ಬೆಂಗಳೂರು ಆಗಸ್ಟ್ 17: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದರಿಂದ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಮುಡಾ ಹಗರಣದಲ್ಲಿ ಸಿಎಂ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿದ್ದು, ಇದರ ವಿರುದ್ಧ ಕೈ ನಾಯಕರು ತಿರುಗಿ ಬಿದ್ದಿದ್ದಾರೆ. ರಾಜ್ಯಪಾಲರು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಅವರ ಮೇಲೆ ಕೇಂದ್ರ ಸರ್ಕಾರದ ಒತ್ತಡವಿದೆ ಎಂದು ಕಾಂಗ್ರೆಸ್ ಸಚಿವರು ಆಕ್ರೋಶ ಹೊರಹಾಕಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ ಅವರು, ‘ಬಿಜೆಪಿ, ಜೆಡಿಎಸ್ ಸೇರಿ ಸಂವಿಧಾನ ಪೀಠದ ದುರುಪಯೋಗ ಮಾಡಿಕೊಂಡಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಮೊದಲಿನಿಂದಲೂ ರಾಜ್ಯಪಾಲರ ಮೇಲೆ ಕೇಂದ್ರ ಸರ್ಕಾರದಿಂದ ಒತ್ತಡ ಇತ್ತು’ ಎಂದು ಕಿಡಿ ಕಾರಿದ್ದಾರೆ
ರಾಜ್ಯಪಾಲರು ಸಂವಿಧಾನ ಪೀಠಿದ ದುರುಪಯೋಗ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹಿರಿಯ ನಾಯಕರ ಜೊತೆ ಕುಳಿತು ಚರ್ಚೆ ಮಾಡ್ತೀವಿ. ಬಿಜೆಪಿ ಜೆಡಿಎಸ್ ಸಂವಿಧಾನ ಪೀಠದ ದುರುಪಯೋಗ ಮಾಡಿಕೊಂಡಿಕೋಮಡು ಸೇಡಿನ ರಾಜಕಾರಣ ಮಾಡುತ್ತಿದೆ. ಇದು ದ್ವೇಷದ ರಾಜಕಾರಣ ಅನ್ನೋದು ಸ್ಪಷ್ಟವಾಗಿದೆ. ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ಪ್ರಶ್ನಿಸಿ ನಾವು ಸೋಮವಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತೇವೆ. ನಾವೆಲ್ಲರೂ ಇದನ್ನು ಕಾನೂನಾತ್ಮಕವಾಗಿ ಎದುರಿಸುತ್ತೇವೆ’ ಎಂದರು.
ಇದೊಂದು ರಾಜಕೀಯ ಷಡ್ಯಂತ್ರ. ರಾಜ್ಯಪಾಲರ ಮೇಲೆ ಒತ್ತಡ ಇದೆ. ಅನಗತ್ಯವಾಗಿ ಈ ರೀತಿ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ಇದು ಬಿಜೆಪಿ ಮಾಡಿದ ಷಡ್ಯಂತ್ರ. ಇಂತಹ ಷಡ್ಯಂತ್ರಕ್ಕೆ ನಾವು ಬಗ್ಗಲ್ಲ. ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವ ಪ್ರಶ್ನೆ ಬರಲ್ಲ’ ಎಂದು ಸಚಿವ ಜಮೀರ್ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್, ದಿನೇಶ್ ಗುಂಡೂರಾವ್ ಹಾಗೂ ಡಿಕೆ ಶಿವಕುಮಾರ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
‘ಹಿಂದುಳಿದ ನಾಯಕರಿಗೆ ತೊಂದರೆ ಮಾಡಲು ಈ ಪ್ರಯತ್ನ ನಡೆದಿದೆ. ಸಿದ್ದರಾಮಯ್ಯ ಅವರಿಗೆ ಮಸಿ ಬಡಿಯುವ ಪ್ರಯತ್ನ ಇದಾಗಿದೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರನ್ನು ಸಿಲುಕಿ ಹಾಕುವ ಪ್ರಯತ್ನ ಇದು. ಕೇಂದ್ರ ಸರ್ಕಾರ ಸೇಡಿನ ರಾಜಕೀಯ ಮಾಡಲು ಪ್ರಯತ್ನಿಸಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ’ ಎಂದು ಎಂಎಲ್‌ಸಿ ಬಿಎ ಹರಿಪ್ರಸಾದ್ ಗುಡುಗಿದ್ದಾರೆ.
ಅವರಿಗೆ ನಾವು ತಂದಿರುವ ಯೋಜನೆಗಳನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಿಜೆಪಿ, ಜೆಡಿಎಸ್ ಒಗ್ಗೂಡಿ ಈ ಕುತಂತ್ರ ನಡೆಸಿದೆ. ನಾವು ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಈ ಬಗ್ಗೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತೇವೆ. ಸಿಎಂ ರಾಜೀನಾಮೆ ನೀಡುವ ಪ್ರಶ್ನೆಯೇ ಬರುವುದಿಲ್ಲ’ ಎಂದು ಡಿಸಿಎಂ ಡಿಕೆ ಶಿವಕುಮಾರ್ ಕೆಂಡಾಮಂಡಲರಾದರು.
ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಅವರು ರಾಜ್ಯಪಾಲರಿಗೆ ನೀಡಿರುವ ದೂರಿನ ಆಧಾರ ಮೇಲೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಇಬ್ಬರು ಕಾರ್ಯಕರ್ತರಿಂದ ದೂರುಗಳನ್ನು ಸ್ವೀಕರಿಸಿದ್ದಾರೆ, ಒಂದನ್ನು ಆರ್‌ಟಿಐ ಕಾರ್ಯಕರ್ತ ಟಿಜೆ ಅಬ್ರಹಾಂ ಮತ್ತು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಇತ್ತೀಚೆಗೆ ದೂರನ್ನು ಸಲ್ಲಿಸಿದ್ದಾರೆ.
ಸಿದ್ದರಾಮಯ್ಯನವರು ಎಷ್ಟೇ ಸಮರ್ಥಿಸಿಕೊಂಡರೂ, ಕಾನೂನುಬದ್ಧವಾಗಿಯೇ ಪಡೆದಿದ್ದೇನೆ ಎಂದು ಹೇಳಿದರೂ ಕೂಡ ಮುಡಾದಿಂದ ಅವರ ಪತ್ನಿಗೆ ಹಂಚಿಕೆಯಾದ 14 ನಿವೇಶನಗಳಲ್ಲಿ ಕಾನೂನು ಉಲ್ಲಂಘನೆ ಮಾಡಲಾಗಿದೆ ಎಂದು ಸ್ಪಷ್ಟವಾಗಿದೆ ಎಂದಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಸಿದ್ದರಾಮಯ್ಯನವರು ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ.
Be the first to comment