ದಕ್ಷಿಣ ಕನ್ನಡ, ಮಾರ್ಚ್ 04 : ಗಣೇಶ್ ಕಾಮತ್ ಎಂಬ ಮೂಡಬಿದ್ರೆಯ ಜಿ.ಕೆ ಡೆಕೋರೇಟರ್ಸ್ ನ ಪ್ರವರ್ತಕ. ಉಡುಪಿ ಮಂಗಳೂರು ಮಾತ್ರವಲ್ಲ ಕರ್ನಾಟಕದಾದ್ಯಂತ ದೊಡ್ಡ ದೊಡ್ಡ ಕಾರ್ಯಕ್ರಮ, ಸಮ್ಮೇಳನಗಳ ಬೃಹತ್ ಪೆಂಡಾಲ್, ಆಸನ ವ್ಯವಸ್ಥೆಗಳ ಮೂಲಕ ದೊಡ್ಡ ಮಟ್ಟದ ಹೆಸರು ಮಾಡಿದವರು. ತನ್ನ ಎರಡು ಕೈಗಳನ್ನೂ ಕಳೆದುಕೊಂಡಿದ್ದರೂ ಬಂಡೆಯಂತೆ ಸಿಡಿದೆದ್ದು ಸುಂದರ ಬದುಕೊಂದನ್ನು ರೂಪಿಸಿಕೊಂಡಿದ್ದ ಸಾಹಸಿ ವ್ಯಕ್ತಿಯ ಹೃದಯಕ್ಕೂ ಆಘಾತವಾಯ್ತೆಂದು ಕೇಳಿದಾಗ ನಂಬಲು ಅಸಾಧ್ಯವಾಗಿದೆ.
ಮೂಡಬಿದ್ರೆಯ ಜಿ.ಕೆ ಡೆಕೋರೇಟರ್ಸ್ ನ ಪ್ರವರ್ತಕ
ನಾಡಿನ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ವಹಿಸಿಕೊಂಡು ಯಶಸ್ವಿಯಾಗಿ ನಡೆಸಿಕೊಡುತ್ತಿದ್ದ ಗಣೇಶ್ ಕಾಮತ್ ತನ್ನ ಎರಡು ಕೈಗಳನ್ನೂ ಕಳೆದುಕೊಂಡವರು. ಊಟ, ತಿಂಡಿ, ಟಾಯ್ಲೆಟ್, ಸ್ನಾನ. ಎಲ್ಲದಕ್ಕೂ ಇನ್ನೊಬ್ನರು ಜೊತೆ ಇರಲೇ ಬೇಕು. ಹೀಗಿದ್ದರೂ ಜಿ.ಕೆ ಮಾಮ್ ನೂರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದ ಪುಣ್ಯಾತ್ಮ.
ಕಾಯಕ ಯೋಗಿ ಕಾಮತ್ : ಕಾರ್ಕಳ ಗಾಂಧಿ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಕೂಟ. 29 ಅಡಿ ಎತ್ತರದ ಸ್ಟ್ಯಾಂಡು. ಫ್ಲಡ್ ಲೈಟ್ ಜೋಡಿಸಲು ಹತ್ತಿದವರು ಗಣೇಶ್ ಕಾಮತ್. ಮೂಡಬಿದ್ರೆಯ ಪ್ರತಿಷ್ಟಿತ ಡೆಕೋರೇಟರ್ಸ್ ಸಂಸ್ಥೆಯಲ್ಲಿ ಕೆಲಸಕ್ಕಿದ್ದರು.
ಸ್ಟ್ಯಾಂಡಿನ ತುದಿ ಹತ್ತಿದರು. ಕೆಳಗಿನಿಂದ ಬಲ್ಬುಗಳನ್ನು ಮೇಲಕ್ಕೆಳೆದು, ಲೈಟುಗಳನ್ನು ಜೋಡಿಸುತ್ತಿದ್ದರು. ಕೆಲಸದಲ್ಲಿ ನಿರತರಾಗಿದ್ದವರು ಅಚಾನಕ್ಕಾಗಿ ಆಯತಪ್ಪಿ ಬಿದ್ದು ಬಿಟ್ಟರು. ಬಿದ್ದದ್ದು ಎಲ್ಲಿ ಅಂತೀರಾ? ಕೆಳಗಿದ್ದ ವಿದ್ಯುತ್ ತಂತಿಯ ಮೇಲೆ. ಅದೆಷ್ಟೋ ಹೊತ್ತು ಅಲ್ಲಿ ನೇತಾಡುತ್ತಿದ್ದರಂತೆ. ವಿದ್ಯುತ್ ಸಂಪರ್ಕ ಕಡಿತ ಗೊಳಿಸುವ ಹೊತ್ತಿನ ವರೆಗೆ ಅವರ ಜೀವ ಉಳಿದದ್ದೇ ಹೆಚ್ಚು. ಆದರೆ ಕಾಲ ಮಿಂಚಿತ್ತು. ಕೈಗಳೆರಡೂ ಕರೆಂಟ್ ಶಾಕ್ ಗೆ ಕರಗಿ ಹೋಗಿತ್ತು.
ಅಪಮಾನ : ಅಸಹಾಯಕ ಪರಿಸ್ಥಿತಿಯಲ್ಲಿ ಗಣೇಶ್ ಕಾಮತ್ ಕೆಲಸಕ್ಕಿದ್ದ ಆ ಪ್ರತಿಷ್ಟಿತ ಸಂಸ್ಥೆ ಇವರ ಕೈ ಬಿಟ್ಟಿತ್ತು. ಚೇತರಿಸಿಕೊಂಡು ಮತ್ತೆ ಉದ್ಯೋಗಕ್ಕೆ ಸೇರಿಕೊಂಡಾಗ “ಎರಡು ಕೈಗಳನ್ನೂ ಕಳೆದುಕೊಂಡ ಇವನಿಂದ ಏನಾಗುತ್ತೆ” ಎಂದು ಗೇಲಿ ಮಾಡಿ ಅವಮಾನಿಸಿ ನಿರ್ಲಕ್ಷಿಸಿದರು. ತೀವ್ರ ಬೇಸರತೆಯಿಂದ ಆತ್ಮಹತ್ಯೆಯ ನಿರ್ಧಾರ ಮಾಡಿದರು. ಮನೆಯ ಪರಿಸ್ಥಿತಿಯೂ ಅಷ್ಟಕ್ಕಷ್ಟೇ. ತನ್ನನ್ನು ಪ್ರೋತ್ಸಾಹಿಸುವವರು ಯಾರೂ ಇಲ್ಲ,ಯಾರೂ ಕೆಲಸ ನೀಡುತ್ತಿಲ್ಲ. ಮನೆಯವರಿಗೆ ಭಾರವಾಗಿ ಇರುವುದಕ್ಕಿಂತ, ಅವಮಾನಗಳ ನಡುವೆ ಬದುಕುವುದಕ್ಕಿಂತ ಸಾವೇ ಮೇಲೆಂದು ನಿರ್ಧರಿಸಿದರು. ಊರ ದೇವಸ್ಥಾನದ ಜಗಲಿಯಲ್ಲಿ ಇದನ್ನೇ ಆಲೋಚಿಸುತ್ತಾ ಕೂತಿದ್ದರು.
ಸಾಧಿಸುವ ಛಲ ತೊಟ್ಟ ಕಾಮತ್ : ಆಗ ಅವರ ಸಂಬಂಧಿಕರೋರ್ವರು ಎದುರಾದರು. ಮುಖ ಬಾಡಿಕೂತ ಇವರನ್ನು ಕುರಿತು “ಯಾಕೆ ಹೀಗೆ ಕೂತಿದ್ದೀಯಾ? ಕೈ ಕಳೆದುಕೊಂಡರೆ ಏನಂತೆ? ಮನಸ್ಸಿದ್ದರೆ ಸಾಧನೆ ಕಷ್ಟವಲ್ಲ. ನಿನ್ನ ಮುಖದಲ್ಲಿ ರಾಜಯೋಗ ಎದ್ದು ಕಾಣುತ್ತಿದೆ. ಹೀಗೆ ಸಪ್ಪೆ ಕೂರಬೇಡ. ಸಾಯುವ ಮಾತೆಲ್ಲ ಆಡಬೇಡ. ನಿರ್ಲಕ್ಷಿಸಿದವರ ಮುಂದೆಯೇ ನಿಂತು ತೋರಿಸು” ಎಂದು ಹುರಿದುಂಬಿಸಿದರು. ಆಶೀರ್ವದಿಸಿದರು.
ಅಂದಿನಿಂದ, ಆ ಮಾತನನ್ನು ಕೇಳಿದಂದಿನಿಂದ ಗಣೇಶ್ ಕಾಮತ್ ಹಿಂದೆ ನೋಡಲಿಲ್ಲ. ಅಪಘಾತ ಇನ್ಶೂರೆನ್ಸ್ ಮೂಲಕ ಬಂದ ಹಣದಿಂದ ಎರಡು ಸೌಂಡ್ ಬಾಕ್ಸ್ ಖರೀದಿಸಿದರು. ಮದುವೆ, ಮುಂಜಿ ಸಮಾರಂಭಗಳನ್ನು ವಹಿಸಿಕೊಂಡರು. ಆರಂಭದಲ್ಲಿ ಒಂದು ದಿನಕ್ಕೆ ರೂ. 350 ಬಾಡಿಗೆ ಪಡೆದು ಆರಂಭಿಸಿದ ಉದ್ಯಮವಿಂದು GK ಡೆಕೋರೇಟರ್ಸ್ ಎಂಬ ದೊಡ್ಡ ಸಂಸ್ಥೆಯಾಗಿ, ಲಕ್ಷ ರೂಪಾಯಿಗಳ ಬಾಡಿಗೆ ಪಡೆಯುವಂತಹ, ದೊಡ್ಡ ಕಾರ್ಯಕ್ರಮಗಳನ್ನು ವಹಿಸಿಕೊಳ್ಳುವಂತಹ ಉದ್ಯಮಿಯಾಗಿ ಗಣೇಶ್ ಕಾಮತ್ ಬೆಳೆದರು.
ಪ್ಲಾಸ್ಟಿಕ್ ಕೈ ಜೋಡಿಸಿಕೊಂಡಿರುವ ಇವರಿಗೆ ಸ್ವತಃ ಊಟ ಮಾಡಲಾಗುವುದಿಲ್ಲ. ಯಾರಾದರೂ ತಿನ್ನಿಸಲೇ ಬೇಕು. ಆದರೂ ನಲ್ವತ್ತಕ್ಕೂ ಹೆಚ್ಚು ಮಂದಿಗೆ ಖಾಯಂ ಉದ್ಯೋಗ ನೀಡಿ, ನೂರಕ್ಕೂ ಮಿಕ್ಕಿ ಜನರ ಅನ್ನದ ದಿಕ್ಕು ಕೊಡುವವರಾದರು. ಲಕ್ಷ ಜನ ಸೇರುವ ದೊಡ್ಡ ಕಾರ್ಯಕ್ರಮಗಳನ್ನೂ ಇವರು ವಹಿಸಿಕೊಳ್ಳುತ್ತಿದ್ದರು.
ಸ್ಟೇಜು, ಪೆಂಡಾಲು, ಡೆಕೋರೇಷನ್ನು, ಕುರ್ಚಿ, ಕ್ಯಾಟರಿಂಗು, ಟ್ಯಾಬ್ಲೋ. ಹೀಗೆ ಕಾರ್ಯಕ್ರಮಗಳಿಗೆ ಬೇಕಾದ ಎಲ್ಲವನ್ನೂ ಇವರು ವಹಿಸಿಕೊಳ್ಳುತ್ತಾರೆ. ಸ್ವತಃ ಮುಂದೆ ನಿಂತು ಕೆಲಸ ಮಾಡಿಸುತ್ತಿದ್ದರು. ಕರಾವಳಿ ಮಾತ್ರವಲ್ಲದೆ ಕರ್ನಾಟಕದಾದ್ಯಂತ, ಕೇರಳ, ತಮಿಳುನಾಡಿನ ಕೆಲವು ಕಾರ್ಯಕ್ರಮಗಳನ್ನೂ ಜಿ.ಕೆ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಒಂದು ದಿನವೂ ಪುರುಸೊತ್ತು ಇಲ್ಲದಂತೆ ಎತ್ತರಕ್ಕೆ ಬೆಳೆದುನಿಂತಿದ್ದರು.
ಎಂ.ಎನ್. ರಾಜೇಂದ್ರ ಕುಮಾರ್ ಜಿ.ಕೆ ಅವರಿಗೆ ದೊಡ್ಡ ಕಾರ್ಯಕ್ರಮಗಳನ್ನು ನೀಡಿ ಪ್ರೋತ್ಸಾಹಿಸಿದ ಮೊದಲಿಗರು. ಅವರ ಎಲ್ಲಾ ಕಾರ್ಯಕ್ರಮ, ನವೋದಯ ಸಮ್ಮೇಳನಗಳಿಗೆಲ್ಲಾ ಇವರದೇ ಪೆಂಡಾಲ್. ಆಳ್ವಾಸ್ ನುಡಿಸಿರಿಯ ಪೆಂಡಾಲಿನಲ್ಲೂ ಇವರ ಪಾಲಿತ್ತು. ಗಣೇಶ್ ಕಾಮತ್ ಶೂನ್ಯದಿಂದ ಮೇಲೆದ್ದ ವ್ಯಕ್ತಿ. ಅಂಗ ನ್ಯೂನ್ಯತೆಯನ್ನೂ ಮೆಟ್ಟಿನಿಂತು ಬದುಕಿ ನಮಗೆಲ್ಲರಿಗೂ ಸ್ಪೂರ್ತಿಯಾದ ಶಕ್ತಿ. ಇವತ್ತು ಅವರಿಗೇ ಅರಿವಿಲ್ಲದಂತೆ ಕೆಲಸದಲ್ಲಿ ತೊಡಗಿರುವಾಗಲೇ ಶೂನ್ಯದತ್ತ ಜಾರಿದರೆಂದರೆ ನಂಬಲಾಗುತ್ತಲೇ ಇಲ್ಲ.
ಅಂಗಾಂಗ ನ್ಯೂನ್ಯತೆಯ ನಡುವೆಯೇ ಕರ್ನಾಟಕ ಸೇರಿ ಕೇರಳ,ತಮಿಳುನಾಡು ಸೇರಿದಂತೆ ಇನ್ನಿತರೆ ರಾಜ್ಯಗಳಲ್ಲಿಯೇ ಕಲ್ಯಾಣಕ್ಕೆ ದಾಪುಗಾಲು ಹಿಡುವ ನವ ದಂಪತಿಗಳ ಸಪ್ತಪದಿಗೆ ಕಾರ್ಯಕ್ರಮಕ್ಕೂ ಇವರ ಸೇವೆಯೂ ಮರೆಯಲಾಗದಂತಹ ಸೂಸಂದರ್ಭಗಳು ಕಳೆದ ಏಷ್ಟೋ ಸಂತೋಷದ ಕ್ಷಣಗಳ ನಡುವೆ ಗಣೇಶ್ ಕಾಮತ್ ಎಂಬ ಸಾಹಸ ವ್ಯಕ್ತಿಯ ಹೃದಯಕ್ಕೂ ಆಘಾತ ವಾಯಿತೆಂದು ತಿಳಿದು ಬಹಳ ದುಃಖ ವಾಗಿದೆ ಎಂದು ಮಂಜುನಾಥ ಕಾಮತ್ ರವರು ಮಾಧ್ಯಮದೊಂದಿಗೆ ಗಣೇಶ್ ಕಾಮತ್ ರವರು ಜೀವನದುದ್ದಕ್ಕೂ ಅನುಭವಿಸಿದ ಕಷ್ಟ ಕಾರ್ಪಣ್ಯ ಹಾಗೂ ಸಾಧನೆಯ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
Be the first to comment