ಕೃಷ್ಣರಾಜಪೇಟೆ ವರದಿ : ಹೆಣ್ಣು ಮಕ್ಕಳು ರಾಷ್ಟ್ರದ ಶಕ್ತಿಯಾಗಿದ್ದು ಕುಟುಂಬ ಸೇರಿದಂತೆ ಸಮಾಜದ ಅಭಿವೃದ್ಧಿಗೆ ಮಹಿಳೆಯರ ಕೊಡುಗೆಯು ಅಪಾರವಾಗಿದೆ ಎಂದು ಕೆ.ಆರ್.ಪೇಟೆಯ ಅಪರ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಆರ್.ಶಕುಂತಲಾ ಹೇಳಿದರು..
ಕೆ.ಆರ್.ಪೇಟೆ ಪಟ್ಟಣದ ಶಿಕ್ಷಕರ ಭವನದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು..
ಹೆಣ್ಣು ಮಕ್ಕಳು ತಮ್ಮಲ್ಲಿನ ಕೀಳರಿಮೆಯನ್ನು ಅಳಿಸಿ ಹಾಕಿ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಬೇಕು. ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುವ ದಬ್ಬಾಳಿಕೆ ದೌರ್ಜನ್ಯವನ್ನು ಪ್ರತಿಭಟಿಸುವ ಮನೋಭಾವನೆಯನ್ನು ಬೆಳೆಸಿಕೊಂಡು ಸಮಾಜಮುಖಿಯಾಗಿ ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದ ನ್ಯಾಯಾಧೀಶರಾದ ಶಕುಂತಲಾ ಸಂವಿಧಾನವು ನಮಗೆ ವರವಾಗಿ ನೀಡಿರುವ ಕಾನೂನಿನ ಸದ್ಬಳಕೆ ಮಾಡಿಕೊಂಡು ನೆಮ್ಮದಿಯ ಜೀವನ ನಡೆಸಬೇಕು ಎಂದು ಕರೆ ನೀಡಿದರು..
ಅಪರ ಸಿವಿಲ್ ನ್ಯಾಯಾಧೀಶರಾದ ಕೆ.ವಿ.ಅರ್ಪಿತಾ ಮಾತನಾಡಿ ಹೆಣ್ಣುಮಕ್ಕಳು ಕಾನೂನಿನ ನೆರವನ್ನು ಪಡೆದುಕೊಂಡು ತಮ್ಮ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧ ರಕ್ಷಣೆ ಪಡೆದುಕೊಂಡು ತಮ್ಮಲ್ಲಿರುವ ವೃತ್ತಿಕೌಶಲ್ಯದ ಮೂಲಕ ಸಬಲೀಕರಣ ಸಾಧಿಸಬೇಕು. ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಯನ್ನು ಕೊಡಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡಿ ಮುನ್ನಡೆಯುವಂತೆ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು. ಗ್ರಾಮೀಣ ಪ್ರದೇಶದ ಜನರು ಮೌಢ್ಯದಿಂದ ಹೊರಬಂದು ಹೆಣ್ಣು ಮಕ್ಕಳನ್ನು ಕಡೆಗಣಿಸದೇ ಶಿಕ್ಷಣ ಕೊಡಿಸಬೇಕು. ಹೆಣ್ಣು ಸಂಸಾರದ ಕಣ್ಣು ಎಂಬ ಹಿರಿಯರ ನಾಣ್ಣುಡಿಯಂತೆ ಮನೆ ಸೇರಿದಂತೆ ಇಡೀ ಕುಟುಂಬವನ್ನೇ ಮುನ್ನಡೆಸುತ್ತಿರುವುದೇ ಸಾಕ್ಷಿಯಾಗಿದೆ ಎಂದು ಹೇಳಿದರು..
ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್ ಮಾತನಾಡಿ ತಾಯಿಯಾಗಿ, ಸೋದರಿಯಾಗಿ, ಪತ್ನಿಯಾಗಿ ಹೆಣ್ಣನ್ನು ಒಪ್ಪುವ ಸಮಾಜವು ಹೆಣ್ಣು ಮಗುವು ಹುಟ್ಟಿದಾಗ ಮನೆಗೆ ಭಾಗ್ಯಲಕ್ಚ್ಮಿಯೇ ಬಂದಳೆಂದು ಭಾವಿಸದೇ ಹೆಣ್ಣು ಮಗುವನ್ನು ಕೀಳಾಗಿ ಕಾಣುವುದು ಸರಿಯಲ್ಲ. ಭ್ರೂಣ ಪರೀಕ್ಷೆ ಮಾಡಿಸಿ ಹೆಣ್ಣು ಮಗುವು ಹುಟ್ಟುವುದು ಖಚಿತವಾದರೆ ಭ್ರೂಣ ಹತ್ಯೆ ಮಾಡುತ್ತಿರುವುದರಿಂದ ಹೆಣ್ಣು ಗಂಡಿನ ಸಂಖ್ಯೆಯು ಏರುಪೇರಾಗುತ್ತಿದೆ. ಸಾಮಾಜಿಕ ಅಸಮಾನತೆಯು ದೂರಾಗಿ ಜಾತಿ, ಮತ ಪಂಥಗಳಿಂದ ಮುಕ್ತವಾದ ಸಮ ಸಮಾಜವು ನಿರ್ಮಾಣವಾಗಬೇಕಾದರೆ ಹೆಣ್ಣು ಮಕ್ಕಳು ಸಂಘಟಿತರಾಗಿ ಹೋರಾಟ ನಡೆಸುವ ಜೊತೆಗೆ ಕಡ್ಡಾಯವಾಗಿ ಶಿಕ್ಷಣದ ಜ್ಞಾನ ಪಡೆಯಬೇಕು. ದೇಶದ ಮುನ್ನಡೆಗೆ ಹೆಣ್ಣು ಮಕ್ಕಳ ಕೊಡುಗೆಯು ಅಪಾರವಾಗಿದೆ ಎಂಬ ಸತ್ಯ ಅರಿಯಬೇಕು ಎಂದು ಹೇಳಿದರು..
ಕೆ.ಆರ್.ಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಿವಕುಮಾರ್, ವಕೀಲರ ಸಂಘದ ಮಾಜಿಅಧ್ಯಕ್ಷ ಕೆ.ಎನ್.ನಾಗರಾಜು, ಪ್ರಸೂತಿತಜ್ಞ ವೈದ್ಯೆ ಡಾ.ಪ್ರಿಯಾಂಕಾ, ಆರೋಗ್ಯಶಿಕ್ಷಣಾಧಿಕಾರಿ ಶಿವಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುರಸಭೆ ಮುಖ್ಯಾಧಿಕಾರಿ ಬಸವರಾಜು, ತಾ.ಪಂ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕನಿರ್ದೇಶಕ ಸಂದೀಪ್, ಶಿಕ್ಷಣ ಸಂಯೋಜಕಿ ನೀಲಾಮಣಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್, ವಕೀಲರ ಸಂಘದ ಪದಾಧಿಕಾರಿಗಳಾದ ಆರ್.ಕೆ.ರಾಜೇಗೌಡ, ಬಿ.ಸಿ.ದಿನೇಶ್, ಸಿಡಿಪಿಓ ಅರುಣಕುಮಾರ್, ಎಸಿಡಿಪಿಓ ಪದ್ಮಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷೆ ಎಂ.ಎಸ್.ಮೋಹನಕುಮಾರಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕರಾದ ರೂಪ, ಶಾಂತವ್ವ, ಮಂಜುಳಾ ಕಾರ್ಯಕ್ರಮ ನಡೆಸಿಕೊಟ್ಟರು.
Be the first to comment