ತರಾತುರಿಯಲ್ಲಿ ಕೆಎಎಸ್‌ ಪೂರ್ವಭಾವಿ ಪರೀಕ್ಷೆ ನಡೆಸುವ ಉದ್ದೇಶವೇನು?: ಕುಮಾರಸ್ವಾಮಿ

 

ಬೆಂಗಳೂರು: ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗವು, ಇದೇ 27ರ ಮಂಗಳವಾರ ಕೆಲಸದ ದಿನ ನಡೆಸಲು ಉದ್ದೇಶಿಸಿರುವ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಲೇಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಕೆಲಸದ ದಿನ ಪರೀಕ್ಷೆ ನಡೆಸುತ್ತಿರುವುದರಿಂದ ಎಲ್ಲ ಅಭ್ಯರ್ಥಿಗಳಿಗೂ ಪರೀಕ್ಷೆಗೆ ಹಾಜರಾಗಲು ತೊಡಕಾಗುತ್ತದೆ. ಹೀಗಾಗಿ ಪರೀಕ್ಷೆಯನ್ನು ಮುಂದೂಡಿ ಎಂದು ಹಲವು ಆಕಾಂಕ್ಷಿಗಳು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು.

ಪರೀಕ್ಷೆ ಮುಂದೂಡಿ ಎಂದು ಸಾಮಾಜಿಕ ಜಾಲತಾಣಗಳಲ್ಲೂ ‘#postponekas’ ನಡೆಸಲಾಗುತ್ತಿದೆ. ಈಗ ಇದಕ್ಕೆ ಬೆಂಬಲ ಸೂಚಿಸಿ ಕುಮಾರಸ್ವಾಮಿ ಗುರುವಾರ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಆಯೋಗವು ಪರೀಕ್ಷೆ ನಡೆಸಲು ಎಲ್ಲಿಲ್ಲದ ತರಾತುರಿ ತೋರುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಂಗವಿಕಲ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆ ಮುಂದೂಡಿ ಎಂದು ಮನವಿ ಮಾಡಿಕೊಂಡಿದ್ದರೂ ಕೆಪಿಎಸ್‌ಸಿ ಹಟಕ್ಕೆ ಬಿದ್ದಿರುವುದು ಸರಿಯಲ್ಲ’ ಎಂದಿದ್ದಾರೆ.

ಪರೀಕ್ಷೆ ಬರೆಯುವವರನ್ನೇ ಚಿತ್ರಹಿಂಸೆಗೆ ಒಳಪಡಿಸಿ ಕೆಪಿಎಸ್‌ಸಿಯು ಪರೀಕ್ಷೆ ನಡೆಸುವ ಆತುರದ ಹಿಂದಿರುವ ದುರುದ್ದೇಶವಾದರೂ ಏನು’ ಎಂದು ಪ್ರಶ್ನಿಸಿದ್ದಾರೆ. 27ರಂದೇ ನಡೆಸುವುದರಿಂದ ಅನೇಕರಿಗೆ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಖಾಸಗಿ ಕಂಪನಿಗಳಲ್ಲಿ ದುಡಿಯುತ್ತಿರುವವರು, ಅದರಲ್ಲೂ ಅಂಧ ಅಭ್ಯರ್ಥಿಗಳಿಗೆ ಬಹಳ ಸಮಸ್ಯೆಯಾಗಿದೆ. ಕೆಲವರು ದುಡ್ಡು ಮಾಡಿಕೊಳ್ಳುವುದಕ್ಕೆ ಪರೀಕ್ಷೆ ನಡೆಸುತ್ತಿರುವಂತೆ ಕಾಣುತ್ತಿದೆ.

ರಾಜ್ಯ ಸರ್ಕಾರವು ಎಲ್ಲ ಆಯಾಮಗಳನ್ನು ಪರಿಶೀಲಿಸಿ ಎಲ್ಲರಿಗೂ ಅನುಕೂಲ ಆಗುವ ದಿನಾಂಕ ನಿಗದಿಪಡಿಸಲಿ’ ಎಂದು ಆಗ್ರಹಿಸಿದ್ದಾರೆ.

LOGO

Be the first to comment

Leave a Reply

Your email address will not be published.


*