ಭೋಪಾಲ್: ಇದು ಇಂಟರ್ನೆಟ್ ಯುಗ, ಯಾವುದೇ ವಿಷಯಗಳಿರಲಿ, ಅತಿವೇಗವಾಗಿ ಜನರನ್ನು ತಲುಪಿ ಬಿಡುತ್ತವೆ. ಇದೇ ಅನೇಕ ಅವ್ಯವಹಾರಗಳ ಪತ್ತೆಗೆ ಕಾರಣವೂ ಆಗುತ್ತದೆ. ಪೊಲೀಸರಿಗೆ ಸಿಗದಂತಹ ಮಾಹಿತಿಗಳು ಕೆಲವೊಮ್ಮೆ ಸಿಕ್ಕಿ ಬಿಡುತ್ತವೆ. ಅದೇ ರೀತಿಯ ಒಂದು ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ
ಮಹಿಳೆಯೊಬ್ಬಳು ಪಿಸ್ತೂಲ್ಗಳನ್ನು ಪಾತ್ರೆ ತೊಳೆದಂತೆ ಸ್ಕ್ರಬ್ನಿಂದ ತಿಕ್ಕಿ ತೊಳೆದು ಸ್ವಚ್ಛ ಮಾಡಿ ಇಡುತ್ತಿದ್ದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಸೈಬರ್ ಟೀಮ್ ಸಹಾಯ ಪಡೆದ ಮಧ್ಯಪ್ರದೇಶದ ಪೊಲೀಸರು, ಲೊಕೇಷನ್ ಟ್ರೇಸ್ ಮಾಡಿದ್ರು. ವಿಡಿಯೋ ಮಹುವಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಗಣೇಶ್ ಪುರ ಎಂಬಲ್ಲಿ ಈ ವಿಡಿಯೋ ತೆಗೆಯಲಾಗಿದೆ ಎಂಬುದನ್ನು ಅರಿತ ಪೊಲೀಸ್ ಟೀಮ್ ಕೂಡಲೇ ಅಲ್ಲಿ ದಾಳಿಯಿಟ್ಟಾಗ ಗೊತ್ತಾಗಿದ್ದು, ಕಾನೂನು ಬಾಹಿರವಾಗಿ ಶಸ್ತ್ರಾಸ್ತ್ರಗಳ ತಯಾರಿ ನಡೆಯುವ ಫ್ಯಾಕ್ಟರಿಯೊಂದು ಅಲ್ಲಿತ್ತು ಅನ್ನೋದು.
ಯಾವಾಗ ಪೊಲೀಸ್ ವರೆಗೂ ಈ ವಿಡಿಯೋ ತಲುಪಿದೆ ಅನ್ನೋದು ಗೊತ್ತಾಯ್ತೋ, ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ತಯಾರು ಮಾಡುತ್ತಿದ್ದ ಕಾರ್ಖಾನೆಯ ಮಾಲೀಕ ಶಕ್ತಿ ಕಪೂರ್ ಅಲಿಯಾಸ್ ಚೋಟು ಅಲರ್ಟ್ ಆಗಿದ್ದಾನೆ. ಕೂಡಲೇ ತನಗೆ ಸಂಬಂಧಪಟ್ಟ ಎಲ್ಲಾ ವಸ್ತುಗಳನ್ನು ಪ್ಯಾಕ್ ಮಾಡಿಕೊಂಡು ತನ್ನ ತಂದೆ ಜೊತೆ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ. ಶಕ್ತಿ ಕಪೂರ್ ಹಾಗೂ ಆತನ ತಂದೆ ಬಿಹಾರಿಲಾಲ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೊರಟಾಗ ದ್ವಿಚಕ್ರ ವಾಹನದಿಂದ ಬಿದ್ದು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
https://x.com/Rajmajiofficial/status/1822502283092865152
ಪೊಲೀಸರು ನಡೆಸಿದ ದಾಳಿಯಲ್ಲಿ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಗನ್ ತಯಾರಿಸಲು ಬೇಕಾಗುವ ಕಚ್ಚಾವಸ್ತುಗಳು ಜೊತೆ ಜೊತೆಗೆ 315 ಡಬಲ್ ಬ್ಯಾರೆಲ್ ಗನ್ ಹಾಗೂ 315 ಪಿಸ್ತೂಲ್ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಸದ್ಯ ಬಿಹಾರಿಲಾಲ್ ಹಾಗೂ ಶಕ್ತಿಕಪೂರ್ ವಿಚಾರಣೆ ನಡೆಯುತ್ತಿದೆ. ವಿಡಿಯೋದಲ್ಲಿ ಕೇಳಿದ ಧ್ವನಿ ನನ್ನದು ಹಾಗೂ ಪಿಸ್ತೂಲ್ಗಳನ್ನು ತೊಳೆಯುತ್ತಿದ್ದಿದ್ದು ನನ್ನ ಪತ್ನಿ ಎಂದು ಶಕ್ತಿಕಪೂರ್ ಒಪ್ಪಿಕೊಂಡಿದ್ದಾನೆ.
ಈ ಎಲ್ಲಾ ಮಾಹಿತಿಗಳನ್ನು ಕಲೆ ಹಾಕಿರುವ ಪೊಲೀಸರು ಈ ಗನ್ ತಯಾರಿಸಲು ಬೇಕಾಗಿದ್ದ ಕಚ್ಚಾ ವಸ್ತುಗಳನ್ನ ಇಬ್ಬರು ಎಲ್ಲಿಂದ ಖರೀದಿ ಮಾಡುತ್ತಿದ್ದರು ಅನ್ನೊದನ್ನ ಪತ್ತೆಹಚ್ಚಲು ವಿಚಾರಣೆ ತೀವ್ರಗೊಳಿಸಿದ್ದಾರೆ. ಅದು ಮಾತ್ರವಲ್ಲ ಎಷ್ಟು ವರ್ಷದಿಂದ ಈ ಕರಾಳ ದಂಧೆಯಲ್ಲಿ ಈ ತಂದೆ ಮಗ ಇದ್ದರು ಅನ್ನೋದನ್ನ ಕೂಡ ವಿಚಾರಣೆ ಮೂಲಕ ಬಾಯಿಬಿಡಿಸುವುದಾಗಿ ಪೊಲೀಸರು ಹೇಳಿದ್ದಾರೆ.
Be the first to comment