ವಿಜಯಪುರ: ಪ್ರಜಾಪ್ರಭುತ್ವ ಹಬ್ಬಕ್ಕೆ ಇನ್ನೂ ಕೇವಲ ಮೂರು ದಿನ ಮಾತ್ರ ಬಾಕಿಯಿದ್ದು, ಎಲ್ಲ ಅರ್ಹ ಮತದಾರರು ತಮ್ಮ ಪರಿವಾರದ ಅರ್ಹ ಮತದಾರರೊಂದಿಗೆ ಕಡ್ಡಾಯವಾಗಿ ಮತದಾನ ಕೇಂದ್ರಕ್ಕೆ ತೆರಳಿ ಮತದಾನ ಮಾಡುವಂತೆ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ಮನವಿ ಮಾಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಸ್ವೀಪ್ ಸಮಿತಿ, ಸಹಯೊಗದಲ್ಲಿ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಮತದಾನ ಜಾಗೃತಿಗಾಗಿ ಆಯೋಜಿಸಲಾಗಿದ್ದ ಮಾನವ ಸರಪಳಿ ನಿರ್ಮಾಣ ಹಾಗೂ ವಿನೂತನವಾದ ಬೃಹತ್ ಪ್ರಮಾಣದ ಪ್ರಜಾಪ್ರಭುತ್ವದ ಹಬ್ಬ ಮೇ 10 ಮತದಾನ ದಿನ ಎಂಬ ಶೀರ್ಷಿಕೆಯಡಿಯ 120 ಮೀಟರ್ ಧ್ವಜ ಪ್ರದರ್ಶನಕ್ಕೆ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ ಅವರು ಮಾತನಾಡಿ, ಪ್ರಜಾಪ್ರಭುತ್ವ ಹಬ್ಬಕ್ಕೆ ಇನ್ನೂ ಕೇವಲ ಮೂರು ದಿನ ಮಾತ್ರ ಬಾಕಿಯಿದ್ದು, ಈಗಾಗಲೇ ಮತದಾನಕ್ಕೆ ಬೇಕಾದ ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜೊತೆಗೆ ಮತಗಟ್ಟೆಗಳನ್ನು ಶೃಂಗಾರ ಮಾಡಿ, ಮತದಾರರನ್ನು ಆಕರ್ಷಿಸುವಂತೆ ಸಿದ್ಧಪಡಿಸಲಾಗಿದೆ. ಎಲ್ಲ ಅರ್ಹ ಮತದಾರರರು ಪ್ರಜಾಪ್ರಭುತ್ವ ಹಬ್ಬದ ಸಡಗರದಲ್ಲಿ ಪಾಲ್ಗೊಂಡು ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸುವಂತೆ ಅವರು ಮನವಿ ಮಾಡಿದರು.
ಎಸ್ಪಿ ಎಚ್. ಡಿ. ಆನಂದಕುಮಾರ ಮಾತನಾಡಿ, ಮತದಾನದ ದಿನ ಹತ್ತಿರವಾಗಿದ್ದು ಎಲ್ಲ ಪ್ರಜೆಗಳು ನಿರ್ಭಿತಿಯಿಂದ ತಮ್ಮ ಪರಿವಾರದವರೊಡನೆ ಬಂದು ಮತ ಚಲಾಯಿಸಬೇಕು. ಮುಕ್ತ ನ್ಯಾಯಸಮ್ಮತ ಚುನಾವಣೆಗಾಗಿ ಎಲ್ಲ ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಯಾವುದೇ ಮತದಾರ ಮತದಾನದಿಂದ ವಂಚಿತವಾಗದೇ ಕಡ್ಡಾಯವಾಗಿ ಮತ ಚಲಾಯಿಸುವಂತೆ ಅವರು ಕರೆ ನೀಡಿದರು.
ನಗರದ ಗಾಂಧಿ ವೃತ್ತದಲ್ಲಿ ಮತದಾನ ಜಾಗೃತಿ ಕುರಿತು ಮಾನವ ಸರಪಳಿ ನಿರ್ಮಿಸಿ ಮತದಾರರನ್ನು ಆಕರ್ಷಿಸಲಾಯಿತು. ಒಂದು ಕಿಲೋ ಮೀಟರ್ ಉದ್ದದ ಧ್ವಜವನ್ನು ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಗಾಂಧಿ ವೃತ್ತದ ಮಾರ್ಗವಾಗಿ ಕಂದಗಲ್ಲ ಹಣಮಂತರಾಯ ರಂಗಮಂದಿರದವರೆಗೆ ಸುಮಾರು ಎರಡು ಕಿಲೋ ಮೀಟರ್ ಜಾಥಾ ಸಂಚರಿಸಿ ಸಾರ್ವಜನಿಕರಿಗೆ ಮತದಾನದ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಸತ್ತಿಗೆ ಕುಣಿತ, ಕುದುರೆ ಕುಣಿತ, ನವಿಲು ಕುಣಿತ ಸೇರಿ ವಿವಿಧ ಕಲಾತಂಡಗಳು, ಮಹಿಳೆಯರ ಬೈಕ್ ರ್ಯಾಲಿ, ವಿದ್ಯುನ್ಮಾನ ಮತ ಯಂತ್ರಗಳ ಸ್ತಬ್ಧ ಚಿತ್ರ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಸೇರಿ 800ಕ್ಕೂ ಅಧಿಕ ಜನರು ಭಾಗವಹಿಸಿ, ಸಾರ್ವಜನಿಕರಿಗೆ ಮತದಾನ ಜಾಗೃತಿಯ ಕರ ಪತ್ರಗಳನ್ನು ಹಂಚುವ ಮೂಲಕ ಕಾರ್ಯಕ್ರಮ ಯಶಸ್ವಿಯಾಯಿತು.
ಸಮಾವೇಶ
ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡ ಪ್ರಜಾಪ್ರಭುತ್ವದ ಹಬ್ಬ ಮೇ 10 ಮತದಾನ ದಿನ ಎಂಬ ಶೀರ್ಷಿಕೆಯಡಿಯ 120 ಮೀಟರ್ ಧ್ವಜ ಪ್ರದರ್ಶನ ಅಭಿಯಾನ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದ ಆವರಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಎಲ್ಲ ಅಧಿಕಾರಿ, ಸಿಬ್ಬಂದಿಗಳಿಗೆ ವಾರ್ತಾಧಿಕಾರಿ ಅಮರೇಶ ದೊಡಮನಿ ಅವರು ಪ್ರತಿಜ್ಞಾ ವಿದಿ ಬೋಧಿಸಿದರು.
ಜಿಲ್ಲಾ ಪಂಚಾಯಿತಿ ಯೋಜನಾ ಉಪನಿರ್ದೇಶಕ ಎ. ಬಿ. ಅಲ್ಲಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ರಾಜಶೇಖರ ಧೈವಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಕೆ. ಕೆ. ಚವ್ಹಾಣ, ಸ್ವೀಪ್ ಸಮಿತಿ ಐಕಾನ್ ಸಹನಾ ಕೂಡಿಗನೂರ ಮುಂತಾದವರು ಉಪಸ್ಥಿತರಿದ್ದರು.
Be the first to comment