ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಶನ್ ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಖಂಡಿಸುವ ನಿರ್ಣಯವನ್ನು ಸಚಿವ ಸಂಪುಟ ಸಭೆ ತೆಗೆದುಕೊಂಡಿದೆ.
ರಾಜ್ಯಪಾಲರ ನಿರ್ಧಾರ ಕಾನೂನು ವಿರುದ್ಧ, ಸಂವಿಧಾನ ಬಾಹಿರ, ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ನಡೆಯಾಗಿದೆ. ಇವರು ಮಾಡಿರುವ ತೀರ್ಮಾನ ಸರಿ ಇಲ್ಲ ಎಂದು ಸಚಿವ ಸಂಪುಟ ಸಭೆಯು ತೀರ್ಮಾನ ಮಾಡಿದೆ.
ಇಡೀ ಸರ್ಕಾರ ಹಾಗೂ ಪಕ್ಷ ಮುಖ್ಯಮಂತ್ರಿಗಳ ಪರವಾಗಿ ನಿಲ್ಲುತ್ತದೆ. ಯಾವುದೇ ಕಾರಣಕ್ಕೂ ಯಾವುದೇ ಒತ್ತಡಕ್ಕೆ ಒಳಗಾಗಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವುದಿಲ್ಲ. ಎಐಸಿಸಿ ಹಾಗೂ ಕೊನೆಯ ಹಂತದ ಕಾರ್ಯಕರ್ತರು ಸಿದ್ದರಾಮಯ್ಯ ಅವರ ಜೊತೆ ಇರುತ್ತದೆ.
ರಾಜ್ಯಪಾಲರು ಕಾನೂನು ಬದ್ಧವಾಗಿ ನಡೆದುಕೊಂಡಿಲ್ಲ. ಭ್ರಷ್ಟಾಚಾರ ವಿರೋಧಿ ಕಾಯ್ದೆಯ 17 ಎ ಸೆಕ್ಷನ್ ಪ್ರಕಾರ ಅವರು ಕ್ರಮ ವಹಿಸಿಲ್ಲ. ಆರ್ಟಿಕಲ್ 163 ಪ್ರಕಾರ ಸರ್ಕಾರ ನೀಡಿದ ಸಲಹೆ ಹಾಗೂ ಇತರೆ ನ್ಯಾಯಾಲಯಗಳ ತೀರ್ಪನ್ನು ಕೂಡ ಅವರ ಗಮನಕ್ಕೆ ತರಲಾಗಿತ್ತು ಅದನ್ನು ಸಹ ಅವರು ಪರಿಗಣಿಸಿಲ್ಲ. ಕಾನೂನು ಬಾಹಿರವಾದ ರಾಜ್ಯಪಾಲರ ತೀರ್ಮಾನವನ್ನು ಕೇಂದ್ರ ಸರ್ಕಾರವು ರಾಜ್ಯಪಾಲರ ಮೂಲಕ ಸರ್ಕಾರವನ್ನು ಬೀಳಿಸುವ ಈ ಯತ್ನವನ್ನು ನಾವು ಖಂಡೀಸುತ್ತೇವೆ.ತುಂಗ ಭದ್ರಾ ಅಣೆಕಟ್ಟಿನಲ್ಲಿ 35 ಟಿಎಂಸಿ ನೀರು ನಷ್ಟ
ತುಂಗಭದ್ರಾ ಅಣೆಕಟ್ಟಿನ 19 ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಕಟ್ ಆಗಿ ಆತಂಕ ಸೃಷ್ಟಿಯಾಗಿತ್ತು. ಇದರಿಂದ 35 ಟಿಎಂಸಿಯಷ್ಟು ನೀರು ಕರ್ನಾಟಕಕ್ಕೆ ನಷ್ಟವಾಗಿದೆ. ಈ ಘಟನೆ ನಡೆದ ನಂತರ ತಕ್ಷಣ ಅಧಿಕಾರಿಗಳು ಎಚ್ಚೆತ್ತುಕೊಂಡರು.
ಅಣೆಕಟ್ಟು ಕೇಂದ್ರ ಸರ್ಕಾರದ ವಶದಲ್ಲಿ ಇದ್ದರೂ ಸಹ ನಮ್ಮ ಬಳಿಯೂ ನಕ್ಷೆಯಿತ್ತು. ಇದನ್ನು ತಂತ್ರಜ್ಞರಾದ ಕನ್ನಯ್ಯ ನಾಯ್ಡು ಅವರನ್ನು ಸಂಪರ್ಕಿಸಿ ಗೇಟ್ ಅನ್ನು ಮತ್ತೆ ನಿರ್ಮಿಸಿ ಅಳವಡಿಸುವ ಕೆಲಸ ಮಾಡಲಾಯಿತು. ಜಿಂದಾಲ್, ನಾರಾಯಣ ಇಂಜಿನಿಯರಿಂಗ್ ಮತ್ತು ಹಿಂದುಸ್ಥಾನ್ ಇಂಜಿನಿಯರಿಂಗ್ ಕಂಪನಿ ಅವರು ಸೇರಿ ಕೆಲಸ ಮಾಡಿದರು.
ಪ್ರಸ್ತುತ ಸ್ಟಾಪ್ ಗೇಟ್ ಗಳನ್ನು ಅಳವಡಿಸಲಾಗಿದೆ. ಭಾರಿ ಪ್ರಮಾಣದಲ್ಲಿ ನೀರು ಹೊರಗೆ ಹೋಗುವುದು ನಿಂತಿದೆ. ಅಣೆಕಟ್ಟಿಗೆ ಸುಮಾರು 65 ಸಾವಿರ ಕ್ಯೂಸೆಕ್ಸ್ ನೀರಿನ ಒಳಹರಿವಿದೆ. ಈ ಕೆಲಸದ ಹಿಂದೆ ದುಡಿದ ಎಲ್ಲಾ ಅಧಿಕಾರಿಗಳು ಹಾಗೂ ಜಿಂದಾಲ್, ನಾರಾಯಣ ಇಂಜಿನಿಯರಿಂಗ್ ಮತ್ತು ಹಿಂದುಸ್ಥಾನ್ ಇಂಜಿನಿಯರಿಂಗ್ ಕಂಪನಿ ಮತ್ತು ಸಣ್ಣ ಕಾರ್ಮಿಕರಿಗೆ ಸರ್ಕಾರದ ಪರವಾಗಿ ವಂದನೆಗಳು.
ಇಡೀ ದೇಶವೇ ಏನಾಗಬಹುದು ಎಂದು ಕಾತರದಿಂದ ಕಾಯುತ್ತಿತ್ತು. ಇತರೇ ಅಣೆಕಟ್ಟುಗಳಲ್ಲಿ ರೋಪ್ ಹಾಗೂ ಚೈನ್ ವ್ಯವಸ್ಥೆ ಇರುತ್ತದೆ. ಇದು ಹಳೆಯ ಅಣೆಕಟ್ಟು ಆದ ಕಾರಣಕ್ಕೆ ಈ ರೀತಿಯ ವ್ಯವಸ್ಥೆ ಇರಲಿಲ್ಲ. ಮುಂದಿನ ದಿನಗಳಲ್ಲಿ ಯಾವ ರೀತಿಯ ವ್ಯವಸ್ಥೆ ಮಾಡಬಹುದು ಎಂದು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.
Be the first to comment