ಭಟ್ಕಳ
ಭಟ್ಕಳ ತಾಲೂಕಿನ ಜಾಲಿ ಕೋಡಿ ಸಮುದ್ರ ಕಿನಾರೆಯಿಂದ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದು ಎಂದು ಗ್ರಾಮದ ಕೆಲವು ಯುವಕರು ದೂರಿದ್ದಾರೆ.
ಈ ಬಗ್ಗೆ ಟಿಪ್ಪರ್ ಲಾರಿಯೊಂದರಲ್ಲಿ ಅಕ್ರಮವಾಗಿ ಸಮುದ್ರದ ಮರಳು ತುಂಬಿಕೊಂಡು ಸಾಗುತ್ತಿರುವ ವೇಳೆಯಲ್ಲಿ ಗ್ರಾಮಸ್ಥರು ತಡೆದು ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟಿದ್ದು ಎಲ್ಲಡೆ ವೈರಲ್ ಆಗಿದೆ. ಗುತ್ತಿಗೆದಾರರೋರ್ವರು ಜಾಲಿ ಕೋಡಿ ಸಮುದ್ರ ಕಿನಾರೆಯಲ್ಲಿ ಕಾಮಗಾರಿಯನ್ನು ನಡೆಸುತ್ತಿದ್ದು ಕಾಮಗಾರಿಯ ನೆಪದಲ್ಲಿ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ ಎನ್ನುವುದು ಅವರ ಆರೋಪವಾಗಿದೆ. ದಿನಕ್ಕೆ 10 ರಿಂದ 15 ಟಿಪ್ಪರ್ ಲಾರಿಯಲ್ಲಿ ಮರಳು ಸಾಗಾಟ ನೆಡಯುತ್ತಿದ್ದು ಲಾರಿಯನ್ನು ಅಡ್ಡ ಹಾಕುತ್ತಲೇ ಟಿಪ್ಪರ್ ಲಾರಿಯ ಚಾಲಕ ಹಾಗೂ ಮರಳು ತುಂಬಿಸುತ್ತಿರುವ ಜೆ.ಸಿ.ಬಿ. ಚಾಲಕರು ಪರಾರಿಯಾಗಿದ್ದಾರೆ ಎಂದೂ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಕಳೆದ ಹಲವಾರು ದಿನಗಳಿಂದ ಇದೇ ರೀತಿಯ ಅಕ್ರಮ ವ್ಯವಹಾರ ನಡೆಯುತ್ತಿದ್ದು ಈ ಕುರಿತು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು, ಇದು ಗುತ್ತಿಗೆದಾರರಿಂದ ನಡೆಯುತ್ತಿದೆಯೇ, ಲಾರಿಯ ಚಾಲಕರು ಕಳ್ಳ ದಂಧೆ ನಡೆಸುತ್ತಿದ್ದಾರೆ, ಇದರ ಹಿಂದೆ ಪ್ರಭಾವಿಗಳ ಕೈವಾಡ ಇದೆಯೇ ಎನ್ನುವ ಕುರಿತೂ ತನಿಖೆಯನ್ನು ನಡೆಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಜಾಲಿ ಕೋಡಿಯಲ್ಲಿ ಅಕ್ರಮ ಮರಳುಗಾರಿಕೆಯನ್ನು ನಡೆಸುತ್ತಿರುವ ಕುರಿತು ಈಗಾಗಲೇ ದೂರು ಬಂದ ಪ್ರಕಾರವಾಗಿ ಕ್ರಮ ಜರುಗಿಸಲಾಗಿದ್ದು ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದ ಟಿಪ್ಪರ್ ಹಾಗೂ ಇತರೇ ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು ಅಕ್ರಮ ಮರಳನ್ನು ಸಹ ವಶಕ್ಕೆ ಪಡೆಯಲಾಗಿದೆ. ಅಕ್ರಮ ಮರಳು ಸಾಗಾಟ ಮಾಡುತ್ತಿರುವವರ ವಿರುದ್ಧ ಕಾನೂನು ಪ್ರಕಾರ ಕೈಗೊಳ್ಳಬೇಕಾದ ಕ್ರಮ ಕೈಗೊಳ್ಳಲಾಗುವುದು. ಇನ್ನು ಮುಂದೆ ಅಕ್ರಮ ಮರಳುಗಾರಿಕೆಯು ನಡೆಯದಂತೆ ಸೂಕ್ತ ಕ್ರಮವನ್ನು ಕೂಡಾ ಜರುಗಿಸಲಾಗುವುದು ಎಂದು ತಹಸೀಲ್ದಾರ್ ಡಾ. ಸುಮಂತ್ ಬಿ.ಇ. ತಿಳಿಸಿದ್ದಾರೆ.
Be the first to comment