್ಟಲೆ ಕಾಯಬೇಕಿತ್ತು. ಇಂದು ನಮ್ಮೆಲ್ಲರ ಜೀವನ ಫೋನ್ ಇಲ್ಲದೇ ನಡೆಯುವುದೇ ಇಲ್ಲದಂತಾಗಿದೆ. ಈ ಕಾರಣಕ್ಕೆ ಅವರನ್ನು ಸ್ಮರಿಸಬೇಕು” ಎಂದರು.
*ಲಕ್ಷಾಂತರ ನಾಯಕರು ಬೆಳೆಯಲು ರಾಜೀವ್ ಗಾಂಧಿ ಕಾರಣ*
“ಪಂಚಾಯತ್ ರಾಜ್ ವ್ಯವಸ್ಥೆಗೆ 73, 74 ನೇ ತಿದ್ದುಪಡಿ ಪಂಚಾಯಿತಿ ಮಟ್ಟದಿಂದ ಪಾರ್ಲಿಮೆಂಟ್ ವರೆಗೆ ನಾಯಕರು ಬೆಳೆಯಲು ರಾಜೀವ್ ಗಾಂಧಿ ಕಾರಣರಾದರು. ನಾನು, ಶರಣ ಪ್ರಕಾಶ್ ಪಾಟೀಲರು, ಅಲ್ಲಮಫ್ರಭು ಅವರು ನಾವೆಲ್ಲಾ ಜಿಲ್ಲಾ ಪಂಚಾಯತ್ ಸದಸ್ಯರಾಗಿ ರಾಜಕೀಯಕ್ಕೆ ಬಂದವರು. ಈಗ ನಾನು ಡಿಸಿಎಂ ಆಗಿದ್ದೇನೆ, ಶರಣ ಪ್ರಕಾಶ್ ಪಾಟೀಲರು ಮಂತ್ರಿಯಾಗಿದ್ದಾರೆ. ಬಿ.ಡಿ.ಜತ್ತಿ ಅವರು ಪಂಚಾಯತ್ ಅಧ್ಯಕ್ಷರಾಗಿ ಉಪರಾಷ್ಟ್ರಪತಿಗಳಾದರು, ಸಿದ್ದರಾಮಯ್ಯ ಅವರು ತಾಲ್ಲೂಕು ಬೋರ್ಡ್ ಸದಸ್ಯರಾಗಿ ಈಗ ಮುಖ್ಯಮಂತ್ರಿಯಾಗಿದ್ದಾರೆ. ಹೀಗೆ ಲಕ್ಷಾಂತರ ನಾಯಕರು ಬೆಳೆಯಲು ರಾಜೀವ್ ಗಾಂಧಿ ಕಾರಣ” ಎಂದರು.
“ಈ ದೇಶದ ಬಡವರಿಗೆ ನೂರಾರು ಕಾರ್ಯಕ್ರಮಗಳನ್ನು ನೀಡಿದವರು. ಉಳುವವನೆ ಭೂಮಿಯ ಒಡೆಯ, ಪಿಂಚಣಿ ವ್ಯವಸ್ಥೆ, ಅಂಗನವಾಡಿಗಳು, ಜನತಾ ಮನೆಗಳು, ಖಾಸಗಿಯವರ ಬಳಿ ಹಣ ಪಡೆದು ಬಡ್ಡಿ ಕಟ್ಟಲು ಪರದಾಡುತ್ತಿದ್ದವರ ರಕ್ಷಣೆಗೆ ಬ್ಯಾಂಕ್ ಗಳ ರಾಷ್ಟ್ರೀಕರಣ ಕಾರ್ಯಕ್ರಮ ಸೇರಿದಂತೆ ಅನೇಕ ಯೋಜನೆಗಳನ್ನು ದೇಶಕ್ಕೆ ನೀಡಿದವರು ಇಂದಿರಾ ಗಾಂಧಿ. ಈ ದೇಶದ ಐಕ್ಯತೆ, ಸಮಗ್ರತೆಗೆ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಧೀಮಂತ ನಾಯಕಿ ಇಂದಿರಾ ಗಾಂದಿ ಅವರ ಪುತ್ರ ರಾಜೀವ್ ಗಾಂಧಿ ಅವರು” ಎಂದು ಹೇಳಿದರು.
“ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿದ್ದಾಗ ಉಳುವವನೆ ಭೂಮಿಯ ಒಡೆಯ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತಂದರು. ಆಗ ಮಲ್ಲಿಕಾರ್ಜುನ ಖರ್ಗೆ ಅವರು ಸಂಪುಟದಲ್ಲಿ ಸಚಿವರಾಗಿದ್ದರು. ಬಡವರಿಗೆ ಭೂಮಿಯನ್ನು ಸಮಾನವಾಗಿ ಹಂಚುವ ಕೆಲಸಕ್ಕೆ ಮುನ್ನುಡಿ ಬರೆದವರು” ಎಂದರು.
*ಮಹಾತ್ಮ ಗಾಂಧಿ ಅವರು ಕುಳಿತ ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಕುಳಿತಿದ್ದಾರೆ*
“ಕಲ್ಯಾಣ ಕರ್ನಾಟಕ ಭಾಗದ ಜನರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಐವತ್ತು ವರ್ಷಗಳ ಕಾಲ ಬೆಳೆಸಿದ್ದೀರಿ. ಈ ಭಾಗದ ಜನರಿಗೆ 371 ಜೆ ಜಾರಿಗೆ ತಂದು ಹಿಂದುಳಿದಿದ್ದ ಈ ಪ್ರದೇಶದ ಜನರನ್ನು ವಿಶೇಷ ಸ್ಥಾನದಲ್ಲಿ ಕೂರಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಮಹಾತ್ಮ ಗಾಂಧಿ, ಇಂದಿರಾಗಾಂಧಿ, ಸೋನಿಯಾ ಗಾಂಧಿ ಅವರು ಕುಳಿತಿದ್ದ ಜಾಗದಲ್ಲಿ ಎಐಸಿಸಿ ಅಧ್ಯಕ್ಷರಾಗಿ ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಇದೇ ಈ ಭೂಮಿಯ ಶಕ್ತಿ” ಎಂದು ಹೇಳಿದರು.
“ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದಾರೆ. ಮಹಾತ್ಮ ಗಾಂಧಿ ಅವರ, ನೆಹರು ಅವರ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ನೀಡಿದ ಕೊಡುಗೆಗಳ ಇತಿಹಾಸ ಮರೆಯಬಾರದು. ಈ ನೆಲಕ್ಕೆ 371 ಜೆ ನೀಡಿದ ಮಲ್ಲಿಕಾರ್ಜುನ ಖರ್ಗೆ ಅವರ ಹೋರಾಟವನ್ನು ಜನ ಮರೆಯದೆ ಸ್ಮರಿಸಬೇಕು” ಎಂದು ಹೇಳಿದರು.
“ಗೃಹಜ್ಯೋತಿ ಉದ್ಘಾಟನೆ ಮಾಡಲು ಕಲಬುರ್ಗಿಗೆ ಬಂದಿದ್ದೆವು. ಇದನ್ನು ಆಗ ಬಿಜೆಪಿಯವರು ಟೀಕೆ ಮಾಡಿದರು. ಅವರ ಸರ್ಕಾರ ಇದ್ದಾಗ ಏಕೆ ಇಂತಹ ಕಾರ್ಯಕ್ರಮ ನೀಡಲಿಲ್ಲ. ಗ್ಯಾರಂಟಿ ಯೋಜನೆಯಲ್ಲಿ ಜಾತಿ, ಧರ್ಮ, ಪಕ್ಷಬೇಧವಿಲ್ಲದೆ ನೀಡಿದ್ದೇವೆ. ಬದುಕಿನ ಮೇಲೆ ರಾಜಕಾರಣ ಮಾಡಿದ್ದೇವೆ. ದೇವರು ಇರಬೇಕು ಆದರೆ ಮೊದಲು ಹೊಟ್ಟೆ ತುಂಬಬೇಕು. ಈ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ” ಎಂದು ತಿಳಿಸಿದರು.
ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ
ಈ ದೇಶದ ಅಭಿವೃದ್ದಿ ಸಾಧ್ಯವಾಗಿರುವುದು ಕಾಂಗ್ರೆಸ್ ಪಕ್ಷದಿಂದ. ಬೆಂಗಳೂರಿನಲ್ಲಿ ಸಿಗುವ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಕಲಬುರ್ಗಿಯಲ್ಲೂ ದೊರೆಯುವಂತೆ ಸಚಿವರಾದ ಶರಣ ಪ್ರಕಾಶ ಪಾಟೀಲರು ಮಾಡಿದ್ದಾರೆ. ಹೈದರಾಬಾದ್, ಬೆಂಗಳೂರಿಗೆ ಹೋಗುವುದನ್ನು ತಪ್ಪಿಸಲು 371 ಹಾಸಿಗೆಗಳು ಇರುವ ಜಯದೇವ ಆಸ್ಪತ್ರೆ ಕಟ್ಟಿಸಿದ್ದಾರೆ. ಇಂತಹ ವ್ಯವಸ್ಥೆ ಕನಕಪುರ, ಮೈಸೂರಿನಲ್ಲಿಯೂ ಇಲ್ಲ. ಆರೋಗ್ಯ ಕ್ಷೇತ್ರದಲ್ಲಿ ಈ ಭಾಗದಲ್ಲಿ ಕ್ರಾಂತಿಯಾಗಲಿದೆ” ಎಂದರು.
“ಈ ಭಾಗದ ಜನರಿಗೆ ಸರ್ಕಾರಿ ಕೆಲಸದಲ್ಲಿ ಮೀಸಲಾತಿ ನೀಡಲಾಗಿದೆ. ನಮಗೆ ಈ ವ್ಯವಸ್ಥೆಯಿಲ್ಲ. ಕಲ್ಯಾಣ ಕರ್ನಾಟಕ ಮೀಸಲಾತಿ ಕಾರಣಕ್ಕೆ ನೀವು ಮುಂದಿದ್ದೀರಿ ನಾವು ನಿಮ್ಮ ಹಿಂದಿದ್ದೇವೆ. ಈಗ ನೀವು ಏನೇ ಕೊಟ್ಟರು ಪ್ರಸಾದ ಎಂದು ನಿಮ್ಮ ಬಳಿ ಪಡೆದುಕೊಳ್ಳುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ನಾವು ಅಸೂಯೆಪಡುತ್ತಿಲ್ಲ. ಬದಲಾಗಿ ನಮಗಿಂತ ಮುಂದಿರುವ ನಿಮ್ಮನ್ನು ನೋಡಿ ಸಂತೋಷ ಪಡುತ್ತಿದ್ದೇವೆ” ಎಂದರು.
“ಜನರ ಬದುಕಿನಲ್ಲಿ ದೊಡ್ಡ ಬದಲಾವಣೆ ತಂದ ರಾಜೀವ್ ಗಾಂಧಿ ಅವರ, ದೇವರಾಜ ಅರಸು ಅವರ ಹಾಗೂ ಸಾಮಾಜಿಕ ಬದಲಾವಣೆಯ ಹರಿಕಾರ ನಾರಾಯಣ ಗುರುಗಳ ಜನ್ಮದಿನವನ್ನು ರಾಜ್ಯಕ್ಕೆ ಅತ್ಯುತ್ತಮ ನಾಯಕರನ್ನು ನೀಡಿದ, ಕಲಬುರ್ಗಿಯ ನೆಲದಲ್ಲಿ ಆಚರಿಸಬೇಕು ಎಂದು ಬೆಂಗಳೂರಿನಲ್ಲಿ ಇದ್ದ ಕಾರ್ಯಕ್ರಮ ಬಿಟ್ಟು ಇಷ್ಟು ದೂರ ಬಂದಿದ್ದೇನೆ.
ನಿಮ್ಮ ನಡುವೆ ನಮ್ಮ ಆಚಾರ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವುದು ನನ್ನ ಭಾಗ್ಯ. ದೊಡ್ಡ ನಾಯಕರನ್ನು ನೀಡಿದ ಈ ನೆಲದ ಜನರಿಗೆ ನನ್ನ ಕೃತಜ್ಞತೆಗಳು” ಎಂದು ಸಂತಸ ವ್ಯಕ್ತಪಡಿಸಿದರು.
Be the first to comment