ಕರ್ನಾಟಕವನ್ನು ಮಾದರಿ ರಾಜ್ಯ ಮಾಡಲು ಶ್ರಮಿಸುತ್ತೇನೆ: ಬಿಎಸ್‌ವೈ

ವರದಿ: ಮಂಜುಳಾ ರೆಡ್ಡಿ ಬೆಂಗಳೂರು ನಗರ


ರಾಜ್ಯದ ಸುದ್ದಿಗಳು


ಶಿಕಾರಿಪುರ ಜನರನ್ನು ಎಂದೂ ಮರೆಯಲಾರೆ

ಬೆಂಗಳೂರು: ನನ್ನ ಜೀವನದಲ್ಲಿ ಶಿಕಾರಿಪುರ ತಾಲೂಕಿನ ಜನರನ್ನು ಎಂದಿಗೂ ಮರೆಯಲಾರೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭಾವುಕರಾಗಿ ನುಡಿದರು.

ಅರಮನೆ ಮೈದಾನದ ಆವರಣದಲ್ಲಿ ಗುರುವಾರ ಆಯೋಜನೆಯಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. “ನನಗೆ 60 ವರ್ಷ ತುಂಬಿದಾಗ ದಿವಂಗತ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಯವರ ಉಪಸ್ಥಿತಿಯಲ್ಲಿ ನಾನಾ ಮಠಾಧೀಶರ ಸಮ್ಮುಖದಲ್ಲಿ ಇದೇ ಅರಮನೆ ಮೈದಾನದಲ್ಲಿ ನಡೆದ ಅಭಿನಂದನಾ ಸಮಾರಂಭವನ್ನು ಜೀವನದಲ್ಲಿ ಮರೆಯುವುದಿಲ್ಲ. ಇದೀಗ ಅಂತಹುದೇ ಅಪೂರ್ವ ಸಮಾರಂಭವೊಂದಕ್ಕೆ 78ನೇ ಹುಟ್ಟುಹಬ್ಬ ಸಾಕ್ಷಿಯಾಗಿದೆ. ಕೇಂದ್ರ ಸಚಿವರಾದ ರಾಜನಾಥ ಸಿಂಗ್‌, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಒಳ್ಳೆಯ ಮಾತುಗಳನ್ನಾಡಿರುವ ಈ ಸಮಾರಂಭವನ್ನೂ ಎಂದೂ ಮರೆಯಲಾರೆ.

ಜಾಹೀರಾತು

ಶಿಕಾರಿಪುರ ಪುರಸಭೆ ಅಧ್ಯಕ್ಷನಾಗಿ ಆಯ್ಕೆ ಮಾಡಿದ ಬಳಿಕ, ಅಲ್ಲಿನ ಜನ ನನ್ನನ್ನು 7 ಬಾರಿ ಶಾಸಕರನ್ನಾಗಿ ಆರಿಸಿ ಕಳುಹಿಸಿದ್ದಾರೆ. ನನ್ನ ಜೀವನದಲ್ಲಿ ಶಿಕಾರಿಪುರ ತಾಲೂಕಿನ ಜನರನ್ನು ಮರೆಯಲಾರೆ ಎಂದು ಭಾವುಕರಾದರು.

ಮುಂದಿನ ಮೂರು ಕಾಲು ವರ್ಷದಲ್ಲಿ ಎಲ್ಲರ ಸಹಕಾರದೊಂದಿಗೆ ಕರ್ನಾಟಕವನ್ನು ಮಾದರಿ ರಾಜ್ಯ ಮಾಡಲು ಶ್ರಮಿಸುತ್ತೇನೆ. ರೈತರ ಬೆಳೆಗೆ ವೈಜ್ಞಾನಿಕ ಬೆಲೆ, ನೀರಾವರಿ ಸೌಲಭ್ಯ ಕಲ್ಪಿಸಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಅನ್ನದಾತನಿಗೆ ಅಗತ್ಯವಾದ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದಿರುವುದು ಶೋಭೆ ತರುವಂತಹದ್ದಲ್ಲ. ನನ್ನ ಪ್ರಯತ್ನಗಳಿಗೆ ಸಿದ್ದರಾಮಯ್ಯ ಅವರ ಬೆಂಬಲ, ಸಹಕಾರವಿರಲಿದೆ ಎಂದು ಭಾವಿಸಿದ್ದೇನೆ ಎಂದು ಹೇಳಿದರು.

ಜಾಹೀರಾತು

ಅನಂತ ಕುಮಾರ್‌ ಬದುಕಿರಬೇಕಿತ್ತು:
“ಇಂದು ಅನಂತ ಕುಮಾರ್‌ ಅವರು ಬದುಕಿರಬೇಕಿತ್ತು. ಅವರೊಂದಿಗೆ ನಾನು ರಾಜ್ಯ ಸುತ್ತಾಡಿದ್ದನ್ನು ನೆನಪಿಸಿಕೊಂಡರೆ ಆಶ್ಚರ್ಯವಾಗುತ್ತದೆ. ಒಂದೆರಡು ಶಾಸಕರಿದ್ದ ಪಕ್ಷವನ್ನು ಇಷ್ಟು ಎತ್ತರಕ್ಕೆ ಬಳಸುವಲ್ಲಿ ಅನಂತ್‌ ಕುಮಾರ್‌ ಅವರ ಕೊಡುಗೆಯೂ ಅಪಾರವಾಗಿದೆ’ ಎಂದು ಹೇಳಿದರು.

ಪಂಡಿತ್‌ ದೀನದಯಾಳ್‌ ಉಪಾಧ್ಯಾಯ, ಅಟಲ್‌ ಬಿಹಾರಿ ವಾಜಪೇಯಿ, ಎಲ್‌.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ ಇತರ ನಾಯಕರ ಪ್ರಭಾವಕ್ಕೆ ಒಳಗಾಗಿ ಜನಸೇವೆಗೆ ಮುಂದಾದೆ. ಅಧಿಕಾರ ಇರುವುದು ಜನಸೇವೆಗೆ. ಚುನಾವಣಾ ರಾಜಕೀಯದಲ್ಲಿ ಪಕ್ಷದ ಒಳಗೂ, ಹೊರಗೂ ವೈಮನಸ್ಸು ತಲೆದೋರಬಹುದು. ಅದನ್ನೆಲ್ಲಾ ಮರೆತು ಎಲ್ಲರೂ ಒಟ್ಟಾಗಿ ಸೇರಿದ್ದೇವೆ. ಪಕ್ಷದ ರಾಷ್ಟ್ರೀಯ ನಾಯಕರ ಅಪೇಕ್ಷೆಯಂತೆ ಪಕ್ಷವನ್ನು ಬಲಪಡಿಸುವ ಕೆಲಸ ಆಗಬೇಕಿದೆ. ಆಡಳಿತ ಮತ್ತು ಪ್ರತಿಪಕ್ಷಗಳು ಒಟ್ಟಾಗಿ ಕೆಲಸ ಮಾಡಿ ಜನರಿಗೆ ಸೇವೆ ಸಲ್ಲಿಸೋಣ ಎಂದು ಆಶಿಸಿ, ಮಾತಿಗೆ ವಿರಾಮ ಹೇಳಿದರು.

Ad

ಬಿಎಸ್‌ವೈಗೆ ಸನ್ಮಾನ:
ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್‌, ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರ ಸಮ್ಮುಖದಲ್ಲಿ ಯಡಿಯೂರಪ್ಪ ಅವರಿಗೆ ಹಸಿರು ಶಾಲು ಹೊದಿಸಿ, ಶ್ರೀಗಂಧದ ಹಾರ ಹಾಕಿ, ಬೆಳ್ಳಿ ನೇಗಿಲು ನೀಡಿ ಅಭಿನಂದನೆ ಸಲ್ಲಿಸಲಾಯಿತು.

Be the first to comment

Leave a Reply

Your email address will not be published.


*