ವೈಶಾಖ ಮಾಸಕ್ಕೆ ಬಹಳ ಪ್ರಾಮುಖ್ಯತೆ ಇದೆ. ಈ ಮಾಸದಲ್ಲಿ ವಿಷ್ಣುವನ್ನು ಆರಾಧಿಸಲಾಗುತ್ತದೆ. ದಾನ, ಧರ್ಮ ಮಾಡುವುದರಿಂದ ವಿಶೇಷ ಫಲಗಳು ದೊರೆಯುತ್ತವೆ. ಹಾಗೇ ವೈಶಾಖ ಮಾಸದ ಶುಕ್ಲಪಕ್ಷದ 7ನೇ ದಿನದಂದು ‘ಗಂಗಾ ಸಪ್ತಮಿ’ಯನ್ನು ಆಚರಿಸಲಾಗುತ್ತದೆ. ಈ ಬಾರಿ ಮೇ 14, ಮಂಗಳವಾರ ಆಚರಿಸಲಾಗುತ್ತಿದೆ.
ಗಂಗೆಯು ಜಹ್ನು ಋಷಿಯ ಕಿವಿಯಿಂದ ಹೊರಬಂದ ಕಾರಣ, ಋಷಿಯ ಮಗಳೆಂದು ಭಾವಿಸಿ ಜಾಹ್ನವಿ ಎಂದು ಕರೆಯಲಾಗುತ್ತದೆ. ಗಂಗೆ ಪವಿತ್ರ ನದಿಯಾಗಿರುವುದರಿಂದ ದೇಶದಲ್ಲಿನ ಎಲ್ಲ ಸರೋವರ, ನದಿ, ಕೆರೆ, ಕಲ್ಯಾಣಿ, ಕುಂಟೆ, ಬಾವಿಗಳಲ್ಲಿನ ನೀರನ್ನು ‘ಗಂಗಾಜಲ’ ಎಂದೇ ಭಾವಿಸಲಾಗುತ್ತದೆ.
ಗಂಗಾ ಸಪ್ತಮಿಯ ಮಹತ್ವವನ್ನು ‘ಪದ್ಮ ಪುರಾಣ’, ‘ಬ್ರಹ್ಮ ಪುರಾಣ’ ಹಾಗೂ ‘ನಾರದ ಪುರಾಣ’ ಗಳಲ್ಲಿ ನೋಡಬಹುದು. ಭಗೀರಥ ಮಹಾರಾಜನ ಪೂರ್ವಜರು ಶ್ರೀಕಪಿಲ ಮಹರ್ಷಿಯ ಶಾಪಕ್ಕೆ ತುತ್ತಾಗಿದ್ದರು. ಇವರ ಮುಕ್ತಿಗಾಗಿ ಭಗೀರಥ ತಪಸ್ಸು ಮಾಡಿ ಗಂಗೆಯನ್ನು ಪ್ರಾರ್ಥಿಸಿ, ಜೇಷ್ಠಮಾಸ ದಶಮಿಯಂದು ಭೂಲೋಕಕ್ಕೆ ಕರೆತಂದ. ಈ ದಿನವನ್ನು ‘ಗಂಗಾವತರಣ ದಿನ’ ಎಂದು ಕರೆಯಲಾಗುತ್ತದೆ. ಭುವಿಗಿಳಿದ ಗಂಗೆ, ತಾನು ಮೋಕ್ಷದಾಯಕಳು ಎಂಬ ‘ಅಹಂ’ನಿಂದ ಭೋರ್ಗರೆದು ಹರಿಯಲಾರಂಭಿಸುತ್ತಾಳೆ. ಈ ವೇಳೆ ಶ್ರೀ ಜಹ್ನು ಮಹರ್ಷಿಯ ಆಶ್ರಮ ನೀರಿನಲ್ಲಿ ಕೊಚ್ಚಿ ಹೋಯಿತು. ಇದರಿಂದ ಕುಪಿತರಾದ ಜಹ್ನು ಮಹರ್ಷಿಗಳು ಗಂಗೆಯನ್ನು ಆಪೋಶಿಸಿದರು.
ಇದನ್ನು ನೋಡಿ ದೇವತೆಗಳು ಹಾಗೂ ಗಂಗೆಯನ್ನು ಭುವಿಗೆ ಕರೆ ತಂದಿದ್ದ ಭಗೀರಥ ಗಾಭರಿಗೊಂಡರು. ಎಲ್ಲರೂ ಸೇರಿ ಜಹ್ನು ಮಹರ್ಷಿಯನ್ನು ಪರಿಪರಿಯಾಗಿ ಪ್ರಾರ್ಥಿಸಿದರು. ಕೋಪದಿಂದ ಇದ್ದ ಜಹ್ನು ಮಹರ್ಷಿ, ಇವರ ಮನವಿಗೆ ಮನಸೋತು, ಗಂಗೆಗೆ ಅಹಂಕಾರ ತೊಲಗಬೇಕು. ಹಾಗಾಗಿ ಹನ್ನೊಂದು ತಿಂಗಳ ನಂತರ ಗಂಗೆಯನ್ನು ಹೊರಹಾಕುವುದಾಗಿ ಭರವಸೆ ನೀಡಿದರು. ಕೊಟ್ಟ ಮಾತಿನಂತೆ ಗಂಗೆಯನ್ನು ತನ್ನ ಬಲ ಕಿವಿಯಿಂದ ವೈಶಾಖ ಶುಕ್ಲ ಪಕ್ಷ ಸಪ್ತಮಿಯಂದು ಹೊರಗೆ ಹರಿಯ ಬಿಟ್ಟರು. ಈ ದಿನ ಗಂಗೆಯು ಪುನರ್ಜನ್ಮವನ್ನು ಪಡೆದದ್ದರಿಂದ ‘ಗಂಗೋತ್ಪತ್ತಿ ದಿನ’ ಎನ್ನಲಾಗುತ್ತದೆ.
ಗಂಗೆಯು ಜಹ್ನು ಋಷಿಯ ಕಿವಿಯಿಂದ ಹೊರಬಂದ ಕಾರಣ, ಋಷಿಯ ಮಗಳೆಂದು ಭಾವಿಸಿ ‘ಜಾಹ್ನವಿ’ ಎಂದು ಕರೆಯಲಾಗುತ್ತದೆ. ಗಂಗೆ ಪವಿತ್ರ ನದಿಯಾಗಿರುವುದರಿಂದ ದೇಶದಲ್ಲಿನ ಎಲ್ಲ ಸರೋವರ, ನದಿ, ಕೆರೆ, ಕಲ್ಯಾಣಿ, ಕುಂಟೆ, ಬಾವಿಗಳಲ್ಲಿನ ನೀರನ್ನು ಗಂಗಾಜಲವೆಂದೇ ಭಾವಿಸಲಾಗುತ್ತದೆ. ನಾವು ಸ್ನಾನ ಮಾಡುವ, ಪೂಜೆಗೆ ಬಳಸುವ ಹಾಗೂ ಕುಡಿಯುವ ನೀರನ್ನು ಗಂಗೆಯೆಂದೇ ಪೂಜ್ಯ ಭಾವನೆಯಿಂದ ಬಳಸುತ್ತೇವೆ. ಇಂತಹ ಪವಿತ್ರ ನದಿ ಎರಡನೇ ಬಾರಿ ಮರುಹುಟ್ಟು ಪಡೆದ ದಿನ. ಆ ಗಂಗಾದೇವಿಯನ್ನು ಸ್ಮರಿಸೋಣ, ಪೂಜಿಸೋಣ.
ಈ ದಿನ, ಸ್ನಾನ ಮಾಡುವಾಗ ನದಿ, ತೊರೆ, ಬಾವಿ.. ಈ ರೀತಿ ಯಾವುದೇ ನೀರಿರಲಿ. ಆ ನೀರಿನಲ್ಲಿ ಗಂಗೆಯನ್ನು ಮನಃಪೂರ್ತಿ ನೆನೆದು, ಗಂಗಾದಿ ಸಪ್ತ ನದಿಗಳ ಸನ್ನಿಧಾನ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸಿ, ನಂತರ ಸ್ನಾನ ಮಾಡಿ. ಈ ದಿನದ ಮತ್ತೊಂದು ವಿಶೇಷ ‘ಭಗೀರಥ ಜಯಂತಿ’. ಶ್ರೀಹರಿಯ ಚರಣದಲ್ಲಿ ಉದಿಸಿದ ಗಂಗೆಯನ್ನು ತಮ್ಮ ತಪಸ್ಸಿನ ಮೂಲಕ ಭೂಲೋಕಕ್ಕೆ ತಂದಂತಹ ಮಹಾನುಭಾವರಾದ ಭಗೀರಥ ಋಷಿಗಳು, ಈ ಶ್ರೇಷ್ಠ ಭುವಿಯಲ್ಲಿ ಜನ್ಮತಾಳಿದ ದಿನ. ನಮ್ಮ ಪಾಪಗಳನ್ನು ತೊಳೆಯುವ ದೇವ ಗಂಗೆಯನ್ನು ಭೂಲೋಕಕ್ಕೆ ಕರೆತಂದು ಉಪಕರಿಸಿದ ಮಹರ್ಷಿಗಳನ್ನು ಸ್ಮರಿಸೋಣ, ನಮಿಸೋಣ.
Be the first to comment