ಬೆಂಗಳೂರು, ಆ.01 ;ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಟಿ.ಜೆ ಅಬ್ರಾಹಂ ಅವರ ದೂರಿನನ್ವಯ ಮಾನ್ಯ ಮುಖ್ಯಮಂತ್ರಿಗಳಿಗೆ ಜುಲೈ 26ರಂದು ನೀಡಿರುವ ಶೋಕಾಸ್ ನೋಟೀಸ್ ಅನ್ನು ಹಿಂಪಡೆಯಬೇಕು ಎಂದು ರಾಜ್ಯ ಸಚಿವ ಸಂಪುಟ ಮಾನ್ಯ ರಾಜ್ಯಪಾಲರಿಗೆ ಸಲಹೆ ನೀಡಲು ತೀರ್ಮಾನಿಸಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಸಚಿವ ಸಂಪುಟ ಸಭೆಯ ತೀರ್ಮಾನದ ಬಗ್ಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, “ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ರಾಜ್ಯಪಾಲರು ನೀಡಿರುವ ಶೋಕಾಸ್ ನೋಟೀಸ್ ವಿಚಾರವಾಗಿ ವಿಸ್ತೃತವಾಗಿ ಚರ್ಚೆ ನಡೆಸಿದ್ದೇವೆ. ಬೇರೆ ರಾಜ್ಯಗಳಲ್ಲಿ ನಡೆದಿರುವ ಪ್ರಕರಣ, ಇತರೆ ಪ್ರಕರಣಗಳಲ್ಲಿ ನ್ಯಾಯಾಲಯದ ಮಾರ್ಗದರ್ಶನ ಹಾಗೂ ತೀರ್ಪು, ಇಂತಹ ಪರಿಸ್ಥಿತಿಯಲ್ಲಿ ಬೇರೆ ರಾಜ್ಯಗಳಲ್ಲಿ ಯಾವ ಸರ್ಕಾರಗಳು ಯಾವ ರೀತಿ ನಡೆದುಕೊಂಡಿವೆ ಎಂದು ಚರ್ಚೆ ಮಾಡಿದ್ದೇವೆ” ಎಂದು ತಿಳಿಸಿದರು.
ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳಿಂದ ಅಕ್ರಮ ನಡೆದಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಾಗಲಿ, ತನಿಖಾ ಸಂಸ್ಥೆಗಳ ವಿಚಾರಣೆಯಾಗಲಿ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳ ವಿಚಾರಣೆ ನಡೆಸಲು ಹೇಗೆ ಸಾಧ್ಯ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುದೊಡ್ಡ ಬಹುಮತದೊಂದಿಗೆ ಆಯ್ಕೆಯಾದ ರಾಜ್ಯದ ಮುಖ್ಯಮಂತ್ರಿಗಳನ್ನು ಕೆಳಗಿಳಿಸಲು ಷಡ್ಯಂತ್ರ ನಡೆಯುತ್ತಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ” ಎಂದು ಕಿಡಿಕಾರಿದರು.
“ರಾಜ್ಯದ ಜನತೆ 136 ಸೀಟುಗಳನ್ನು ನೀಡಿ ನಮ್ಮ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಟಿ.ಜೆ. ಅಬ್ರಹಾಂ ಎಂಬಾತನ ಹಿನ್ನೆಲೆ ಎಲ್ಲರಿಗೂ ಗೊತ್ತಿದೆ. ಆತ ಯಾರ ವಿರುದ್ಧ ಕೇಸ್ ದಾಖಲಿಸಿದ್ದಾನೆ, ಸುಪ್ರೀಂ ಕೋರ್ಟ್ ಎಷ್ಟು ದಂಡ ವಿಧಿಸಿದೆ ಎಂಬುದು ನಿಮ್ಮೆಲ್ಲರಿಗೂ ಗೊತ್ತಿದೆ. ಆತ ನೀಡಿರುವ ದೂರನ್ನು ಇಟ್ಟುಕೊಂಡು ಘನವೆತ್ತ ರಾಜ್ಯಪಾಲರನ್ನು ಬಳಸಿಕೊಂಡು ಕರ್ನಾಟಕ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ” ಎಂದು ತಿಳಿಸಿದರು.
“ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 5ರಂದು ರಾಜ್ಯಪಾಲರು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿ ಆಧರಿಸಿ ಪ್ರಕರಣದ ಕುರಿತ ವರದಿ ನೀಡುವಂತೆ ರಾಜ್ಯ ಮುಖ್ಯಕಾರ್ಯದರ್ಶಿಗಳಿಗೆ ಕೇಳುತ್ತಾರೆ. ಜುಲೈ 15ರಂದು ರಾಜ್ಯಪಾಲರು ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದು, ‘ಕರ್ನಾಟಕ ರಾಜ್ಯ ರೈತ ಒಕ್ಕೂಟವು ಮುಡಾದಲ್ಲಿ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿದ್ದು, ಈ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಮನವಿ ಸಲ್ಲಿಸಿದ್ದು, ಆದಷ್ಟು ಬೇಗ ವರದಿ ನೀಡುವಂತೆ ಕೇಳಿದ್ದಾರೆ.
ರಾಜ್ಯಪಾಲರ ಪತ್ರವನ್ನು ಗಂಭೀರವಾಗಿ ಪರಿಗಣಿಸಿ ಗೌರವಿಸಬೇಕು ಎಂದು ಮುಖ್ಯಮಂತ್ರಿಗಳು ಈ ಪ್ರಕರಣದ ತನಿಖೆಯನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಎನ್ ದೇಸಾಯಿ ಅವರ ನೇತೃತ್ವದ ಸಮಿತಿ ರಚಿಸಿ ನ್ಯಾಯಾಂಗ ತನಿಖೆಗೆ ಆದೇಶ ನೀಡುತ್ತಾರೆ. ಇದಾದ ನಂತರ ಅಬ್ರಾಹಂ ಅವರು ಜುಲೈ 26ರಂದು ದೂರು ನೀಡುತ್ತಾರೆ. ಅದೇ ದಿನ ಮುಖ್ಯ ಕಾರ್ಯದರ್ಶಿಗಳು ರಾಜ್ಯಪಾಲರಿಗೆ ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ಸಲ್ಲಿಸುತ್ತಾರೆ. ರಾಜ್ಯಪಾಲರು ದೂರು ಹಾಗೂ ಮುಖ್ಯ ಕಾರ್ಯದರ್ಶಿಗಳ ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸುವ ಮುನ್ನವೇ, ಮುಖ್ಯಮಂತ್ರಿಗಳಿಗೆ ಶೋಕಾಸ್ ನೋಟೀಸ್ ನೀಡಿದ್ದಾರೆ” ಎಂದು ತಿಳಿಸಿದರು.
“ಇಷ್ಟು ತರಾತುರಿಯಲ್ಲಿ ಇಂತಹ ತೀರ್ಮಾನ ಮಾಡುತ್ತಿರುವುದೇಕೆ? ನಮ್ಮ ಅನುಭವದ ಪ್ರಕಾರ ಯಾವುದೇ ದೂರು ದಾಖಲಾದರೂ ತನಿಖೆಗೆ ಆದೇಶ ನೀಡುವ ಮುನ್ನ ಆರೋಪ ಸಾಬೀತುಪಡಿಸಲು ಪೂರಕ ಸಾಕ್ಷ್ಯಾಧಾರಗಳು ಬೇಕು. ಅಥವಾ ಯಾವುದಾದರೂ ತನಿಖಾ ಸಂಸ್ಥೆಗಳು ಅನುಮತಿಗೆ ಮನವಿ ನೀಡುತ್ತಾರೆ. ಆದರೆ ಈ ಪ್ರಕರಣದಲ್ಲಿ ತನಿಖೆ ಮಾಡುವ ಮುನ್ನವೇ ಶೋಕಾಸ್ ನೋಟೀಸ್ ನೀಡಲಾಗಿದೆ. ಇದು ಪ್ರಾಜಾಪ್ರಭುತ್ವ ಹಾಗೂ ಸಂವಿಧಾನದ ಕಗ್ಗೊಲೆಯಲ್ಲವೇ?” ಎಂದು ಪ್ರಶ್ನಿಸಿದರು.
“ನಮ್ಮ ಮುಖ್ಯಮಂತ್ರಿಗಳ ಧರ್ಮಪತ್ನಿ ಪಾರ್ವತಿ ಅವರ ಸಹೋದರ ಡಿನೋಟಿಫಿಕೇಷನ್ ಆದ ಐದಾರು ವರ್ಷಗಳ ನಂತರ ಖರೀದಿ ಮಾಡಿ ಅದನ್ನು ತವರು ಮನೆಯ ಅರಿಷಿನ ಕುಂಕುಮದ ಕಾಣಿಕೆಯಾಗಿ ದಾನ ಪತ್ರದ ಮೂಲಕ ನೀಡಿದ್ದಾರೆ. ಈ ಜಮೀನನ್ನು ಮುಡಾ ಮರುನೋಟಿಫಿಕೇಶನ್ ಮಾಡದೇ, ಬಳಸಿಕೊಂಡಿದೆ. ಆ ಮೂಲಕ ಈ ಜಾಗವನ್ನು ಮುಡಾ ಒತ್ತುವರಿ ಮಾಡಿಕೊಂಡಿದೆ. ಆಗ ಪಾರ್ವತಿ ಅವರು ಅಕ್ರಮವಾಗಿ ನಮ್ಮ ಜಾಗ ಒತ್ತುವರಿ ಮಾಡಿ ಬೇರೆಯವರಿಗೆ ಹಂಚಿಕೆ ಮಾಡಲಾಗಿದೆ ಹೀಗಾಗಿ ನಮಗೆ ಪರಿಹಾರ ನೀಡಿ ಎಂದು ಕೇಳುತ್ತಾರೆ.
ಮುಡಾ ಅವರು ತಮ್ಮ ತಪ್ಪಿನ ಅರಿವಾಗಿ ಪಾರ್ವತಮ್ಮನವರ ಜತೆ ಚರ್ಚೆ ಮಾಡಿ 50:50 ಅನುಪಾತದಲ್ಲಿ ಪರಿಹಾರ ನೀಡಲು ತೀರ್ಮಾನಿಸಿದ್ದಾರೆ. ಮುಡಾದ ಮನವಿ ಆಧಾರದ ಮೇಲೆ ಪಾರ್ವತಮ್ಮನವರು ತಮ್ಮ ಜಮೀನನ್ನು ಮುಡಾಕ್ಕೆ ಬಿಟ್ಟುಕೊಡುತ್ತಾರೆ. ಈ ತೀರ್ಮಾನ ಮಾಡಿದಾಗ ಮುಡಾದಲ್ಲಿ ಕಾಂಗ್ರೆಸ್ ಪಕ್ಷದ ಒಂದಿಬ್ಬರು ಸದಸ್ಯರ ಹೊರತಾಗಿ ಉಳಿದಂತೆ ಜಿ.ಟಿ ದೇವೇಗೌಡ, ರಾಮದಾಸ್ ಅವರು ಸೇರಿ ಎಲ್ಲಾ ಸದಸ್ಯರು ವಿರೋಧ ಪಕ್ಷದವರಾಗಿದ್ದರು. ಇದೆಲ್ಲವೂ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ನಡೆದಿರುವ ಪ್ರಕ್ರಿಯೆ. ಆಗ ಸಿದ್ದರಾಮಯ್ಯನವರು ಅಧಿಕಾರದಲ್ಲಿ ಇರಲಿಲ್ಲ” ಎಂದು ವಿವರಿಸಿದರು.
“ಮೈಸೂರಿನ ಮತ್ತೊಂದು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕೂಡ ಶೇ. 50 ರಷ್ಟು ಪರಿಹಾರ ನೀಡಬೇಕು ಎಂದು ತೀರ್ಪು ನೀಡಿತ್ತು. ನಗರಾಭಿವೃದ್ಧಿ ಇಲಾಖೆ ಕೂಡ ಈ ವಿಚಾರದಲ್ಲಿ ಉಪಕಾನೂನು ಮಾಡಿಕೊಂಡಿದ್ದು, ಅದೂ ಜಾರಿಯಲ್ಲಿದೆ. ಅಕ್ರಮವಾಗಿ ಒತ್ತುವರಿ ಮಾಡಿಕೊಂಡರೆ ಶೇ. 100 ರಷ್ಟು ಪರಿಹಾರ ನೀಡುವ ಅವಕಾಶವೂ ಕಾನೂನಿನಲ್ಲಿದೆ. ಪಾರ್ವತಿ ಅವರು ತಮ್ಮ ಅರ್ಜಿಯಲ್ಲಿ ಇಂತಹುದೇ ಜಾಗದಲ್ಲಿ ಪರಿಹಾರ ನೀಡಿ ಎಂದು ಎಲ್ಲಿಯೂ ಕೇಳಿಲ್ಲ. ಇದು ಮುಡಾ ತೀರ್ಮಾನ. ಇದರಲ್ಲಿ ಅವರ ತಪ್ಪೇನಿದೆ? ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು ಸಹಿ ಹಾಕಿದ್ದಾರಾ? ಅಥವಾ ಯಾರ ಮೇಲಾದರೂ ಒತ್ತಡ ಹಾಕಿದ್ದಾರಾ? ಪಾರ್ವತಮ್ಮನವರು ತಮ್ಮ ಜಮೀನು ಕಳೆದುಕೊಂಡಿದ್ದಕ್ಕೆ ಪರಿಹಾರ ಪಡೆಯುವ ಹಕ್ಕು ಹೊಂದಿಲ್ಲವೇ? ಇಲ್ಲಿ ಆಗಿರುವ ಅಪರಾಧವಾದರೂ ಏನು?” ಎಂದು ಪ್ರಶ್ನಿಸಿದರು.
“ಈ ಪ್ರಕರಣವನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಂಡು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ. ಅವರು ಕೇವಲ ರಾಜಕೀಯ ಮಾಡುತ್ತಿದ್ದು, ಅವರು ರಾಜಕೀಯ ಮಾಡಲಿ ನಮ್ಮ ಅಭ್ಯಂತರವಿಲ್ಲ. ಅಂತಿಮವಾಗಿ ದೇಶದಲ್ಲಿ ಸಂವಿಧಾನ ಹಾಗೂ ಕಾನೂನು ಇದೆ. ನಾವು ಅದರಂತೆ ನಡೆಯುತ್ತೇವೆ” ಎಂದು ತಿಳಿಸಿದರು.
“ಬಿಜೆಪಿ ಅವರ ಕಾಲದಲ್ಲಿ ಸಾವಿರಾರು ನಿವೇಶನಗಳನ್ನು ಹಂಚಿಕೆ ಮಾಡಿದ್ದು ಯಾರು? ಅವರು ಕಾನೂನುಬಾಹಿರವಾಗಿ ಮಾಡಿದ್ದರೇ? ಈ ಪ್ರಕರಣದ ಬಗ್ಗೆ ಎರಡು ವರ್ಷಗಳ ಹಿಂದೆಯೇ ಮಾಧ್ಯಮಗಳಲ್ಲಿ ಬಂದಾಗ, ಅಧಿಕಾರದಲ್ಲಿದ್ದ ಬಿಜೆಪಿ ಯಾಕೆ ಮಾತನಾಡಲಿಲ್ಲ? ಇಲ್ಲಿ ಮುಖ್ಯಮಂತ್ರಿಗಳಿಂದ ಆಗಿರುವ ಅಕ್ರಮವೇನು? ಈ ರೀತಿ ಸುಳ್ಳು ಪ್ರಕರಣವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿಯನ್ನು ಕೆಳಗಿಳಿಸಿ, ಸರ್ಕಾರವನ್ನೇ ತೆಗೆಯಲು ಮುಂದಾಗುವುದು ಎಷ್ಟು ಸರಿ? ರಾಜ್ಯದ ಜನ ಆಶೀರ್ವಾದ ಮಾಡಿದ ಸರ್ಕಾರವನ್ನು ಅಲುಗಾಡಿಸಲು ಹೊರಟಿದ್ದಾರೆ, ಇದು ಸಾಧ್ಯವಿಲ್ಲ. ಇದು ಜನರ ಆಶೀರ್ವಾದದ ಮೇಲೆ ರಚಿತವಾಗಿರುವ ಸರ್ಕಾರ” ಎಂದು ತಿಳಿಸಿದರು.
“ಅಬ್ರಾಹಂ ಎಂಬಾತ ನನ್ನ ವಿರುದ್ಧ ಸೇರಿದಂತೆ ಯಡಿಯೂರಪ್ಪ ಹಾಗೂ ಇತರ ನಾಯಕರ ವಿರುದ್ಧ ದೂರು ನೀಡಿದ್ದಾರೆ. ಎಷ್ಟು ಪ್ರಕರಣಗಳಲ್ಲಿ ನ್ಯಾಯಾಲಯ ಅವರ ವಿರುದ್ಧ ತೀರ್ಪು ನೀಡಿದೆ. ಮೂಡಾ ಅವರು ಪಾರ್ವತಿ ಅವರ ಬಳಿ ಒಪ್ಪಂದ ಮಾಡಿಕೊಂಡಿರುವುದೇಕೆ? ಇಲ್ಲಿ ಮುಖ್ಯಮಂತ್ರಿಗಳಿಂದ ಅಕ್ರಮ ನಡೆದಿರುವುದಕ್ಕೆ ಒಂದು ಸಣ್ಣ ದಾಖಲೆ ಇದೆಯೇ? ಹೀಗಾಗಿ ಈ ವಿಚಾರವಾಗಿ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ, ಸರ್ಕಾರದ ವತಿಯಿಂದ ರಾಜ್ಯಪಾಲರಿಗೆ ಶೋಕಾಸ್ ನೋಟೀಸ್ ಹಿಂಪಡೆದು, ಅಬ್ರಾಹಂ ಅವರ ದೂರನ್ನು ವಜಾಗೊಳಿಸುವಂತೆ ಸಲಹೆ ನೀಡಲು ತೀರ್ಮಾನಿಸಿದ್ದೇವೆ” ಎಂದು ತಿಳಿಸಿದರು.
*ರಾಜ್ಯಪಾಲರು ನಮ್ಮ ಸಲಹೆ ಸ್ವೀಕರಿಸುವ ವಿಶ್ವಾಸವಿದೆ:*
ರಾಜ್ಯಪಾಲರು ನಿಮ್ಮ ಸಲಹೆಗಳ ವಿರುದ್ಧವಾಗಿ ನಡೆದುಕೊಂಡರೆ ನಿಮ್ಮ ಮುಂದಿನ ನಡೆ ಏನು ಎಂದು ಕೇಳಿದಾಗ, “ರಾಜ್ಯಪಾಲರು ಈ ಪ್ರಕರಣವನ್ನು ಸೂಕ್ಷ್ಮವಾಗಿ ಪರಿಗಣಿಸಲಿದ್ದಾರೆ ಎಂಬ ಭರವಸೆ ನಮಗಿದೆ. ನಾವು ಅವರಿಗೆ ಎಲ್ಲಾ ಮಾಹಿತಿಯನ್ನು ವಿವರವಾಗಿ ನೀಡಿದ್ದೇವೆ. ಬೇರೆ ರಾಜ್ಯಗಳ ಪ್ರಕರಣ ನ್ಯಾಯಾಲಯದ ತೀರ್ಪುಗಳು ನಮ್ಮ ಮುಂದಿವೆ. ಇಲ್ಲಿ ಕಾನೂನು, ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಅಡಗಿದ್ದು, ರಾಜ್ಯಪಾಲರು ಬಹಳ ಲೆಕ್ಕಾಚಾರದಿಂದ ಹೆಜ್ಜೆ ಇಡಬೇಕಾಗುತ್ತದೆ. ಹೀಗಾಗಿ ರಾಜ್ಯಪಾಲರು ಏನೇ ಒತ್ತಡ ಇದ್ದರೂ ತಮ್ಮ ಸ್ಥಾನದ ಘನತೆ ಹಾಳಾಗದಂತೆ ಜವಾಬ್ದಾರಿ ನಿರ್ವಹಿಸಲಿದ್ದಾರೆ. ನಮ್ಮ ಮುಖ್ಯಕಾರ್ಯದರ್ಶಿಗಳು ಈಗಾಗಲೇ ವಿಸ್ತೃತ ವರದಿ ನೀಡಿದ್ದು, ಮುಖ್ಯಮಂತ್ರಿಗಳು ವಿವರವಾಗಿ ಉತ್ತರ ನೀಡಲಿದ್ದಾರೆ” ಎಂದು ತಿಳಿಸಿದರು.
ವಿಚಾರಣೆಗೆ ಅನುಮತಿ ನೀಡುವುದು ರಾಜ್ಯಪಾಲರ ವಿವೇಚನೆಗೆ ಬಿಟ್ಟಿರುವ ವಿಚಾರವೋ, ಅಥವಾ ಸಚಿವ ಸಂಪುಟ ತೀರ್ಮಾನದ ವಿಚಾರವೋ ಎಂಬ ಪ್ರಶ್ನೆಗೆ, “ಈ ಪ್ರಕರಣದಲ್ಲಿ ವಿಚಾರಣೆಗೆ ಅವಕಾಶವೇ ಇಲ್ಲ. ಈ ಪ್ರಕರಣದಲ್ಲಿ ವರದಿ ಕೇಳಿ ಪಡೆಯಬಹುದಾಗಿದೆ. ತನಿಖೆ ನಡೆದು ಅದರಲ್ಲಿ ಮುಖ್ಯಮಂತ್ರಿಗಳ ಕೈವಾಡವಿದೆ ಎಂಬುದು ಸಾಬೀತಾದರೆ ಆಗ ವಿಚಾರಣೆಗೆ ನೀಡಬಹುದು. ಯಾರೋ ದೂರು ನೀಡಿದ ಕಾರಣಕ್ಕೆ ವಿಚಾರಣೆಗೆ ನೀಡಲು ಬರುವುದಿಲ್ಲ” ಎಂದು ತಿಳಿಸಿದರು.
ದೆಹಲಿಯಲ್ಲಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿದಾಗ ಈ ವಿಚಾರವಾಗಿ ಸ್ಪಷ್ಟನೆ ನೀಡಲಾಯಿತೇ ಎಂದು ಕೇಳಿದಾಗ, “ಈ ಪ್ರಕರಣದಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ ಎಂದು ನಮ್ಮ ನಾಯಕರಿಗೆ ತಿಳಿದಿದೆ. ಹೀಗಾಗಿ ಈ ವಿಚಾರವನ್ನು ನಾವು ಚರ್ಚೆ ಮಾಡಿಲ್ಲ. ನಾವು ಕೇವಲ ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡಿದೆವು. ಪಕ್ಷ ಸಂಘಟನೆ, ರಾಜ್ಯದ ಜನರಲ್ಲಿ ಬಿಜೆಪಿ ಸೃಷ್ಟಿಸುತ್ತಿರುವ ಗೊಂದಲದ ಬಗ್ಗೆ ಚರ್ಚೆ ಮಾಡಿದೆವು” ಎಂದು ತಿಳಿಸಿದರು.
*ಮುಖ್ಯಮಂತ್ರಿ ಪತ್ನಿ ಎಂಬ ಕಾರಣಕ್ಕೆ ತಮ್ಮ ಹಕ್ಕನ್ನು ಕಳೆದುಕೊಳ್ಳಬೇಕಾ?:*
ಪಾರ್ವತಿ ಅವರು ಸಾಮಾನ್ಯ ಹೆಣ್ಣು ಮಗಳಲ್ಲ, ಆಕೆ ಮುಖ್ಯಮಂತ್ರಿಗಳ ಧರ್ಮಪತ್ನಿಯಾಗಿದ್ದು, ಈ ಪ್ರಕರಣದಲ್ಲಿ ಸ್ವಜನಪಕ್ಷಪಾತವಾಗಿಲ್ಲವೇ ಎಂದು ಕೇಳಿದಾಗ, “ಮುಖ್ಯಮಂತ್ರಿಗಳ ಪತ್ನಿಯಾದ ಮಾತ್ರಕ್ಕೆ ತನ್ನ ಹಕ್ಕನ್ನು ಕಳೆದುಕೊಳ್ಳಬೇಕಾ? ತನ್ನ ಅಣ್ಣ ಕೊಟ್ಟ ಜಮೀನನ್ನು ಉಳಿಸಿಕೊಂಡು ತನ್ನ ಮಕ್ಕಳ ಭವಿಷ್ಯ ರಕ್ಷಣೆ ಮಾಡಿಕೊಳ್ಳುವುದು ತಪ್ಪಾ? ಸಿದ್ದರಾಮಯ್ಯ ಅವರು 40 ವರ್ಷಗಳ ರಾಜಕಾರಣ ಮಾಡಿದ್ದು, ಮಂತ್ರಿ, ಉಪಮುಖ್ಯಮಂತ್ರಿಯಾಗಿದ್ದಾರೆ, 7 ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ. ಆದರೂ ಅವರ ಪತ್ನಿ ಎಂದಿಗೂ ಸಾರ್ವಜನಿಕವಾಗಿ ಗುರುತಿಸಿಕೊಂಡಿಲ್ಲ. ತಮ್ಮ ಅಧಿಕಾರವನ್ನು ಬಳಸಿಕೊಂಡು ವೇದಿಕೆ ಹಂಚಿಕೊಂಡಿಲ್ಲ. ಅವರಿಗೆ ಅಧಿಕಾರ ಇದ್ದರೂ ಅದನ್ನು ಬಳಸಿಕೊಂಡಿಲ್ಲ. ನಾವು ಅವಕಾಶ ಸಿಕ್ಕಾಗ ನಮ್ಮ ಮನೆಯವರನ್ನು ಕರೆದುಕೊಂಡು ಹೋಗಿದ್ದೇವೆ. ಆದರೆ ಪಾರ್ವತಿ ಅವರು ಎಂದಿಗೂ ಅಧಿಕಾರವನ್ನು ಬಳಸಿಕೊಂಡವರಲ್ಲ. ಈ ವಿಚಾರವಾಗಿ ಆಕೆಯನ್ನು ಪ್ರತಿಯೊಬ್ಬರೂ ಪ್ರಶಂಸಿಸಬೇಕು. ಆಕೆ ತನ್ನ ತವರಿನಿಂದ ಬಂದ ಆಸ್ತಿಯನ್ನು ಉಳಿಸಿಕೊಳ್ಳುವ ಎಲ್ಲಾ ಹಕ್ಕು ಇದೆ” ಎಂದು ತಿಳಿಸಿದರು.
Be the first to comment