ಯಲಬುರ್ಗಾ ಭೂತಾಯೊಡಲ ತಣಿಸಿದ ಕೃಷ್ಣೆ: ಸಚಿವರಾದ ಹಾಲಪ್ಪ ಬಸಪ್ಪ ಆಚಾರ ಸಂತಸ.
ಕೊಪ್ಪಳ ಮಾರ್ಚ್ 01 (ಕರ್ನಾಟಕ ವಾರ್ತೆ): ಜಲಜಲ ಹರಿಯುವ ಬಿಸಿಲಿನ ಯಲಬುರ್ಗಾ ಭೂತಾಯೊಡಲಿಗೆ ಕೃಷ್ಣೆ ಹರಿದು ತಣಿಸಿದ್ದಾಳೆ. ಇದರಿಂದ ಕ್ಷೇತ್ರದ ಅನ್ನದಾತರ ಬಹುದಿನಗಳ ಕನಸು ನನಸಾದಂತಾಗಿದೆ ಎಂದು ರಾಜ್ಯ ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಹಾಲಪ್ಪ ಬಸಪ್ಪ ಆಚಾರ್ ಅವರು ತಿಳಿಸಿದರು
ಯಲಬುರ್ಗಾ ತಾಲೂಕಿನ ಕ್ಷೇತ್ರದಲ್ಲಿ ಕೃಷ್ಣಾ ನದಿ ನೀರು ಹರಿಸುವ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಮಾರ್ಚ 1ರಂದು ಯಲಬುರ್ಗಾ ತಾಲ್ಲೂಕಿನ ಹಗೆದಾಳನ ಜಾಕವೆಲ್ ಸಂಪ್ ವೀಕ್ಷಣೆ ಮಾಡಿದ ಬಳಿಕ ಪತ್ರಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು.
ಕೊಪ್ಪಳ ಏತ ನೀರಾವರಿ ಯೋಜನೆಯು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ರಡಿಯ ಒಂದು ಪ್ರಮುಖ ಉಪ ಯೋಜನೆಯಾಗಿದೆ. ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ನೀರನ್ನು ಎರಡು ಹಂತದಲ್ಲಿ ಲಿಫ್ಟ್ ಮಾಡಿ ಕೊಪ್ಪಳ ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳಡಿ 1.12 ಲಕ್ಷ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಕಲ್ಪಿಸಲಾಗುತ್ತದೆ. ಈ ಯೋಜನೆಯ ಮೂಲಕ ಕುಷ್ಟಗಿ ತಾಲೂಕಿನ 43,760 ಹೆಕ್ಟೇರ್ ಪ್ರದೇಶ, ಯಲಬುರ್ಗಾ ತಾಲೂಕಿನ 45,320 ಹೆಕ್ಟೇರ್ ಪ್ರದೇಶ, ಕೊಪ್ಪಳ ತಾಲೂಕಿನ 3,200 ಹೆಕ್ಟೇರ್ ಪ್ರದೇಶ ಮತ್ತು ಕನಕಗಿರಿ ತಾಲೂಕಿನ 4,000 ಹೆಕ್ಟೇರ್ ಪ್ರದೇಶವು ನೀರಾವರಿ ಕ್ಷೇತ್ರವಾಗಿ ಪರಿವರ್ತನೆಯಾಗಲಿದೆ ಎಂದು ತಿಳಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ರಡಿಯ ಕೊಪ್ಪಳ ಏತ ನೀರಾವರಿ ಯೋಜನೆಯನ್ನು ಎರಡು ಹಂತಗಳಲ್ಲಿ ಕೈಗೊಳ್ಳಲಾಗಿದೆ. 12.815 ಟಿ.ಎಂ.ಸಿ. ನೀರು ಬಳಸಿ ಸಾಂಪ್ರದಾಯಿಕ ನೀರಾವರಿ ವ್ಯವಸ್ಥೆಯಾದ ಕಾಲುವೆ ಜಾಲ ಬದಲಾಗಿ ಸುಮಾರು 2.85 ಲಕ್ಷ ಎಕರೆ ಅಚ್ಚುಕಟ್ಟು ಕ್ಷೇತ್ರಕ್ಕೆ ಸೂಕ್ಷ್ಮ ನೀರಾವರಿ ವ್ಯವಸ್ಥೆ (ಮೈಕ್ರೋ ಇರಿಗೇಷನ್) ಯನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಕೊಪ್ಪಳ ಏತ ನೀರಾವರಿ ಯೋಜನೆಯ ಒಂದನೇ ಹಂತದಲ್ಲಿ ಈ ಹಿಂದೆ ಬಸವಸಾಗರ ಹಿನ್ನೀರನ್ನು ಹುನಗುಂದ ತಾಲೂಕು ಮುರೋಳ ಗ್ರಾಮದಿಂದ ಎತ್ತಿ ಕುಷ್ಟಗಿ ತಾಲೂಕು ಕಲಾಲಬಂಡಿವರೆಗೆ ಹರಿಸಲಾಗಿತ್ತು. ಕಲಾಲಬಂಡಿಯಲ್ಲಿ ಶೇಖರಣೆಯಾದ ನೀರನ್ನು ಈಗ ಎರಡನೇ ಹಂತದಲ್ಲಿ ಕಲಾಲಬಂಡಿಯಿಂದ ಎತ್ತಿ ಹಗೇದಾಳ ಜಾಕವೆಲ್ ಪಂಪಹೌಸ್‌ವರೆಗೆ ನದಿ ನೀರನ್ನು ಹರಿಸಲಾಗಿದೆ. ಇದರಿಂದಾಗಿ ಯಲಬುರ್ಗಾ ಕ್ಷೇತ್ರದ 12 ಕೆರೆಗಳಿಗೆ ಶೀಘ್ರದಲ್ಲಿಯೇ ನೀರು ಪೂರೈಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಕೊಪ್ಪಳ ಏತ ನೀರಾವರಿ ಯೋಜನೆಯ 1 ಹಾಗೂ 2ನೇ ಹಂತದ ಕಾಮಗಾರಿ ಬಹುತೇಕ ಪೂರ್ಣಗೊಂಡು ಈ ಯೋಜನೆಗೆ ಅನುಮೋದನೆ ನೀಡಲಾದ 3001.52 ಕೋಟಿ ರೂ..ಮೊತ್ತದಲ್ಲಿ 2655.62 ಕೋಟಿ ರೂ.ಗಳ ಶೇಕಡಾ 88.47 ರಷ್ಟು ಆರ್ಥಿಕವಾಗಿ ಪ್ರಗತಿ ಸಾಧಿಸಲಾಗಿದೆ ಎಂದರು.
ಕೊಪ್ಪಳ ಏತ ನೀರಾವರಿ ಯೋಜನೆಯ ಎರಡನೇ ಹಂತದ ಪ್ಯಾಕೇಜ್-2 ಮತ್ತು 3ರಲ್ಲಿ ಬರುವ ಯಲಬುರ್ಗಾ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯ ಕೆ-ವೈ-ಕೆ ಮೇನ್ ನ ಮುಖ್ಯ ಕೊಳವೆ, ಕನಕಗಿರಿ ಹಾಗೂ ಯಲಬುರ್ಗಾ ಬ್ರಾಂಚ್, ಯಲಬುರ್ಗಾ ಫೀಡರ್ ಮತ್ತು ಕೊಪ್ಪಳ ಬ್ರಾಂಚ್ ಹಾಗೂ ಕೆರೆ ತುಂಬಿಸುವ ಟ್ಯಾಂಕ್ ಪೀಡರ್‌ಗಳ ಅಳವಡಿಕೆ ಜಾಕ್‌ವಲ್ ಮತ್ತು ಜಾಕ್‌ವಲ್ ವಿದ್ಯುತ್ ಸಂಪರ್ಕ ಟ್ರಾನ್ಸಮಿಷನ್ ಲೈನ್ ಕಾಮಗಾರಿಯು ಪೂರ್ಣಗೊಳ್ಳುವ ಹಂತದಲ್ಲಿರುತ್ತದೆ. ಶೀಘ್ರ ಪ್ರಾಯೋಗಿಕವಾಗಿ ಕೆರೆಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಕಲಾಲಬಂಡಿ ಜಾಕವಲ್‌ಗೆ ಸಂಬಂಧಿಸಿದಂತೆ 110 ಕೆ.ವಿ.ವಿದ್ಯುತ್ ಸಂಪರ್ಕ ಕುಷ್ಟಗಿ-ಕಲಾಲಬಂಡಿ ಟ್ರಾನ್ಸಮಿಷನ್ ಲೈನನ್ನು 2023ರ ಫೆಬ್ರವರಿ 24 ರಂದು ಯಶಸ್ವಿಯಾಗಿ ಲೈನ್‌ಚಾರ್ಜ್ ಮಾಡಿ, ಕಲಾಲಬಂಡಿ 110ಕೆವಿ ಉಪಕೇಂದ್ರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿರುತ್ತದೆ ಎಂದು ಅವರು ಹೇಳಿದರು.
ಸಿಎಂಗೆ ಮನವಿ: ಪ್ರತಿ ವರ್ಷ ಸತತ ಬೀಕರ ಬರಗಾಲಕ್ಕೆ ಸಿಕ್ಕು ನಲುಗುವ ಯಲಬುರ್ಗಾ, ಕುಷ್ಟಗಿ ಕೊಪ್ಪಳ ತಾಲೂಕಗಳ ರೈತರಿಗೆ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ತಪ್ಪಿಸಲು ಮತ್ತು ನೀರಾವರಿಗೆ ಅನುಕೂಲವಾಗಲು ಕೊಪ್ಪಳ ಏತ ನೀರಾವರಿ ಯೋಜನೆಯ 3ನೇ ಹಂತದ ಕಾಮಗಾರಿಕೈಗೊಳ್ಳಲು ಆರ್ಥಿಕ ಸಹಾಯ ಮಾಡುವಂತೆ 2019ರಲ್ಲಿ ಅಂದಿನ ಮುಖ್ಯಮಂತ್ರಿಗಳಿಗೆ ತಾವು ಮನವಿ ಮಾಡಿದ್ದಾಗಿ ಇದೆ ವೇಳೆ ಸಚಿವರು ತಿಳಿಸಿದರು.
ಸಚಿವರ ಪ್ರಯತ್ನಕ್ಕೆ ಮೆಚ್ಚುಗೆ: ಕೊಪ್ಪಳ ಏತ ನೀರಾವರಿ ಯೋಜನೆಯ ಒಂದನೇ ಹಾಗೂ ಎರಡನೇ ಹಂತದ ಕಾಮಗಾರಿಗಳ ಪ್ರಾಯೋಗಿಕ ಪರೀಕ್ಷೆ ಯಶಸ್ವಿ ಪ್ರಯುಕ್ತ ಯಲಬುರ್ಗಾ ತಾಲ್ಲೂಕಿನ ಹಗೇದಾಳ ಗ್ರಾಮದ ನೂತನ ಜಾಕ್ವೆಲ್‌ಗೆ ಕೃಷ್ಣ ನದಿಯ ನೀರು ಬಂದಿರುವುದನ್ನು ಕಂಡ ರೈತರು ಸಂತಷ ವ್ಯಕ್ತಪಡಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಚಿವರಾದ ಹಾಲಪ್ಪ ಬಸಪ್ಪ ಆಚಾರ್ ಅವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಜೈಕಾರ ಕೂಗಿದರು.
ಈ ವೇಳೆ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ರೋಡಲಬಂಡಾ ಕಾರ್ಯಪಾಲಕ ಅಭಿಯಂತರರಾದ ಆರ್ ಡಿ ಬಿರಾದಾರ, ಕೊಪ್ಪಳ ಏತ ನೀರಾವರಿ ಉಪ ವಿಭಾಗ ಯಲಬುರ್ಗಾದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಆರ್ ಡಿ ಬಿರಾದಾರ, ತಹಶೀಲ್ದಾರರಾದ ವಿಠ್ಠಲ್ ಚೌಗಲಾ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷ ಬಿರಾದಾರ ಹಾಗೂ ಮುಖಂಡರಾದ ಬಸಲಿಂಗಪ್ಪ ಬೂತೆ, ಕಳಕಪ್ಪ, ಶಂಕರ ಬಾವಿಮನಿ, ರತನ್ ದೇಸಾಯಿ, ವಿಶ್ವನಾಥ ಮರಿಬಸಪ್ಪನವರ್ ಸೇರಿದಂತೆ ಹಲವು ಗಣ್ಯರು, ಕೃಷ್ಣ ಭಾಗ್ಯ ಜಲ ನಿಗಮದ ಇನ್ನೀತರ ಅಧಿಕಾರಿಗಳು ಮತ್ತು ತಾಂತ್ರಿಕ ಸಿಬ್ಬಂದಿ ಉಪಸ್ಥಿತರಿದ್ದರು
Be the first to comment