ರಾಜ್ಯಬಜೆಟ್ 2020: ಪರಿಶಿಷ್ಟ ಜಾತಿ, ಪಂಗಡದವರ ಕಲ್ಯಾಣಕ್ಕೆ 26,000 ಕೋಟಿ ರೂಪಾಯಿಗ ಅಧಿಕ ಹಂಚಿಕೆ

ವರದಿ: ಅಮರೇಶ ಕಾಮನಕೇರಿ


ರಾಜ್ಯ ಸುದ್ದಿಗಳು

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದವರ ಕಲ್ಯಾಣಕ್ಕೆ ಎಸ್‍ಸಿಎಸ್‍ಪಿ/ ಟಿಎಸ್‍ಪಿ ಅಡಿ 26,930 ಕೋಟಿ ರೂಪಾಯಿ ಅನುದಾನವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಿಗದಿ ಮಾಡಿದ್ದಾರೆ. ಇದು ನಿಯಮಾನುಸಾರ ಹಂಚಿಕೆ ಮಾಡಬೇಕಾದ ಮೊತ್ತಕ್ಕಿಂತ ಹೆಚ್ಚು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ನಿರ್ವಹಿಸುತ್ತಿರುವ ಸಹಕಾರ ಸಂಘಗಳಿಗೆ ಆರ್ಥಿಕ ಚಟುವಟಿಕೆಗಳಿಗಾಗಿ ನೀಡುವ ಷೇರು ಬಂಡವಾಳ ದ್ವಿಗುಣಗೊಳಿಸಿ 20 ಲಕ್ಷ ರೂ. ಗಳಿಗೆ ಹೆಚ್ಚಳ ಮಾಡಲಾಗಿದೆ.

“ಚರ್ಮ ಶಿಲ್ಪ” ಎಂಬ ಯಂತ್ರಾಧಾರಿತ ಉತ್ಪಾದನಾ ಘಟಕಗಳ ಸ್ಥಾಪನೆಗೆ 250 ಚರ್ಮ ಕುಶಲಕರ್ಮಿಗಳಿಗೆ ಡಾ. ಬಾಬು ಜಗಜೀವನ್‍ರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಮೂಲಕ ಘಟಕ ವೆಚ್ಚ 10 ಲಕ್ಷ ರೂ.ಗಳಲ್ಲಿ ಐದು ಲಕ್ಷ ರೂ. ಸಹಾಯಧನ. 12.50 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ.

ಇನ್ನೊಂದೆಡೆ, ಅಲೆಮಾರಿ/ಅರೆ ಅಲೆಮಾರಿ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ 78 ಕೋಟಿ ರೂ. ಅನುದಾನ ಸಿಗಲಿದೆ. ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಹಾಗೂ ವಿವಿಧ ನಿಗಮಗಳಿಗೆ 125 ಕೋಟಿ ರೂಪಾಯಿ ಅನುದಾನವನ್ನು ಸಿಎಂ ಮೀಸಲಿಟ್ಟಿದ್ದಾರೆ.

ಉದ್ಯೋಗಾವಕಾಶ ಸೃಷ್ಟಿ ಕಡೆಗೂ ಗಮನ ಹರಿಸಿರುವ ಸರ್ಕಾರ, ಇ-ವಾಣಿಜ್ಯ ಉತ್ಪನ್ನಗಳನ್ನು ಸರಬರಾಜು ಮಾಡುವ ಯುವಕರಿಗೆ ಬೈಕ್ ಕೊಳ್ಳಲು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಸಾವಿರ ಯುವಕರಿಗೆ ತಲಾ 25,000 ರೂ.ಗಳಂತೆ 2.5 ಕೋಟಿ ರೂ. ಆರ್ಥಿಕ ನೆರವನ್ನೂ ಘೋಷಿಸಿದೆ.

Be the first to comment

Leave a Reply

Your email address will not be published.


*