ಬೆಂಗಳೂರ : ಮಣ್ಣು ಎಂದರೆ ಬರಿ ಮಣ್ಣಲ್ಲ. ಮಣ್ಣಿಗೆ ಕಾಣುವ ಹಾಗೂ ಕಾಣಲಾಗದ ವಿವಿಧ ಬಗೆಯ, ಜೀವಿ-ಜೀವಾಣುಗಳಿಂದ ಕೂಡಿರುವ ಸಜೀವಿ ಮಣ್ಣಿಗೂ ನಮ್ಮ ಬದುಕಿಗೂ ಮಣ್ಣೊಳಗಿನ ಜೀವ ಜಂತುಗಳಿಗೂ ನೇರ ಸಂಬಂಧವಿದೆ. ಇಂಥ ಮಣ್ಣಿನ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಪ್ರತಿ ವರ್ಷ ಡಿಸೆಂಬರ್ ೫ರಂದು ಜಗತ್ತಿನಾದ್ಯಂತ ವಿಶ್ವ ಮಣ್ಣಿನ ದಿನವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಣ್ಣಿನ ಕುರಿತಂತೆ ಒಂದಷ್ಟು ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ.
ಮಣ್ಣಿಗೂ ನಮ್ಮ ಬದುಕಿಗೂ, ನಮ್ಮ ಮಾನಸಿಕ ಸ್ವಾಸ್ಥ್ಯಕ್ಕೂ, ನಮ್ಮ ಸಂಸ್ಕೃತಿಗೂ ನೇರ ಸಂಬಂಧವಿದೆ. ಮಕ್ಕಳು ಮಣ್ಣಿನಲ್ಲಿ ಆಟವಾಡುವುದರಿಂದ ಆರೋಗ್ಯವೂ ವೃದ್ಧಿಯಾಗುತ್ತದೆ. ಆರೋಗ್ಯ ಪೂರ್ಣ ಮಣ್ಣಿನಲ್ಲಿರುವ ಅನೇಕ ಬ್ಯಾಕ್ಟೀರಿಯಾಗಳು ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ತುಂಬುತ್ತವೆ. ಮಣ್ಣು ಮತ್ತು ನೀರು ದಾಂಪತ್ಯ ಗೀತೆ ಇದ್ದಂತೆ. ನಾವು ಸೇವಿಸುವ ಆಹಾರ ಪೌಷ್ಟಿಕವಾಗಿ ಇರಬೇಕಾದರೆ ಮಣ್ಣಿನಲ್ಲಿ ಸತ್ವ ಇರಬೇಕು. ಮಣ್ಣು ಮಕ್ಕಳಂತೆ. ನಾವು ಕೊಟ್ಟಿದ್ದನ್ನು ತಿನ್ನುತ್ತದೆ. ಬಿತ್ತಿದಂತೆ ಬೆಳೆಯುತ್ತದೆ. ಜಗತ್ತಿನಲ್ಲಿ ೩ಲಕ್ಷ ಬಗೆಯ ಮಣ್ಣಿನ ವಿಧಗಳಿವೆ. ಇದರಲ್ಲಿ ಸಾವಿರಾರು ರೀತಿಯ ಬ್ಯಾಕ್ಟೀರಿಯಾಗಳಿವೆ. ಸಹಸ್ರಾರು ಜಾತಿಯ ಕೀಟಗಳಿವೆ. ಮಣ್ಣಿನಲ್ಲಿ ಇರುವ ಜೀವಸತ್ವವನ್ನು ಸಂರಕ್ಷಣೆ ಮಾಡಿದರೆ ಜಗತ್ತಿನ ಅನೇಕ ಬಿಕ್ಕಟ್ಟುಗಳಿಗೆ ಪರಿಹಾರ ಸಿಗಲಿದೆ ಎನ್ನುವುದು ತಜ್ಞರ ಅಭಿಪ್ರಾಯ.
ಪ್ರತಿ ವರ್ಷ ಡಿಸೆಂಬರ್ ೦೫ ರಂದೇ ಏಕೆ ವಿಶ್ವ ಮಣ್ಣಿನ ದಿನದ ಆಚರಿಸಲಾಗುತ್ತದೆ ಎನ್ನುವುದಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಮಣ್ಣಿನ ಅಧ್ಯಯನವನ್ನೇ ಜೀವನದ ದೀಕ್ಷೆ ಎಂದು ಸ್ವೀಕರಿಸಿದ ಸಾವಿರಾರು ಮಣ್ಣು ವಿಜ್ಞಾನಿಗಳು ೧೯೨೭ರಲ್ಲೇ ಜಾಗತಿಕ ಮಟ್ಟದಲ್ಲಿ ಮಣ್ಣು ವಿಜ್ಞಾನಿಗಳ ಅಂತರಾಷ್ಟ್ರೀಯ ಒಕ್ಕೂಟ ವನ್ನು ರಚಿಸಿದರು. ನಾನಾ ದೇಶಗಳಿಗೆ ಸೇರಿದ ಈ ವಿಜ್ಞಾನಿಗಳು ೨೦೦೨ರ ಡಿಸೆಂಬರ್ ೦೫ ರಂದು ವಿಶ್ವದ ಮೊದಲ ಮಣ್ಣಿನ ದಿನವನ್ನು ಆಚರಿಸಿದರು.
ಇಂದಿನ ಜಾಗತಿಕ ಮಟ್ಟದಲ್ಲಿ ನಾವು ಮಣ್ಣನ್ನೂ ಸಂರಕ್ಷಿಸುವುದು ಅತ್ಯಗತ್ಯವಾಗಿದೆ. ನಾವು ನಮ್ಮ ಹೊಲಗಳಲ್ಲಿ ಹೆಚ್ಚಿನ ಬೆಳೆ ಬೆಳೆಯಲು ರಾಸಾಯನಿಕ ಗೊಬ್ಬರವನ್ನು ಬಳಸುವ ಮೂಲಕ ಭೂಮಿಯಲ್ಲಿನ ಮಣ್ಣನ್ನು ವಿಷಪೂರಿತವಾಗಿ ಮಾಡುತ್ತಿದ್ದೇವೆ. ಅದನ್ನು ಬಿಟ್ಟು ಸಾವಯವ ಕೃಷಿಗೆ ಹೆಚ್ಚಿನ ಒತ್ತನ್ನು ಕೊಡುವ ಮೂಲಕ ಇಂದು ನಾವೆಲ್ಲರೂ ನಮ್ಮ ಬದುಕಿನೊಂದಿಗೆ ಕೂಡಿರುವ ಮಣ್ಣನ್ನು ಉಳಿಸಲು, ಸಂರಕ್ಷಿಸಲು ನಿರ್ಧಾರ ಕೈಗೊಳ್ಳಬೇಕಿದೆ.
– ಅಮರೇಶಣ್ಣ ಕಾಮನಕೇರಿ
Be the first to comment