ಮಸ್ಕಿ : ತಾಲೂಕಿನ ಪಾಮನಕಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಆನಂದಗಲ್ ಗ್ರಾಮದಲ್ಲಿ ಸಂಭ್ರಮ ಸಡಗರದಿಂದ ಶ್ರೀ ಆಂಜನೇಯ ಜಾತ್ರಾ ಮಹೋತ್ಸವ ಜರುಗಿತು. ಆಂಜನೇಯ ದೇವಸ್ಥಾನದ 4ನೇ ವರ್ಷದ ಜಾತ್ರಾ ಮಹೋತ್ಸವ ಶನಿವಾರ ನಡೆಯಿತು. ಜಾತ್ರೆಯ ಅಂಗವಾಗಿ ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ನಂತರ ಶ್ರೀ ಷ. ಬ್ರ. ಅಮರೇಶ್ವರ ಗುರು ಅಭಿನವ ಗಜದಂಡ ಶಿವಾಚಾರ್ಯ ಮಹಾಸ್ವಾಮೀಜಿಗಳು ಬೃಹನ್ ಮಠ ದೇವರಭೂಪುರ ಚಾಲನೆ ನೀಡಿದರು. ನಂತರ ಗ್ರಾಮದ ಶ್ರೀಮರಿಬಸವಲಿಂಗೇಶ್ವರ ದೇವಸ್ಥಾನದಿಂದ ಆಂಜನೇಯ ದೇವರ ಹಾಗೂ ಕುಂಭ, ಕಳಸ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಮೆರವಣಿಗೆಯಲ್ಲಿನ ಡೊಳ್ಳಿನ ತಂಡ, ವಿವಿಧ ಕಲಾ ತಂಡ ಹಾಗೂ ವಾದ್ಯಮೇಳಗಳು ಜನರನ್ನು ಆಕರ್ಷಿಸಿದವು. ಮಧ್ಯಾಹ್ನ ಭಕ್ತರಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಆಂಜನೇಯ ಸ್ವಾಮಿಯ ದರ್ಶನ ಪಡೆದರು.
Be the first to comment