ಸಾಹಿತ್ಯ
ಕುಗ್ರಾಮ ಕುಪ್ಪಳಿಯಿಂದ ಸಪ್ಪಳವಿಲ್ಲದೆ ಕುಪ್ಪಳಿಸಿದ,
ಜಗದ ಅಡಿಯಿಂದ ಮುಡಿಯ ವರೆಗೆ ಅಪ್ಪಳಿಸಿದ,
ಕಂಪು ಇಂಪಿನ ‘ಕುವೆಂಪು’ ಕಾವ್ಯನಾಮದ ಪುಟ್ಟಪ್ಪ,
ಸರ್ವ ಕನ್ನಡಿಗರ ಸಾರ್ವಕಾಲಿಕ ದಿಗ್ಗಜ ಮಹಾಬೆಟ್ಟಪ್ಪ ।
ಕನ್ನಡಿಗರ ಹೃದಯಾಂತರಾಳದ ನೆನಪಿನ ದೋಣಿ,
ಸಂಚರಿಸಿ ಸಂಚಯಿಸಿಹುದು ಕಾವ್ಯಾನುಸಂಧಾನದ ವಾಣಿ,
ವೈಜ್ಞಾನಿಕ-ವೈಚಾರಿಕತೆಯ ಹರಿಗೋಲಿನ ಅಂಬಿಗ,
ಜಾತಿ-ಮತ-ಪಂಥದ ಗೋಡೆಗಳ ಕೆಡವಿದ ನಂಬಿಗ ।
ಸಹ್ಯಾದ್ರಿಯಿಂ ಹಿಮಾದ್ರಿವರೆಗೆ ಹಬ್ಬಿ ತಬ್ಬಿದ ಕೀರ್ತಿ,
ಕನ್ನಡ ಸಾಹಿತ್ಯ ಲೋಕಕೆ ನಿತ್ಯ ನಿರಂತರ ಸ್ಫೂರ್ತಿ,
ಆಂಗ್ಲ ಭಾಷೆಗೆ ಬಲಿಯಾಗದ ಕನ್ನಡದ ಶಿರೋಮಣಿ,
ಪ್ರಥಮ ಜ್ಞಾನಪೀಠದ ಕನ್ನಡಾಂಬೆಯ ಮುಕುಟಮಣಿ।
ಸಿರಿ-ಸಂಪತ್ತಿನ ಕತ್ತಲಿಗೆ ಬೆನ್ನು ಮಾಡಿದ ಉದಾರಿ….
ಜ್ಞಾನದಂಗಳದಿ ಬಾರಿಸಿದ ಕನ್ನಡ ಡಿಂಡಿಮದ ರುವಾರಿ,
‘ಮನುಜ ಮತ ವಿಶ್ವಪಥದ’ ಮಹಾ ಸಂದೇಶವಾದಿ,
ಮನುಸ್ಮೃತಿ ಮನ್ವಂತರದ ಕರ್ಮಠ ಸಂದೇಹವಾದಿ।
ವಿಸ್ತೃತ “ವಿಶ್ವಮಾನವ ಸಂದೇಶದ” ವಿಶಾಲ ಹೃದಯಿ,
ಬಯಲಿನಲೂ ಮಲೆನಾಡ ಉಸಿರಾಡಿದ ಸಹೃದಯಿ!?
–ಮಹಾಂತೇಶ್.ಬಿ.ನಿಟ್ಟೂರ್
ದಾವಣಗೆರೆ.
Be the first to comment