ಹೊನ್ನಾವರ :
ಪಟ್ಟಣದ ಎಮ್ಮೆ ಪೈಲ್ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥ ಕಾಮಗಾರಿ ಅವೈಜ್ಞಾನಿಕವಾಗಿ ಸಾಗುತ್ತಿದ್ದು ಸಾವಿನ ರಹದಾರಿಯನ್ನು ತಪ್ಪಿಸಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಎಮ್ಮೇಪೈಲ್ ಕ್ರಾಸ್ ಇಳಿಜಾರಿನ ರಸ್ತೆಯಾಗಿದ್ದು ಚತುಷ್ಪಥ ಕಾಮಗಾರಿಗೆ ರಸ್ತೆಯು ಅಗಲ ಮಾಡುವ ಉದ್ದೇಶದಿಂದ ಇಲ್ಲಿನ ಸ್ಥಳೀಯ ರಸ್ತೆಯನ್ನು ಕಡಿಯಲಾಗಿದೆ. ಈ ರಸ್ತೆ ಇನ್ನಷ್ಟು ಇಳಿಜಾರಾಗಿದ್ದು ಅಪಘಾತದ ಹಾಟ್ ಸ್ಪಾಟ್ ಆಗಿ ಪರಿವರ್ತನೆಯಾಗುವ ಸಾಧ್ಯತೆಗಳಿವೆ ಎಂದು ಪ್ರಜ್ಞಾವಂತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಮಗಾರಿ ಮಾಡುವ ಬರದಲ್ಲಿ ಅನುಕೂಲ ಹಾಗೂ ಅನಾಕೂಲವನ್ನು ಪರಿಗಣಿಸದೆ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿ ಪೂರ್ಣಗೊಳಿಸುವ ಸವಾಲನ್ನು ಗುತ್ತಿಗೆ ಪಡೆದಿರುವ ಕಂಪನಿ ಹಾಕಿಕೊಂಡಿದೆ. ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಜಿಲ್ಲೆಯ ಜನರು ಮನವಿ ನೀಡುತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾತ್ರ ಗುತ್ತಿಗೆ ನೀಡಿ ತನಗೆ ಸಂಬಂದವಿಲ್ಲದವರಂತೆ ಕೈ ಕಟ್ಟಿ ಕುಳಿತಿದೆ. ಇದರಿಂದ ಬೇಸತ್ತ ಜನ ಹೆದ್ದಾರಿ ಪ್ರಾಧಿಕಾರ ಗಾಂಧಿ ಮೆಚ್ಚಿದ ಮಂಗನಂತೆ ಕಂಡರೂ ಕಾಣದಂತೆ, ಕೇಳಿದರೂ ಕೇಳಿಸದಂತೆ, ಏನೂ ಮಾತನಾಡದೇ ಮೌನವಾಗಿದೆ ಎಂದು ಟೀಕಿಸಿದ್ದಾರೆ.
ಪ್ರತಿ ಭಾರಿ ಅಧಿಕಾರಿಗಳಿಗೆ ಮನವಿ ನೀಡುವುದು ಪ್ರತಿಭಟನೆಯ ಎಚ್ಚರಿಕೆ ನೀಡುವುದು ಸಾರ್ವಜನಿಕರ ಹಾಗೂ ಸಂಘಟನೆಗಳ ಕಾಯಕವಾಗಿದ್ದು ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಈ ವರೆಗೆ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ಇದರಿಂದ ಅಧಿಕಾರಿಗಳ ಮೇಲೆ ಜನರಿಗೆ ನಂಬಿಕೆಯೇ ಕಳೆದು ಹೋಗಿದೆ.
ಗಾಂಧೀನಗರದಿಂದ ಹೈವೇ ಪ್ರವೇಶಿಸುವ ಹಾದಿ ತುಂಬ ಕಡಿದಾಗಿ ಇಳಿಜಾರಿನಲ್ಲಿದೆ. ಈಗ ಹೈವೇ ಯ ಚತುಷ್ಪಥ ಕಾಮಗಾರಿ ನಡೆದಿದೆ. ಹೈವೇ ಅಗಲವಾಗಿ, ರಸ್ತೆಯ ಭಾಗವೂ ಇನ್ನಷ್ಟು ಕಡಿದು, ಇಳಿಜಾರು ತುಂಬ ಜಾಸ್ತಿಯಾಗಿದೆ. ಕಿರಿದಾದ ಜಾರುಬಂಡಿಯಂಥ ಈ ರಸ್ತೆ ನೇರವಾಗಿ ಹೈವೇಯನ್ನೇ ಪ್ರವೇಶಿಸುತ್ತದೆ. ಗಾಂಧೀನಗರ ಕಡೆಯಿಂದ ಹೈವೇ ಪ್ರವೇಶಿಸುವ ಅಥವಾ ಹೈವೇ ದಾಟಿ ಮಾರ್ಕೆಟ್ ಗೆ ಹೋಗುವ ವಾಹನಗಳು ತುಸು ನಿಯಂತ್ರಣ ತಪ್ಪಿದರೂ ಹೈವೇಯಲ್ಲಿ ವೇಗವಾಗಿ ಬರುತ್ತಿರುವ ವಾಹನಗಳಿಗೆ ಬಲಿಯಾಗುವದು ಖಂಡಿತ.
ಇಳಿಜಾರಿನ ಈ ದಾರಿ ಹೊಂಡ, ಮ್ಯಾನ್ ಹೋಲ್ ಗಳಿಂದ ಎಷ್ಟು ಹದಗೆಟ್ಟಿದೆಯೆಂದರೆ ಇಲ್ಲಿ ವಾಹನಗಳನ್ನು ಕಂಟ್ರೋಲ್ ಮಾಡುವದೂ ತುಂಬ ಕಷ್ಟವೇ. ಸಂಬಂಧಪಟ್ಟವರು ಇಂಥ ಅವೈಜ್ಞಾನಿಕ ಕಾಮಗಾರಿಯ ಕುರಿತು ಕೂಡಲೇ ಗಮನ ಹರಿಸಿ ಕ್ರಮ ಕೈಗೊಳ್ಳದಿದ್ದರೆ ಇದೊಂದು ತೀವ್ರವಾದ ಅಪಘಾತ ವಲಯವಾದೀತು. ಎಚ್ಚರ ವಹಿಸಿ ಪ್ರಾಣಹಾನಿ ತಪ್ಪಿಸಲು ಸಂಬಂಧಪಟ್ಟವರು ಮುಂದಾಗಬೇಕಿದೆ.
Be the first to comment