ಬ್ಲಿಂಕ್‌ ಸಿನಿಮಾ ನೀವಿನ್ನೂ ನೋಡಿಲ್ವ? ಚೆನ್ನಾಗಿದೆಯಂತೆ ನೋಡಿ ಅಂದ್ರು ಶಿವಣ್ಣ, ಸೂಪರ್‌ ಆಗಿದೆ ಎಂದ್ರು ಸಿಂಪಲ್‌ ಸುನಿ

ಒಂದು ಸರಳ ಪ್ರೇಮಕಥೆ ನೋಡದೆ ಇದ್ರೂ ಪರವಾಗಿಲ್ಲ, ಈ ಸಿನಿಮಾ ನೋಡಿ” ಎಂದು ಹೊಸಬರ ಸಿನಿಮಾಕ್ಕೆ ಪ್ರೋತ್ಸಾಹದ ಮಾತುಗಳನ್ನಾಡಿದ್ದಾರೆ.

ಕರಟಕ ದಮನಕ ಮತ್ತು ರಂಗನಾಯಕ ಸಿನಿಮಾ ಕಳೆದ ವಾರ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಈ ಸಮಯದಲ್ಲಿ ಬ್ಲಿಂಕ್‌ನಂತಹ ಹೊಸಬರ ಸಿನಿಮಾಗಳು ಬಿಡುಗಡೆಯಾಗಿತ್ತು. ಬ್ಲಿಂಕ್‌ ಸಿನಿಮಾದಲ್ಲಿ ಚೈತ್ರಾ ಜೆ ಆಚಾರ್‌ ಕೂಡ ನಟಿಸಿದ್ದು, ಹಲವು ಕಡೆ ಪ್ರಮೋಷನ್‌ನಲ್ಲಿ ಭಾಗವಹಿಸಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಬ್ಲಿಂಕ್‌ ಸಿನಿಮಾದ ಕುರಿತು ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.

ಬೆಂಗಳೂರು: ಕಳೆದ ಮಾರ್ಚ್‌ 08ರಂದು ಕರಟಕ ದಮನಕ, ರಂಗನಾಯಕ ಚಿತ್ರದ ಜತೆ ಬ್ಲಿಂಕ್‌ ಎಂಬ ಸಿನಿಮಾವೂ ಬಿಡುಗಡೆಯಾಗಿತ್ತು. ಕರಟಕ ದಮನಕ ಸಿನಿಮಾ ನಿರೀಕ್ಷೆಯಷ್ಟು ಹಿಟ್‌ ಆಗದೆ ಇದ್ದರೂ ಒಂದಿಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇದೇ ಸಮಯದಲ್ಲಿ ರಂಗನಾಯಕ ಸಿನಿಮಾ ಏನೂ ಚೆನ್ನಾಗಿಲ್ಲ ಎಂಬ ಅಭಿಪ್ರಾಯವೂ ಪ್ರೇಕ್ಷಕರಿಂದ ವ್ಯಕ್ತವಾಗಿದೆ. ಇದೇ ಸಮಯದಲ್ಲಿ ಇವೆರಡು ಸಿನಿಮಾಗಳ ಜತೆಗೆ ಆಗಮಿಸಿದ ಹೊಸಬರ ಬ್ಲಿಂಕ್‌ ಸಿನಿಮಾದ ಕುರಿತು ಪಾಸಿಟಿವ್‌ ಮಾತುಗಳು ಕೇಳಿಬರುತ್ತಿವೆ. ಬ್ಲಿಂಕ್‌ ಸಿನಿಮಾ ಚೆನ್ನಾಗಿದೆಯಂತೆ ಎಂಬ ಅಭಿಪ್ರಾಯ ಕೇಳಿಬಂದರೂ ಥಿಯೇಟರ್‌ಗೆ ಪ್ರೇಕ್ಷಕರ ಆಗಮನ ಕಡಿಮೆ ಇದೆ. ಇದೇ ಕಾರಣಕ್ಕೆ ಬ್ಲಿಂಕ್‌ ಸಿನಿಮಾಕ್ಕೆ ಸ್ಟಾರ್‌ ನಟರು, ಸೆಲೆಬ್ರಿಟಿಗಳು ಸಾಥ್‌ ನೀಡುತ್ತಿದ್ದಾರೆ.

ಬ್ಲಿಂಕ್‌ ಸಿನಿಮಾಕ್ಕೆ ಶಿವಣ್ಣ ಬೆಂಬಲ
ಸ್ಯಾಂಡಲ್‌ವುಡ್‌ನ ಸೆಂಚುರಿ ಸ್ಟಾರ್‌ ಶಿವಣ್ಣ ಬ್ಲಿಂಕ್‌ ಸಿನಿಮಾದ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ್ದಾರೆ. “ಬ್ಲಿಂಕ್‌ ಸಿನಿಮಾದ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳನ್ನು ಕೇಳುತ್ತ ಇದ್ದೇನೆ. ಆದಷ್ಟು ಬೇಗ ಇದನ್ನು ನೋಡುವೆ. ಹೊಸ ಪ್ರಯತ್ನಕ್ಕೆ ಪ್ರೇಕ್ಷಕರು ಬೆನ್ನು ತಟ್ಟಬೇಕು. ರಂಗಿತರಂಗ, ಉಳಿದವರು ಕಂಡಂತೆ, ಗೋಧಿ ಬಣ್ಣ ಸಾಧಾರಣ ಮೈ ಕಟ್ಟು ಸಿನಿಮಾ ಗೆಲ್ಲಲು ಇಂತಹ ಪ್ರೋತ್ಸಾಹವೇ ಕಾರಣ. ಹೊಸ ತಂಡ ಶಕ್ತಿಮೀರಿ ಪ್ರಯತ್ನಪಟ್ಟು ಈ ಸಿನಿಮಾ ತಂದಿದೆ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ಬ್ಲಿಂಕ್‌ ಸಿನಿಮಾ ನೋಡಿ” ಎಂದು ಶಿವರಾಜ್‌ ಕುಮಾರ್‌ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಸಿಂಪಲ್‌ ಸುನಿಯ ಪ್ರೋತ್ಸಾಹ

“ಬ್ಲಿಂಕ್ ಸಿನಿಮಾ ಮಲಯಾಳಂ ಭಾಷೆಯಲ್ಲಿ ಬಂದಿದ್ರೆ ಕನ್ನಡಿಗರೆಲ್ಲಾ ನೋಡ್ತಾ ಇದ್ರು… ಆದ್ರೆ ಇದು ಕನ್ನಡ ಸಿನೆಮಾ ಅದಕ್ಕೆ ಯಾರೂ ನೋಡುತ್ತಿಲ್ಲ” ಎಂದು ಸ್ಯಾಂಡಲ್‌ವುಡ್‌ ಸಿನಿಮಾನಿರ್ದೇಶಕ ಸಿಂಪಲ್ ಸುನಿ ಹೇಳಿದ್ದಾರೆ.

“ಇತ್ತೀಚೆಗೆ ಬಿಡುಗಡೆಯಾದ ಹೊಸ ಬ್ಲಿಂಕ್ ಸಿನಿಮಾ ವೀಕ್ಷಿಸಿದೆ. ಬ್ಲಿಂಕ್‌ ತಂಡದವರು ನನ್ನ ಆಹ್ವಾನಿಸಿರಲಿಲ್ಲ. ನಾನು ಸಾಮಾನ್ಯ ಪ್ರೇಕ್ಷಕನಾಗಿಯೇ ಬಂದು ಸಿನಿಮಾ ವೀಕ್ಷಿಸಿದೆ. ಅಷ್ಟರ ಮಟ್ಟಿಗೆ ಸಿನಿಮಾ ಬಗ್ಗೆ ಒಳ್ಳೆಯ ರಿಪೋರ್ಟ್ ಇತ್ತು. ಸಿನಿಮಾ ನೋಡಿದ ಮೇಲೆ ಇಷ್ಟವಾಯಿತು. ಬ್ಲಿಂಕ್‌ ಸಿನಿಮಾ ಥಿಯೇಟರ್‌ನಲ್ಲಿ ಹೆಚ್ಚಾಗಬೇಕು. ನೂರಾರು ಶೋಗಳು ಇರಬೇಕು. ಎಲ್ಲರೂ ಸಿನಿಮಾ ಮಂದಿರಕ್ಕೆ ಹೋಗಿ ನೋಡಿ. ನನ್ನ ಒಂದು ಸರಳ ಪ್ರೇಮಕಥೆ ನೋಡದೆ ಇದ್ರೂ ಪರವಾಗಿಲ್ಲ, ಈ ಸಿನಿಮಾ ನೋಡಿ” ಎಂದು ಹೊಸಬರ ಸಿನಿಮಾಕ್ಕೆ ಪ್ರೋತ್ಸಾಹದ ಮಾತುಗಳನ್ನಾಡಿದ್ದಾರೆ.

 

Be the first to comment

Leave a Reply

Your email address will not be published.


*