ಚಿತ್ತಾಪುರ: ಶಾಸಕ ಪ್ರಿಯಾಂಕ್ ಎಂ. ಖರ್ಗೆ ಅವರನ್ನು ವಿಧಾನಸಭೆ ಚುನಾವಣೆಯಲ್ಲಿ ಸೋಲಿಸುತ್ತೇನೆ ಎಂದು ತೊಡೆ ತಟ್ಟಿದ ಬಾಬುರಾವ್ ಚಿಂಚನಸೂರ ಅವರು ಕೋಲಿ, ಕಬ್ಬಲಿಗ ಜಾತಿಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ತೊಡೆ ತಟ್ಟಿ ಸಮಾಜದ ಋಣ ಮುಟ್ಟಿಸಲಿ ಎಂದು ಚಿತ್ತಾಪುರ ತಾಲ್ಲೂಕು ಕೋಲಿ ಸಮಾಜದ ಮುಖಂಡ ಬಸವರಾಜ ಎಂ. ಚಿನ್ನಮಳ್ಳಿ ಅವರು ಆಗ್ರಹಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಲೋಕಸಭೆ ಚುನಾವಣೆ ಮುಗಿದು ಸರ್ಕಾರ ರಚನೆಯಾಗುತ್ತಿದ್ದಂತೆ ಕೋಲಿ ಸಮಾಜ ಎಸ್.ಟಿ ಪಟ್ಟಿಗೆ
ಸೇರಿಸುವುದಾಗಿ ಸಮಾಜಕ್ಕೆ ವಾಗ್ದಾನ ಮಾಡಿದ ಚಿಂಚನಸೂರ ಅವರು ತನಗೆ ಅಧಿಕಾರ ದೊರೆತ ನಂತರ ವಾಗ್ದಾನ ಮರತು ಬಿಟ್ಟಿದ್ದಾರೆ. ಎಸ್.ಟಿ ಸೇರ್ಪಡೆ ಮಾಡಿಸಿದ ಆದೇಶ ಪತ್ರವನ್ನು ವಿಠಲ್ ಹೇರೂರ ಅವರ ಸಮಾಧಿ ಮೇಲೆ ಇಟ್ಟು ನಮಸ್ಕರಿಸುತ್ತೇನೆ ಎಂದು ಕೋಲಿ ಸಮಾಜಕ್ಕೆ ಕೊಟ್ಟಿರುವ ವಾಗ್ದಾನ, ನೀಡಿರುವ ಭರವಸೆಯಂತೆ ಮೊದಲು ನಡೆದುಕೊಳ್ಳಲಿ ಎಂದು ಅವರು ಒತ್ತಾಯಿಸಿದ್ದಾರೆ.
ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳಿವೆ. ಕೋಲಿ, ಕಬ್ಬಲಿಗ ಜಾತಿ ಎಸ್.ಟಿ ಪಟ್ಟಿಗೆ ಸೇರಿಸುವ ಪ್ರಸ್ತಾವ ಕಂದ್ರದಲ್ಲಿದೆ. ಚಿಂಚನಸೂರ ಅವರಿಗೆ ನಿಜವಾಗಿಯೂ ಸ್ವಜಾತಿಯ ಸ್ವಾಭಿಮಾನ, ಜಾತಿಯ ಹಿತ, ಜನಾಂಗದ ಭವಿಷ್ಯ, ಸಮಾಜದ ಸುಧಾರಣೆಯ ಆಶಯ ಇದ್ದರೆ ಸರ್ಕಾರದ ಮುಂದೆ ತೊಡೆ ತಟ್ಟಿ ಎಸ್.ಟಿ ಮಾಡಿಸಲಿ. ಅದು ಮಾಡಲಾಗದಿದ್ದರೆ ಸಮಾಜಕ್ಕೆ ಬಹಿರಂಗವಾಗಿ ಕ್ಷಮೆ ಕೇಳಲಿ ಎಂದು ಅವರು ಒತ್ತಾಯಿಸಿದ್ದಾರೆ.
ಕೇವಲ ಸ್ವಾರ್ಥ ಸಾಧನೆ, ತನಗಾಗಿ ಅಧಿಕಾರ ಕುರ್ಚಿ ಇರಬೇಕು ಎಂಬುದ ಅವರಿಗೆ ಮುಖ್ಯ. ರಾಜಕೀಯವೆಂದರೆ ದ್ವೇಷ, ಹಗೆತನ, ಸೇಡು ಸಾಧಿಸುವ ಕ್ಷೇತ್ರ ಎಂದು ಚಿಂಚನಸೂರ ತಿಳಿದುಕೊಂಡಿದ್ದಾರೆ. ಕಳೆದ 25 ವರ್ಷಗಳಿಗಿಂತ ಹೆಚ್ಚು ಕಾಲ ಅಧಿಕಾರದಲ್ಲಿದ್ದ ಅವರು ವ್ಯಕ್ತಿ ಗುಣಗಾನ ಮಾಡುವುದು ಕಲಿತಿದ್ದಾರೆಯೆ ಹೊರತು ರಾಜಕೀಯ ಸಿದ್ಧಾಂತ, ಅಭಿವೃದ್ಧಿ,
ಸಮಾಜ ಸುಧಾರಣೆ, ಸಂವಿಧಾನ ಆಶಯ ಅವರಿಗೆ ಪರಿಚಯವೇ ಇಲ್ಲ ಎಂದು ಅವರು ಚಿಂಚನಸೂರ ರಾಜಕೀಯ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ.
ಇಂದು ಯಾರ ವಿರುದ್ಧ ತೊಡೆ ತಟ್ಟಿ ಸೋಲಿಸುವ ಮಾತನಾಡುತ್ತಿದ್ದಾರೆಯೊ ಮೂರು ದಶಕಗಳ ಕಾಲ ಅವರ ಜೊತೆಗಿದ್ದು ಕೋಲಿ ಸಮಾಜ ಎಸ್.ಟಿ ಪಟ್ಟಿಗೆ ಸೇರಿಸಲು ಒತ್ತಾಯಿಸಲಿಲ್ಲ. ಎಸ್.ಟಿ ಮಾಡದಿದ್ದರೆ ನಿಮ್ಮನ್ನು ಸೋಲಿಸಿಯಡ ಬಿಡುವೆ ಎಂದು ಅಂದೇ ತೊಡೆ ತಟ್ಟಿದ್ದರೆ ಸಮಾಜ ಎಸ್.ಟಿ ಆಗುತ್ತಿತ್ತು. ಈ ಬಗ್ಗೆ ಸದಸನದಲ್ಲಿ ಒಂದೂ ಮಾತನಾಡಿಲ್ಲ. ಇದು ಅವರ ತಿಳಿಗೇಡಿತನಕ್ಕೆ ಸಾಕ್ಷಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ರಾಜಕೀಯ ಮತ್ತು ರಾಜಕಾರಣ ಕುರಿತು ಸ್ಪಷ್ಟ ಅರಿವಿಲ್ಲದ ಅವರು ತಮಗಾಗದ ರಾಜಕಾರಣಿಗಳ ವಿರುದ್ಧ ಸೇಡು ಸಾಧಿಸಲು ತನ್ನ ಕೋಲಿ, ಕಬ್ಬಲಿಗ ಜಾತಿಯನ್ನ ಅಸ್ತ್ರವಾಗಿ ಮಾಡಿಕೊಂಡು ಸಮಾಜಕ್ಕೆ ಮೋಸ ಮಾಡುವ ಅತ್ಯಂತ ಹೀನವಾದ ರಾಜಕೀಯ ಮಾಡುತ್ತಿದ್ದಾರೆ. ಕೋಲಿ, ಕಬ್ಬಲಿಗ ಜಾತಿಗಳನ್ನು ಬಡಿದೆಬ್ಬಿಸಿ ಅರಿವಿನ ಜ್ಯೋತಿ ಹೊತ್ತಿಸಿ ಜಾಗೃತೆ ಮೂಡಿಸಿದ ವಿಠಲ್ ಹೇರೂರ ಅವರ ಸಮಾಧಿಯ ಮೇಲೆ ಎಸ್.ಟಿ ಪತ್ರ ಇಟ್ಟು ನಮಸ್ಕರಿಸುತ್ತೇನೆ ಎಂದು ಸಮಾಜದ ಜನರಿಗೆ ಹೇಳಿ ಮೋಸ ಮಾಡಿದ್ದನ್ನು ಸಮಾಜ ಮರೆತಿಲ್ಲ ಎಂದು ಅವರು ವಾಗ್ದಾಳಿ ಮಾಡಿದ್ದಾರೆ.
ಚಿಂಚನಸೂರ ಅವರು ಎಂದೂ ಸೈದ್ಧಾಂತಿಕ ರಾಜಕಾರಣ ಮಾಡಲೇ ಇಲ್ಲ. ಸದಾ ಅಧಿಕಾರ, ಕುರ್ಚಿಗಾಗಿ ಬಡಿದಾಡುತ್ತಾ, ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಾ ಕೋಲಿ, ಕಬ್ಬಲಿಗ ಸಮಾಜದ ಏಳಿಗೆಯನ್ನ ಮೂಲೆಗೊತ್ತಿ ತಮ್ಮ ವೈಯಕ್ತಿಕ ಹಿತಸಾಧನೆಗೆ ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಕುಳಿತು ಖರ್ಗೆ ದ್ವಯರ ವಿರುದ್ಧ ತೊಡೆ ತಟ್ಟಿರುವ ಅವರ ತೊಡೆಗಳು ಚುನಾವಣೆಯಲ್ಲಿ ಅದಷ್ಟು ಗಟ್ಟಿಯಾಗಿರುತ್ತವೆ ಎನ್ನುವುದು ಬಹಿರಂಗವಾಗಲಿದೆ. ಕೋಲಿ, ಕಬ್ಬಲಿಗ ಸಮಾಜದ ಮುಂದೆ ಅವರ ಮೋಸದಾಟ ಇನ್ನು ಮುಂದೆ ನಡೆಯಲಾರದು. ಚುನಾವಣೆಯ ನಂತರ ರಾಜಕೀಯ ಕ್ಷೇತ್ರದಿಂದ ನಿರ್ಗಮಿಸಲು ಈಗಲೇ ಅವರು ಸಿದ್ಧರಾಗಬೇಕು ಎಂದು ಅವರು ವ್ಯಂಗ್ಯವಾಡಿದ್ದಾರೆ.
Be the first to comment