ಮಾತೆ ಮಾಣಿಕೇಶ್ವರಿ ಮಹಾ ಸಮಾಧಿ; ಶೈವ ಧರ್ಮದ ವಿಧಿವಿಧಾನಗಳಂತೆ ಅಂತ್ಯಕ್ರಿಯೆ

ವರದಿ: ಅಮರೇಶ ಕಾಮನಕೇರಿ


ರಾಜ್ಯ ಸುದ್ದಿಗಳು


 

ಅಂತ್ಯಕ್ರಿಯೆಗೆ ಮುಖ್ಯಮಂತ್ರಿ ಬಾರದೇ ಇರುವುದಕ್ಕೆ ಹಲವು ಭಕ್ತರು ಕಣ್ಣೀರು ಹಾಕಿ ಅಸಮಾಧಾನ ವ್ಯಕ್ತಪಡಿಸಿದರು. ಮತ್ತೊಂದೆಡೆ ಮಾತೆ ಮಾಣಿಕೇಶ್ವರಿ ಕುಟುಂಬದ ಸದಸ್ಯರಿಗೆ ಒಳಗಡೆ ಬಿಡದ ಪ್ರಸಂಗವೂ ನಡೆಯಿತು.

 

ಕಲಬುರ್ಗಿ(ಮಾ. 09): ನಡೆದಾಡುವ ದೇವತೆ ಮಾತೆ ಮಾಣಿಕೇಶ್ವರಿ ಮಹಾ ಸಮಾಧಿಯಾಗಿದ್ದಾರೆ. ಕಲಬುರ್ಗಿ ಜಿಲ್ಲೆ ಸೇಡಂ ತಾಲ್ಲೂಕಿನ ಯಾನಾಗುಂದಿಯಲ್ಲಿ ಇಂದು ಮಾತಾಜಿ ಅಂತ್ಯಕ್ರಿಯೆ ನೆರವೇರಿತು. ಸಕಲ ಸರ್ಕಾರಿ ಗೌರವಗಳನ್ನು ಸೂಚಿಸಿದ ನಂತರ ಶೈವ ಧರ್ಮದ ವಿಧಿ ವಿಧಾನಗಳ ಪ್ರಕಾರ ಮಾತೆಯವರು ಧ್ಯಾನ ಮಾಡುತ್ತಿದ್ದ ಗುಹೆಯಲ್ಲಿ ಮಹಾ ಸಮಾಧಿ ಮಾಡಲಾಯಿತು.

Advertisement

ಅಂತ್ಯಕ್ರಿಯೆಗೆ ಮುಖ್ಯಮಂತ್ರಿ ಬರದೇ ಇರುವುದಕ್ಕೆ ಹಲವು ಭಕ್ತರು ಕಣ್ಣೀರು ಹಾಕಿ ಅಸಮಾಧಾನ ವ್ಯಕ್ತಪಡಿಸಿದರು. ಮತ್ತೊಂದೆಡೆ ಮಾತೆ ಮಾಣಿಕೇಶ್ವರಿ ಕುಟುಂಬದ ಸದಸ್ಯರಿಗೆ ಒಳಗಡೆ ಬಿಡದ ಪ್ರಸಂಗವೂ ನಡೆಯಿತು. ಸದಸ್ಯರು ಹೇಳಿದ ನಂತರ ಮಾಣಿಕೇಶ್ವರಿ ಕುಟುಂಬದ ಸದಸ್ಯರನ್ನು ಒಳಗೆ ಬಿಡಲಾಯಿತು.

ಇಂದು ಮಧ್ಯಾಹ್ನ ಒಂದು ಗಂಟೆಯವರೆಗೂ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಲಕ್ಷಾಂತರ ಭಕ್ತರು ಮಾತೆಯ ಪಾರ್ಥೀವ ಶರೀರದ ದರ್ಶನ ಪಡೆದು ಆಶ್ರುತರ್ಪಣ ಸಲ್ಲಿಸಿದರು. ನಂತರ ಪಾರ್ಥಿವ ಶರೀರಕ್ಕೆ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಗೌರವ ಸೂಚಿಸಲಾಯಿತು. ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್, ಪುಷ್ಪ ನಮನ ಸಲ್ಲಿಸಿದರು. ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಜಿಲ್ಲಾಧಿಕಾರಿ ಬಿ.ಶರತ್ ಮತ್ತಿತರರು ಪುಷ್ಪನಮನ ಸಲ್ಲಿಸಿದರು.

Advertisement

ಈ ವೇಳೆ ಮಾತನಾಡಿದ ಸಚಿವ ಪ್ರಭು ಚವ್ಹಾಣ, ಮಾತೆ ಅಗಲಿಕೆಯಿಂದ ಲಕ್ಷಾಂತರ ಭಕ್ತರ ಮನಸ್ಸಿಗೆ ಘಾಸಿಯಾಗಿದೆ. ಅವರ ಅಂತಿಮ ಇಚ್ಚೆಗಳನ್ನು ಪೂರೈಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ನಂತರ ಪಾರ್ಥಿವ ಶರೀರವನ್ನು ಮಹಾ ಮಂದಿರಕ್ಕೆ ತೆಗೆದುಕೊಂಡು ಹೋಗಲಾಯಿತು. ಮಹಾ ಮಂದಿರದ ಸರ್ಪ ಸಿಂಹಾಸನದ ಮೇಲೆ ಪಾರ್ಥೀವ ಶರೀರ ಇಟ್ಟು ರುದ್ರಾಭಿಷೇಕ ಮಾಡಲಾಯಿತು. ವಿವಿಧೆಡೆಯಿಂದ ಬಂದ ಅರ್ಚಕರು ವೇದ ಪಠಣ ಮಾಡಿದರು. ನಂತರ ಮಾಣಿಕೇಶ್ವರಿ ಜಪ ತಪ ಮಾಡುತ್ತಿದ್ದ ಗುಹೆಯಲ್ಲಿ ಮಹಾ ಸಮಾಧಿ ಮಾಡಲಾಯಿತು. ಶೈವ ಧರ್ಮದ ವಿಧಿ ವಿಧಾನಗಳ ಅನ್ವಯ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಮಾಣಿಕೇಶ್ವರಿ ಮಠದ ಟ್ರಸ್ಟ್ ಕಾರ್ಯದರ್ಶಿ ಶಿವಯ್ಯ ಸ್ವಾಮಿ, ಲಕ್ಷ್ಮಣ ಸ್ವಾಮಿ ಮತ್ತು ಮಲ್ಲಿಕಾರ್ಜುನ ಸ್ವಾಮಿ ಅವರಿಂದ ಅಂತಿಮ ವಿಧಿವಿಧಾನಗಳು ನಡೆದವು. ವರ್ಷಕ್ಕೆ ಎರಡು ಬಾರಿ ಸಾರ್ವಜನಿಕರಿಗೆ ದರ್ಶನ ನೀಡುತ್ತಿದ್ದ ಮಾತೆ ಮಾಣಿಕೇಶ್ವರಿ ಮಹಾ ಸಮಾಧಿಯಾದರು. ಮಾತೆಯವರ ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಭಾಗಿಯಾಗದೇ ಇರುವುದಕ್ಕೆ ಅಸಮಾಧಾನ ವ್ಯಕ್ತವಾಯಿತು.

ಬೇರೆ ಸ್ವಾಮೀಜಿಗಳು ಲಿಂಗೈಕ್ಯರಾದ ವೇಳೆ ಮುಖ್ಯಮಂತ್ರಿ ಖುದ್ದು ಭಾಗಿಯಾಗುತ್ತಿದ್ದರು. ಆದರೆ ಮಾತೆ ಅವರ ಅಂತ್ಯಕ್ರಿಯೆಯಲ್ಲಿ ಮಾತ್ರ ಅವರು ಭಾಗಿಯಾಗಿಲ್ಲ ಎಂದು ಕೆಲ ಭಕ್ತರು ಕಣ್ಣೀರು ಹಾಕಿದರು. ಅದಕ್ಕೆ ದನಿಗೂಡಿಸುವ ರೀತಿಯಲ್ಲಿ ಕಾಂಗ್ರೆಸ್ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬರೀ ಒಬ್ಬ ಸಚಿವರು ಮಾತ್ರ ಬಂದಿದಾರೆ. ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಿಎಂ ಅಸಡ್ಡೆ ತೋರಿದ್ದಾರೆ ಎಂದು

ಇದೇ ವೇಳೆ ಮಾತೆ ಮಾಣಿಕೇಶ್ವರಿ ಅವರ ಕುಟುಂಬದ ಸದಸ್ಯರನ್ನು ಒಳಗೆ ಬಿಡದ ಘಟನೆಯೂ ನಡೆದಿದೆ. ಮಾತೆಯ ದರ್ಶನಕ್ಕೆಂದು ಒಳಗೆ ಬರಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆದಿದ್ದಾರೆ. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕುಟುಂಬದ ಸದಸ್ಯರು ತಮ್ಮ ರೂಮಿಗೆ ವಾಪಸ್ ಆಗಿದ್ದರು. ನಂತರ ಮತ್ತೊಮ್ಮೆ ಬಂದಾಗ ಸದಸ್ಯರು ಅವರನ್ನು ಒಳಗೆ ಕರೆದೊಯ್ದು ದರ್ಶನಕ್ಕೆ ವ್ಯವಸ್ಥೆ ಮಾಡಿದರು. ಪೊಲೀಸರು ಮತ್ತು ಟ್ರಸ್ಟ್​ನ ಮುಖಂಡರ ವರ್ತನೆಗೆ ಮಾತೆಯ ಕುಟುಂಬದ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಅಂತಿಮ ದಿನವಾದ ಇಂದು ಮಾತೆ ಮಾಣಿಕೇಶ್ವರಿ ದರ್ಶನಕ್ಕೆ ನೂಕು ನುಗ್ಗಲು ಏರ್ಪಟ್ಟಿತ್ತು. ವಿವಿಧ ರಾಜ್ಯಗಳಿಂದ ಲಕ್ಷಾಂತರ ಜನ ಆಗಮಿಸಿದ್ದರಿಂದ ಪೊಲೀಸರು ಅವರ ನಿಯಂತ್ರಣಕ್ಕೆ ಹರಸಾಹಸ ಪಡುವಂತಾಯಿತು. ನೂಕುನುಗ್ಗಲಿನಲ್ಲಿ ಓರ್ವ ಮಹಿಳೆಗೆ ಗಾಯಗಳಾಗಿದ್ದು ಅವರಿಗೆ ವೈದ್ಯರು ಚಿಕಿತ್ಸೆ ನೀಡಿದರು. 87 ವರ್ಷದ ಮಾತಾಜಿ ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲಾಗದೆ, ಕಂಬನಿ ಮಿಡಿಯುತ್ತಲೇ ಭಕ್ತರು ತಮ್ಮ ಊರುಗಳಿಗೆ ವಾಪಸ್ಸಾದರು.

Be the first to comment

Leave a Reply

Your email address will not be published.


*