ಜಿಲ್ಲಾ ಸುದ್ದಿಗಳು
ಬಾಗಲಕೋಟೆ:2022 ನೇ ಸಾಲಿನ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಭಾರತದ ಚುನಾವಣಾ ಆಯೋಗವು ಸ್ವೀಪ್ ಕಾರ್ಯಕ್ರಮದ ಮೂಲಕ ರಾಷ್ಟ್ರೀಯ ಮತದಾರರ ಜಾಗೃತಿ ಸ್ಪರ್ಧೆಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿದೆ. ಎಲ್ಲಾ ವಯೋಮಾನದವರಿಗೂ ಮುಕ್ತ ಅವಕಾಶವಿರುವ ಈ ಸ್ಪರ್ಧೆಗಳಿಗೆ ಜಿಲ್ಲೆಯಿಂದ ಹೆಚ್ಚು ಜನರು ಸ್ಪರ್ಧಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಟಿ.ಭೂಬಾಲನ್ ತಿಳಿಸಿದ್ದಾರೆ.
ರಾಷ್ಟ್ರೀಯ ಮತದಾರರ ಜಾಗೃತಿಗಾಗಿ ವಿವಿಧ ಸ್ಪರ್ಧೆಗಳನ್ನು ಜನವರಿ 25 ರಿಂದ ಈಗಾಗಲೇ ಪ್ರಾರಂಭಿಸಿದ್ದು, ಮಾರ್ಚ್ 15 ರವರೆಗೂ ನಡೆಸಲಾಗುತ್ತಿದೆ. ‘ನನ್ನ ಮತ ನನ್ನ ಭವಿಷ್ಯ ಒಂದು ಮತದ ಶಕ್ತಿ’ ಘೋಷವಾಕ್ಯದೊಂದಿಗೆ ಸೃಜನಶೀಲ ಅಭಿವ್ಯಕ್ತಿಯ ಮೂಲಕ ಪ್ರತಿ ಮತದ ಮಹತ್ವವನ್ನು ಪುನರುಚ್ಚರಿಸುವುದಾಗಿದೆ. ಈ ಸ್ಪರ್ಧೆಯು ಜನರ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ಅವರ ಚುನಾವಣಾ ಸಕ್ರಿಯ ಭಾಗವಹಿಸುವಿಕೆಯ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ ತಿಳಿಸಿದ್ದಾರೆ.
ಈ ಸ್ಪರ್ಧೆಯು ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ಮತದ ಪ್ರಾಮುಖ್ಯತೆಯ ವಿಷಯದ ಮೇಲೆ ರಚಿಸಲಾದ ವಿಚಾರಗಳು ಮತ್ತು ವಿಷಯವನ್ನು ತಿಳಿಸಿಕೊಡುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಸರ್ಕಾರಿ ನೌಕರರು, ಶಿಕ್ಷಕರು, ಪ್ರೌಢ ಹಂತದ ವಿದ್ಯಾರ್ಥಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕು. ಸ್ಪರ್ಧೆಯ ಕುರಿತು ಸಾರ್ವಜನಿಕರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚು ಪ್ರಚಾರಪಡಿಸಿ ಜಿಲ್ಲೆಯಿಂದ ಹೆಚ್ಚು ಜನರು ಸ್ಪರ್ಧಿಸಲು ಉತ್ತೇಜನ ನೀಡಬೇಕು. ಈ ನಿಟ್ಟಿನಲ್ಲಿ ಅರಿವು ಮೂಡಿಸುವ ಕಾರ್ಯ ಚಟುವಟಿಕೆಗಳನ್ನು ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ವಿವಿಧ ಸ್ಪರ್ಧೆಗಳ ವಿವರ
ರಸಪ್ರಶ್ನೆ, ವಿಡಿಯೋ ತಯಾರಿಕೆ, ಗಾಯನ ಸ್ಪರ್ಧೆ, ಭಿತ್ತಿ ಚಿತ್ರ ಹಾಗೂ ಘೋಷ ವಾಕ್ಯ ಬರೆಯುವ ಸ್ಪರ್ಧೆಗಳು ಸೇರಿ ಒಟ್ಟು 5 ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಜೊತೆಗೆ ಹವ್ಯಾಸಿಗಳು, ವೃತ್ತಿಪರರು ಹಾಗೂ ಸಾಂಸ್ಥಿಕ ಸಂಸ್ಥೆಗಳು ಎಂದು ಮೂರು ವಿಭಾಗಗಳಾಗಿ ವಿಂಗಡಿಸಿದ್ದು, ಎಲ್ಲಾ ವಯೋಮಾನದವರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಆನ್ ಲೈನ್ ಮೂಲಕ ಸ್ಪರ್ಧೆ
ರಾಷ್ಟ್ರೀಯ ಮತದಾರರ ಜಾಗೃತಿ ಸ್ಪರ್ಧೆಗಳನ್ನು ಆನ್ ಲೈನ್ ಮೂಲಕ ನಡೆಸುತ್ತಿದ್ದು, ಸ್ಪರ್ಧಿಗಳು voter-contest@eci.gov.inಗೆ ತಮ್ಮ ನಮೂನೆಗಳನ್ನು ಕಳುಹಿಸಬಹುದು. ಅಲ್ಲದೆ ವಿಜೇತರಿಗೆ ಅತ್ಯಾಕರ್ಷಕ ನಗದು ಬಹುಮಾನ, ಇ-ಪ್ರಮಾಣ ಪತ್ರ ಹಾಗೂ ನಗದು ಅಲ್ಲದ ವಸ್ತು ರೂಪದ ಬಹುಮಾನಗಳನ್ನು ನೀಡಲಾಗುತ್ತದೆ. ಇದರಿಂದ ಚುನಾವಣಾ ಆಯೋಗದ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಳ್ಳಲು ಇದೊಂದು ಸುವರ್ಣ ಅವಕಾಶವಾಗಿದೆ.
Be the first to comment