ಜಿಲ್ಲಾ ಸುದ್ದಿಗಳು
ಬಾಗಲಕೋಟೆ: ಜಿಲ್ಲೆಯಲ್ಲಿ ಸಾವಯವ ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅರ್ಹ ನೊಂದಾಯಿತ ಸಾಮಾಜಿಕ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆರೋಗ್ಯಕರ ಹಾಗೂ ರಾಸಾಯನಿಕ ಮುಕ್ತ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳನ್ನು ದೊರಕಿಸಲು ಹಾಗೂ ಸಾವಯವ ಕೃಷಿಯನ್ನು ಉತ್ತೇಜಿಸಲು ಯೋಜನೆಯನ್ನು ರೂಪಿಸಿದ್ದು, ಈ ಹೊಸ ಯೋಜನೆಯನ್ನು ಸಾವಯವ ಸಿರಿ ಯೋಜನೆಯ ಹೆಸರಿನಲ್ಲಿ ರಾಜ್ಯಾದ್ಯಂತ ಅನುಷ್ಠಾನಗೊಳಿಸಲು ರಾಜ್ಯದ ಮುಖ್ಯಮಂತ್ರಿಗಳು ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಸಾವಯವ ಕೃಷಿಯ ಉತ್ತೇಜನದಲ್ಲಿ ಈಗಾಗಲೇ ತೊಡಗಿರುವ ನೊಂದಾಯಿತ ಸಾಮಾಜಿಕ ಸಂಸ್ಥೆಗಳಿಗೆ ಸಾವಯವ ಕೃಷಿಯಲ್ಲಿ ಪ್ರಚಾರ, ತರಬೇತಿ, ಅಧ್ಯಯನ ಪ್ರವಾಸ, ಮಾದರಿ ಸಾವಯವ ಕ್ಷೇತ್ರ ಸ್ಥಾಪನೆ, ಸಾವಯವ ಕ್ಷೇತ್ರೋತ್ಸವ, ಪ್ರಮಾಣೀಕರಣ, ಮಾರಾಟ ಮಳಿಗೆ ಸ್ಥಾಪನೆ, ದೇಸಿ, ಸ್ಥಳೀಯ, ನಾಟಿ ತಳಿಗಳ ವಿತರಣೆ, ಸಂರಕ್ಷಣೆ ಮತ್ತು ಅಭಿವೃದ್ಧಿ ಸಮುದಾಯ, ಬೀಜ ಬ್ಯಾಂಕ್‍ಗಳ ಸ್ಥಾಪನೆ, ಗೋಶಾಲಾ ಸ್ಥಾಪನೆ ಮತ್ತು ಗೋಸಂರಕ್ಷಣೆ, ನಮ್ಮ ಹೊಲ ನಮ್ಮ ಕೆರೆ ಇತರೆ ಸಂಬಂಧಿತ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಲು ಅನುದಾನ ಒದಗಿಸಲಾಗುತ್ತಿದೆ.
ಆಸಕ್ತ ಸಾಮಾಜಿಕ ಸಂಸ್ಥೆಗಳು ಅರ್ಜಿ, ಪ್ರಸ್ತಾವನೆಗಳನ್ನು ಜಿಲ್ಲಾ ವ್ಯಾಪ್ತಿಯ ಕೃಷಿ ವಿಶ್ವ ವಿದ್ಯಾನಿಲಯ, ಕೃಷಿ & ತೋಟಗಾರಿಕೆ ವಿಶ್ವವಿದ್ಯಾನಿಲಯಗಳ ಸ್ಥಳೀಯ ಕೃಷಿ ವಿಜ್ಞಾನ ಕೇಂದ್ರಗಳ ಶಿಫಾರಸ್ಸಿನೊಂದಿಗೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ಬಾಗಲಕೋಟೆ ಇವರಿಗೆ ಫೆಬ್ರವರಿ 24 ರೊಳಗಾಗಿ ಸಲ್ಲಿಸಬೇಕು.
ಅರ್ಜಿಯೊಂದಿಗೆ ನೊಂದಾಯಿತ ಸಾಮಾಜಿಕ ಸಂಸ್ಥೆಗಳು ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಿಂದ ಸಾವಯವ ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರಬೇಕು. ಸಾವಯವ ಕೃಷಿ ಸಂಬಂಧಿತ ತರಬೇತಿ, ಕಾರ್ಯಾಗಾರಗಳನ್ನು ಆಯೋಜಿಸಲು ಅವಶ್ಯವಾದ ಮೂಲಭೂತ ಸೌಲಭ್ಯಗಳನ್ನು ಹೊಂದಿರಬೇಕು. ಈ ಸಂಸ್ಥೆಗಳು ಕನಿಷ್ಠ 10 ಹೆಕ್ಟೇರ್ ವ್ಯವಸಾಯ ಯೋಗ್ಯ ಪ್ರದೇಶವನ್ನು ಹೊಂದಿರಬೇಕು. ಹಾಲಿ ಸಂಸ್ಥೆಗಳಲ್ಲಿ ಗೋಶಾಲೆಗಳನ್ನು ನಿರ್ವಹಿಸುತ್ತಿರಬೇಕು.
ಆ ವ್ಯಾಪ್ತಿಯ ಕೃಷಿ ವಿಶ್ವವಿದ್ಯಾನಿಲಯಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಹಾಗೂ ಈ ಹಿಂದೆ ಸರ್ಕಾರದ ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮದಡಿ ಕಾರ್ಯ ನಿರ್ವಹಿಸಿರುವ ಸಂಸ್ಥೆಗಳಿಗೆ ಆದ್ಯತೆ ನೀಡಲಾಗುವುದು. ಈ ಎಲ್ಲ ಅರ್ಹತಾ ಅಂಶಗಳಿಗೆ ಸಂಬಂಧಿತ ದಾಖಲಾತಿಗಳನ್ನು ಸಲ್ಲಿಸುವಂತೆ ಜಂಟಿ ಕೃಷಿ ನಿರ್ದೇಶಕಿ ಡಾ.ಚೇತನಾ ಪಾಟೀಲ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರ ಕಛೇರಿಯ ಸಹಾಯಕ ಕೃಷಿ ನಿರ್ದೇಶಕರು (8277933521), ಕೃಷಿ ಅಧಿಕಾರಿ (ತಾಂತ್ರಿಕ)-(8277933509) ಇವರನ್ನು ಸಂಪರ್ಕಿಸ ಬಹುದಾಗಿದೆ.
Be the first to comment