ಕೆ.ಕೆ.ಆರ್.ಡಿ.ಬಿ. ಪ್ರಗತಿ ಪರಿಶೀಲನಾ ಸಭೆ

ಕ್ರಿಯಾಯೋಜನೆ ರೂಪಿಸಿ ಕ.ಕ. ಅಭಿವೃದ್ಧಿಪಡಿಸಲು ಈಶ್ವರ ಖಂಡ್ರೆ ಸಲಹೆ

 

ಬೆಂಗಳೂರು, ಜು.27: ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಈ ಬಾರಿ 3 ಸಾವಿರ ಕೋಟಿ ರೂಪಾಯಿ ಮಂಜೂರಾಗಿದ್ದು, ವೆಚ್ಚವಾಗದೆ ಉಳಿದಿರುವ 2 ಸಾವಿರ ಕೋಟಿ ರೂಪಾಯಿ ಇದೆ. ಈ ಹಣವನ್ನು ಸಮರ್ಪಕವಾಗಿ ಖರ್ಚು ಮಾಡಿ ನಮ್ಮ ಭಾಗದ 7 ಜಿಲ್ಲೆಗಳ ಅಭಿವೃದ್ಧಿ ಮಾಡಬೇಕು ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಪ್ರತಿಪಾದಿಸಿದ್ದಾರೆ.

ಬೆಂಗಳೂರಿನ ವಿಕಾಸಸೌಧದಲ್ಲಿಂದು ಯೋಜನೆ ಹಾಗೂ ಸಾಂಖ್ಯಿಕ ಖಾತೆ ಸಚಿವ ಡಿ. ಸುಧಾಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರು, ಹಿಂದಿನ ಮೂರು ವರ್ಷಗಳಲ್ಲಿ ಹಂಚಿಕೆಯಾದ ಹಣವನ್ನೂ ವೆಚ್ಚ ಮಾಡದೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ನಿಷ್ಕ್ರಿಯವಾಗಿತ್ತು. ಈಗ ನಮ್ಮ ಸರ್ಕಾರದಲ್ಲಿ ಹಾಗೆ ಆಗಬಾರದು ಎಂದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಖರ್ಚಾಗದೆ ಉಳಿದ ಹಣ ಮತ್ತು ಈ ಬಾರಿ ಹಂಚಿಕೆಯಾಗಿರುವ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಸಮರ್ಪಕವಾಗಿ ವೆಚ್ಚ ಮಾಡಲು ಮುಂಚಿತವಾಗಿಯೇ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಸಚಿವರು ಆಗ್ರಹಿಸಿದರು.

ಹಸಿರೀಕರಣಕ್ಕೆ ಅನುದಾನಕ್ಕೆ ಬೇಡಿಕೆ: ಮಾನದಂಡದ ಪ್ರಕಾರ ದೇಶದಲ್ಲಿ ಶೇ.33ರಷ್ಟು ಹಸಿರು ವಲಯ ವ್ಯಾಪ್ತಿ ಇರಬೇಕು. ರಾಜ್ಯದಲ್ಲಿ ಶೇ.21ರಷ್ಟು ಹಸಿರು ವಲಯ ವ್ಯಾಪ್ತಿ ಇದೆ. ಆದರೆ ಕಲ್ಯಾಣ ಕರ್ನಾಟಕದಲ್ಲಿ ಶೇ.10ಕ್ಕಿಂತ ಕಡಿಮೆ ಇದ್ದು, ಕೆ.ಕೆ.ಆರ್.ಡಿ.ಬಿ.ವತಿಯಿಂದ ಹಸಿರೀಕರಣಕ್ಕೆ 3 ಸಾವಿರ ಕೋಟಿ ರೂಪಾಯಿಗಳ ಪೈಕಿ ಶೇ.10ರಷ್ಟು ನೀಡಬೇಕು ಎಂದು ಮನವಿ ಮಾಡಿದರು.

ಮಧ್ಯ ಪ್ರವೇಶಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಹಸಿರು ಗೋಡೆ ನಿರ್ಮಾಣದ ಪ್ರಸ್ತಾಪ ಈ ಹಿಂದೆಯೇ ಇತ್ತು. ಹಸಿರು ವಲಯ ಹೆಚ್ಚಾದರೆ ಮಳೆ ಚೆನ್ನಾಗಿ ಆಗುತ್ತದೆ. ತಾಪಮಾನ ಉತ್ತಮವಾಗಿರುತ್ತದೆ. ಹೀಗಾಗಿ ಕ.ಕ. ಭಾಗದ ಸಚಿವರ ಪ್ರತ್ಯೇಕ ಸಭೆ ಕರೆಯುವಂತೆ ಸಲಹೆ ಮಾಡಿದರು.

ಸಭೆಯಲ್ಲಿ ಸಚಿವರುಗಳಾದ ಡಾ.ಶರಣಪ್ರಕಾಶ್ ಪಾಟೀಲ್, ಶರಣಬಸಪ್ಪ ದರ್ಶನಾಪೂರ, ರಹೀಂ ಖಾನ್, ಶಿವರಾಜ ತಂಗಡಗಿ, ಬಿ. ನಾಗೇಂದ್ರ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ಯಾಲಿನಿ ರಜನೀಶ್ ಮತ್ತಿತರರು ಭಾಗಿಯಾಗಿದ್ದರು.

Be the first to comment

Leave a Reply

Your email address will not be published.


*