ನಿಮ್ಮ ಅಪ್ಪನ ಆಸ್ತಿ ಕೇಳುತ್ತಿದೆವಾ? ಸರಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಕೆಂ.ಎಂ ಕರ್ಕಿ ಗುಡುಗು

ವರದಿ:ಕುಮಾರ ನಾಯ್ಕ

ಭಟ್ಕಳ:

ನಮ್ಮ ಸಮಾಜಕ್ಕೆ ಸಂವಿಧಾನಬದ್ಧವಾಗಿ ಸಿಗಬೇಕಾದ ಹಕ್ಕನ್ನು ನೀಡುವಂತೆ ಸರಕಾರಕ್ಕೆ 67 ದಿನದಿಂದ ಒತ್ತಾಯಿಸುತ್ತಾ ಬಂದಿದ್ದೇವೆ. ಆದರೆ ಸರಕಾರ ನಮ್ಮ ಹಕ್ಕು ನಮಗೆ ನೀಡುವಲ್ಲಿ ಮೀನಾಮೇಷ ಎಣಿಸುತ್ತಿದೆ ಎಂದು ಮೊಗೇರ ಸಮಾಜದ ತಾಲೂಕಾ ಅಧ್ಯಕ್ಷ ಅಣ್ಣಪ್ಪ ಮೊಗೇರ ಹೇಳಿದರು

ಅವರು ಶನಿವಾರದಂದು ಇಲ್ಲಿನ ಮಿನಿ ವಿಧಾನಸೌಧದ ಪಕ್ಕದಲ್ಲಿನ ಧರಣಿ ಸ್ಥಳದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ನಮಗೆ ಈ ಹಿಂದೆ ನೀಡಲಾದ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಮಾನ್ಯತೆಯನ್ನು ನೀಡುವಂತೆ ಕೇಳಿದ್ದೇವೆ ಹೊರತಾಗಿ ಇನ್ಯಾವುದೇ ರೀತಿಯಲ್ಲಿ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳುವಂತಹ ವಿಚಾರಗಳನ್ನು ಕೇಳುತ್ತಿಲ್ಲ. ಈಗಾಗಲೇ ಜಿಲ್ಲೆ, ತಾಲೂಕಿನ ವಿವಿಧ ಭಾಗದ ಮೊಗೇರ ಸಮಾಜದ ಜನರು ದಿನಕ್ಕೆ ಪಾಳಿಯಂತೆ ಬಂದು ಧರಣಿಗೆ ಸಾಥ್ ನೀಡುತ್ತಿದ್ದು, ಕೆಲವರು ಉಗ್ರ ರೂಪದಂತಹ ಪ್ರತಿಭಟನೆ ಮೂಲಕ ಸಹ ಸರಕಾರದ ಗಮನಕ್ಕೆ ತಂದಿದ್ದೇವೆ ಎಂದರು.

ಜಿಲ್ಲೆಯ ಮೊಗೇರ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪುಮಾಣಪತ್ರ ಮತ್ತು ಸೌಲಭ್ಯಗಳನ್ನು ನೀಡುವಂತೆ ಮಾರ್ಚ್ 23ರಿಂದ ಆರಂಭಿಸಿದ್ದ ಮೊಗೇರ ಸಮಾಜದ ಧರಣಿ ಸತ್ಯಾಗ್ರಹ 67 ದಿನಗಳನ್ನು ಪೂರ್ಣಗೊಳಿಸಿದೆ. ಆದರೂ ಸಹ ಸರಕಾರ ಕೇವಲ ಆಶ್ವಾಸನೆ ಹೊರತಾಗಿ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಬೇಸರ ವ್ಯಕ್ತಪಡಿಸಿದ್ದಾರೆ.

ಹಿಂದೊಮ್ಮೆ ಮೊಗೇರ ಸಮಾಜಕ್ಕೆ ಇದೇ ರೀತಿ ಸಮಸ್ಯೆ ಎದುರಾಗಿದ್ದ ವೇಳೆ 2005ರಲ್ಲಿ ಸತತ 67 ದಿನಗಳ ಕಾಲ ಧರಣಿ ಸತ್ಯಾಗ್ರಹ ನಡೆಸಿ ನಮ್ಮ ಹಕ್ಕನ್ನು ನಾವು ಪಡೆದುಕೊಂಡಿದ್ದೇವೆ. ಈಗಲೂ ಸಹ 67 ದಿನ ಕಳೆದು ಧರಣಿ ಮುಂದುವರೆಸಿದ್ದೇವೆ. ಆದಾಗ್ಯೂ ಸಹ ಸರಕಾರ ನಮ್ಮತ್ತ ಗಮನ ಹರಿಸುತ್ತಿಲ್ಲ. ಇದೇ ರೀತಿ ಮುಂದುವರೆದಲ್ಲಿ ನಮ್ಮ ಸಮಾಜದಿಂದ ಸರಕಾರಕ್ಕೆ ಪ್ರತಿರೂಪವೊಡ್ಡಿ ತೀವ್ರ ಸ್ವರೂಪದ ಧರಣಿ ಹಾಗೂ ಪ್ರತಿಭಟನೆ ನಡೆಸುವುದಾಗಿ ಜಿಲ್ಲಾಧಿಕಾರಿಗಳಿಗೆ ಹಾಗೂ ತಾಲೂಕಾಡಳಿತಕ್ಕೆ ಎಚ್ಚರಿಸಿ ಮನವಿ ಹಾಗೂ ಪ್ರತಿಭಟನೆಯ ರೂಪುರೇಷೆಯನ್ನು ಸಹ ನೀಡಿದ್ದೇವೆ. ಸರಕಾರ ತಾನಾಗಿಯೇ ನಮ್ಮ ಉಗ್ರ ಸ್ವರೂಪದ ಹೋರಾಟಕ್ಕೆ ಮಣಿದು ನಮ್ಮ ಹಕ್ಕನ್ನು ನೀಡುವಂತೆ ಮಾಡಲಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಮೊಗೇರ ಸಮಾಜದ ಹಿರಿಯ ಮುಖಂಡ ಎಫ್.ಕೆ.ಮೊಗೇರ, ಗುರುದಾಸ ಮೊಗೇರ, ವೆಂಕಟರಮಣ ಮೊಗೇರ ಸೇರಿದಂತೆ ಸಮಾಜದ ಯುವಕರು, ಮಹಿಳೆಯರು, ಮಕ್ಕಳು ಇದ್ದರು.

‘ನಿಮ್ಮಪ್ಪನ ಆಸ್ತಿ ಕೇಳುತ್ತಿದ್ದೇವಾ?’–ಈ ಸರಕಾರ ಜನರಿಂದ ಆಯ್ಕೆಯಾಗಿದ್ದು. ಮಂಗಳೂರು, ಕಾರವಾರ, ಕುಮಟಾದಲ್ಲಿ ಯಾರೋ ಮೊಗೇರ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಮಾನ್ಯತೆ ನೀಡಬೇಡಿ ಎಂದಿರುವುದಕ್ಕೆ ನಮಗೆ ಮೋಸ ಮಾಡುತ್ತಿದ್ದಾರೆ. ನೆರೆಮನೆಯವರ ಚಾಡಿ ಮಾತು ಕೇಳಿ ಸರಕಾರ ಮೊಗೇರ ಸಮಾಜಕ್ಕೆ ಬಹುದೊಡ್ಡ ಅನ್ಯಾಯ ಮಾಡುತ್ತಿದೆ. ನಿಮ್ಮ ಬುದ್ದಿಯಲ್ಲಿ ಸರಕಾರ ನಡೆಸಲು ಸಾಧ್ಯವಿಲ್ಲವಾದರೆ ಎಲ್ಲರೂ ರಾಜೀನಾಮೆ ನೀಡಿ ಮನೆಗೆ ತೆರಳಿ ಎಂದು ಜಿಲ್ಲಾ ಮೊಗೇರ ಸಮಾಜದ ಅಧ್ಯಕ್ಷ ಕೆ.ಎಮ್.ಕರ್ಕಿ ಆಕ್ರೋಶ ವ್ಯಕ್ತಪಡಿಸಿದರು.

ನಾವೇನು ನಿಮ್ಮಪ್ಪನ ಆಸ್ತಿ ಕೇಳುತ್ತಿದ್ದೇವಾ? ಇಲ್ಲವಲ್ಲ. ನಮ್ಮ ಅಪ್ಪನ, ನಮ್ಮ ಸಂವಿಧಾನಬದ್ಧ ಹಕ್ಕನ್ನು ನಾವು ಕೇಳುತ್ತಿರುವುದು. ಇದನ್ನು ನೀಡಲು ಆಗದಿದ್ದರೆ ನಮ್ಮನ್ನು ಕಾಪಾಡಲು ಸರಕಾರಗಳು ಯಾಕೆ? 1977ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸ್ ಅವರ ನೇತ್ರತ್ವದಲ್ಲಿ ಎಸ್.ಎಮ್.ಯಾಹ್ಯಾ ಅವರು ಸಚಿವರಿದ್ದ ಸಂದರ್ಭದಲ್ಲಿ ಮೊಗೇರ ಸಮಾಜಕ್ಕೆ ನೀಡಿದ್ದ ವಿಶೇಷ ಆದೇಶ ನಮ್ಮ ಬಳಿಯಲ್ಲಿದೆ. ಬೇಕಿದ್ದರೆ ಅಂದು ನೀಡಿದ ಆದೇಶ ಪ್ರತಿಯನ್ನು ನಿಮಗೆ ನೀಡಲಿದ್ದೇವೆ ಎಂದರು.

ಸಮುದ್ರದಲ್ಲಿ ರಭಸದ ಅಲೆಗಳ ಮಧ್ಯೆ ಹೋರಾಟ ಮಾಡಿ ಬದುಕು ಕಟ್ಟಿಕೊಳ್ಳುತ್ತಾ ಬದುಕುತ್ತಿರುವ ನಮಗೆ ನಿಮ್ಮ ವಿರುದ್ಧ ಹೋರಾಟ ಮಾಡುವುದು ದೊಡ್ಡ ವಿಷಯವಲ್ಲ. ನಮ್ಮ ಸಮಾಜದ ತಾಳ್ಮೆ ಹಾಗೂ ಸಂಯಮ ಪರೀಕ್ಷಿಸಬೇಡಿ. ಮುಂದೇನಾದರು ಸಮಾಜದ ಜನರ ಹೋರಾಟದ ದಿಕ್ಕು ಬದಲಾದರೆ ಅದಕ್ಕೆ ಈ ಸರಕಾರದ ಜನಪ್ರತಿನಿಧಿಗಳ ದೌರ್ಬಲ್ಯ ಹಾಗೂ ಬೇಜವಾಬ್ದಾರಿತನವೇ ಕಾರಣ ಆಗಲಿದೆ ಎಂದರು.

2005ರಲ್ಲಿ 68 ದಿನದ ಧರಣಿ ಸತ್ಯಾಗ್ರಹ ನಡೆಸಿ ಅಷ್ಟರೊಳಗೆ ನಮಗೆ ನಮ್ಮ ಸೌಲಭ್ಯಗಳನ್ನು ನೀಡಿದ್ದರು. ಈಗ ಸೋಮವಾರಕ್ಕೆ 69 ದಿನವಾಗಲಿದ್ದು, ಅಂದು ಅಮಾವಾಸ್ಯೆಯಿದೆ. ನಿಮ್ಮೆಲ್ಲರ (ಜನಪ್ರತಿನಿಧಿಗಳು) ಪಿಂಡವನ್ನು ಹಾಕಿ ಒಂದು ನಿರ್ಧಾರಕ್ಕೆ ಬನ್ನಿ.

Be the first to comment

Leave a Reply

Your email address will not be published.


*