ಸಂವಿಧಾನ ಶಿಲ್ಪಿಗೆ ಅವಮಾನ ಸಹಿಸಲಾಗದು : ಬಿಎಸ್‌ಪಿ ಆಕ್ರೋಶ

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳ

ಕನ್ನಡ ಮತ್ತು ಕನ್ನಡ ನಾಡಿನ ಬಗ್ಗೆ ಕನಿಷ್ಠ ಅರಿವು ಮತ್ತು ಲವಲೇಶವೂ ಅಭಿಮಾನವಿಲ್ಲದ ರೋಹಿತ್ ಚಕ್ರವರ್ತಿಯನ್ನು ಪಠ್ಯ ಪುಸ್ತಕಗಳ ಪರಿಷ್ಕರಣ ಸಮಿತಿ ಅಧ್ಯಕ್ಷರನ್ನಾಗಿ ಮಾಡಿ, ದೇಶಕ್ಕೆ ಸಂವಿಧಾನವನ್ನು ಕೊಟ್ಟಂತಹ ಮಹಾನ್ ವ್ಯಕ್ತಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಒಳಗೊಂಡಂತೆ ಹಲವಾರು ಮಹನೀಯರ ಚರಿತ್ರೆಗಳ ಭಾಗವನ್ನು ಪಠ್ಯಪುಸ್ತಕಗಳಲ್ಲಿ ಕೈಬಿಟ್ಟಿರುವುದು ಖಂಡನೀಯ ಎಂದು ರಾಜ್ಯ ಬಿಎಸ್‌ಪಿ ಕಾರ್ಯದರ್ಶಿ ನಂದಿಗುಂದ ಪಿ.ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೭ನೇಯ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿ ಹಿಂದೆ ಇದ್ದಂತಹ ಬಾಬಾ ಸಾಹೇಬರ ತಂದೆ-ತಾಯಿ, ಹುಟ್ಟಿದ ದಿನಾಂಕ ಮತ್ತು ಜನ್ಮ ಸ್ಥಳಗಳ ವಿವರಗಳನ್ನು ತೆಗೆದುಹಾಕಲಾಗಿದೆ. ಅದೇ ಪುಸ್ತಕದಲ್ಲಿದ್ದಂತಹ ಬಾಬಾಸಾಹೇಬರ ಜೀವನದ ಪ್ರಮುಖ ಘಟನೆಗಳಾದ ಕಾಲರಾಮ್ ದೇವಸ್ಥಾನ ಪ್ರವೇಶ ಚಳುವಳಿ ಹಾಗೂ ಮಹಾಡ್ ಕೆರೆಯಲ್ಲಿ ನೀರು ಕುಡಿದ ಚಳುವಳಿಗಳ ವಿವರಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ೬ ನೆಯ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಚೆನ್ನಣ್ಣ ವಾಲೀಕಾರರು ಬಾಬಾಸಾಹೇಬರನ್ನು ಕುರಿತು ಬರೆದಿದ್ದ ‘ನೀ ಹೋದ ಮರುದಿನ’ ಎಂಬ ಜನಪ್ರಿಯ ಕವಿತೆಯನ್ನು ಕೈ ಬಿಡಲಾಗಿದೆ. ೯ ನೆಯ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ, ಡಾ. ಅರವಿಂದ ಮಾಲಗತ್ತಿಯವರು ಬುದ್ಧರನ್ನು ಕುರಿತು ಬರೆದಿದ್ದ ‘ಮರಳಿ ಮನೆಗೆ’ ಎಂಬ ಕವಿತೆಯನ್ನು ತೆಗೆದುಹಾಕಲಾಗಿದೆ. ೯ನೆಯ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿದ್ದ ‘ನಮ್ಮ ಸಂವಿಧಾನ’ ಎಂಬ ಪಾಠದಲ್ಲಿ, ಸಂವಿಧಾನ ರಚನಾ ಕಾರ್ಯದಲ್ಲಿ ಬಾಬಾಸಾಹೇಬರಿಗಿಂತ ಬಿ.ಎನ್.ರಾವ್‌ರವರ ಕೊಡುಗೆ ಹೆಚ್ಚಾಗಿತ್ತು ಎಂಬಂತೆ ಬರೆಯಲಾಗಿದೆ; ಸಂವಿಧಾನ ರಚನೆಗೆ ಅತ್ಯಾವಶ್ಯಕ ಚೌಕಟ್ಟನ್ನು ರಾವ್‌ರವರೇ ಬರೆದಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, ಹಿಂದಿನ ಪಠ್ಯಪುಸ್ತಕದಲ್ಲಿ ಇದ್ದಂತಹ ‘ಬಾಬಾಸಾಹೇಬರು ಸಂವಿಧಾನ ರಚನೆಗೆ ನೀಡಿದ ಕೊಡಗೆಯಿಂದಾಗಿ ಅವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯಲಾಗಿದೆ’ ಎಂಬ ವಾಕ್ಯವನ್ನು ಪೂರ್ಣವಾಗಿ ಕತ್ತರಿಸಿ ಹಾಕಲಾಗಿದೆ. ೧೦ನೆಯ ತರಗತಿಯ ಸಮಾಜ ವಿಜ್ಞಾನದಲ್ಲಿ, ‘ಡಾ. ಅಂಬೇಡ್ಕರರು ಜಾತಿ ವ್ಯವಸ್ಥೆಯಿಂದ ಬೇಸತ್ತು, ಜಾತಿ ಮತ್ತು ಸಾಮಾಜಿಕ ಶ್ರೇಣಿಯನ್ನು ವಿರೋಸಿದ್ದ ಬೌದ್ಧ ಧರ್ಮವನ್ನು ಸ್ವೀಕರಿಸಿದರು’ ಎಂದಿದ್ದ ವಾಕ್ಯವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಬಾಬಾಸಾಹೇಬರ ವಿದ್ವತ್ತು ಮತ್ತು ಅವರು ರಚಿಸಿದ ಸಂವಿಧಾನದ ಬಗ್ಗೆ ಇಡೀ ಜಗತ್ತು ಮೆಚ್ಚಿಕೊಂಡಿರುವಾಗ, ಆ ಮಹಾನಾಯಕನ ಗೌರವವು ಮರೆಯಾಗಲು ಭಾರತೀಯರಾದ ನಾವು ಎಂದಿಗೂ ಬಿಡುವುದಿಲ್ಲ. ಸಂವಿಧಾನ ಶಿಲ್ಪಿಗೆ ಆಗಿರುವ ಅವಮಾನವನ್ನು ಖಂಡಿಸಿ ತಾಲೂಕು ಕೇಂದ್ರಗಳಲ್ಲಿ ಬಿಎಸ್‌ಪಿ ಕಾರ್ಯಕರ್ತರೆಲ್ಲರೂ ಒಗ್ಗೂಡಿ ಪಂಜಿನ ಮೆರವಣಿಗೆಯನ್ನು ಮಾಡಲಿದ್ದೇವೆ ಮತ್ತು ವಕ್ರಬುದ್ಧಿಯ ಈ ರೋಗಿಷ್ಟರು ರಚಿಸಿರುವ ಪಠ್ಯಪುಸ್ತಕಗಳನ್ನು ವಾಪಸ್ಸು ಪಡೆಯಬೇಕೆಂದೂ, ಬಿ.ಸಿ.ನಾಗೇಶ್ ಅವರನ್ನು ಸಂಪುಟದಿಂದ ವಜಾಮಾಡಬೇಕೆಂದು ಮತ್ತು ರೋಹಿತ್ ಚಕ್ರವರ್ತಿಯ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ ಅನ್ವಯ ದೂರು ದಾಖಲಿಸಿ ಬಂಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುತ್ತದೆ ಎಂದು ವಿವರಿಸಿದರು.

CHETAN KENDULI

Be the first to comment

Leave a Reply

Your email address will not be published.


*