ಪ್ರಗತಿಯ ದೂರದೃಷ್ಟಿಯುಳ್ಳ ಬಜೆಟ್:ಸಚಿವ ಸಿ.ಸಿ.ಪಾಟೀಲರ ಹರ್ಷ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ಲೋಕಸಭೆಯಲ್ಲಿ ಇಂದು ಮಂಡಿಸಲಾದ ಕೇಂದ್ರ ಸರ್ಕಾರದ ಮುಂಗಡ ಪತ್ರವು ನಮ್ಮ ರಾಷ್ಟ್ರಕ್ಕೆ ಮುಂದಿನ 25 ವರ್ಷಗಳ ಪ್ರಗತಿಗೆ ದಿಕ್ಸೂಚಿಯಂತಿದೆ. ಇದಕ್ಕಾಗಿ ತಾವು ಸನ್ಮಾನ್ಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಜಿ ಮತ್ತು ಕೇಂದ್ರ ಹಣಕಾಸು ಸಚಿವೆಯವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಅಭಿನಂದಿಸುವುದಾಗಿ ಲೋಕೋಪಯೋಗಿ ಸಚಿವರಾದ ಶ್ರೀ ಸಿ.ಸಿ.ಪಾಟೀಲರು ತಿಳಿಸಿದ್ದಾರೆ.

ಕೇಂದ್ರದ ಮುಂಗಡ ಪತ್ರವನ್ನು ಸ್ವಾಗತಿಸಿ ನೀಡಿರುವ ಹೇಳಿಕೆಯಲ್ಲಿ ಅವರು, ಕೋವಿಡ್ ನಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಕೃಷಿ, ಮೂಲಭೂತ ಸೌಕರ್ಯ, ನೀರಾವರಿ, ಕೈಗಾರಿಕೆ, ಸಾರಿಗೆ – ಸಂಪರ್ಕ ಈ ಮುಂತಾದ ಎಲ್ಲಾ ಕ್ಷೇತ್ರಗಳಿಗೂ ಆದ್ಯತೆ ನೀಡಿರುವುದು ಕೇಂದ್ರ ಸರ್ಕಾರದ ದಿಟ್ಟ ಹೆಜ್ಜೆಯಾಗಿದೆ. ಆತ್ಮ ನಿರ್ಭರ ಭಾರತ ಅಂಗವಾಗಿ ಕೈಗೊಂಡ ಕ್ರಮಗಳು ಫಲಶ್ರುತಿ ನೀಡುವಲ್ಲಿ ಯಶಸ್ವಿಯಾಗುತ್ತಿವೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ ಎಂದು ಪ್ರಶಂಸಿಸಿದ್ದಾರೆ.

ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯಲ್ಲಿ ರಸ್ತೆ, ಹೆದ್ದಾರಿ, ವಿಮಾನ ನಿಲ್ದಾಣ, ಬಂದರು, ಜಲಸಾರಿಗೆ, ಭೂಸಾರಿಗೆ ಮತ್ತು ಸರಕು ಸಾಗಾಟದ ಸೌಲಭ್ಯಗಳಿಗೆ ಆದ್ಯತೆ ನೀಡಿರುವುದು ಭವಿಷ್ಯದಲ್ಲಿ ದೇಶದ ಸಂಪರ್ಕ ಕ್ರಾಂತಿಗೆ ಮುನ್ನುಡಿಯಾಗಲಿದೆ. ಇನ್ನೆರಡು ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಜಾಲವನ್ನು ಇನ್ನಷ್ಟು ಅಂದರೆ 25 ಸಾವಿರ ಕಿ.ಮೀ. ಯಷ್ಟು ವಿಸ್ತರಿಸಲಾಗುವುದು ಮತ್ತು ಹೆದ್ಧಾರಿ –ಮೂಲಸೌಲಭ್ಯ ನಿರ್ಮಾಣಕ್ಕೆ ರೂ. 20 ಸಾವಿರ ಕೋಟಿ ಘೋಷಿಸಿರುವುದರಿಂದ ನಮ್ಮ ರಾಜ್ಯಕ್ಕೂ ವರದಾನವಾಗಲಿದೆ.

ಮುಖ್ಯಮಂತ್ರಿಯವರ ನೇತೃತ್ವದಲ್ಲಿ ನೀಡಲಾಗಿದ್ದ ನಮ್ಮ ಮನವಿಗೆ ಕೇಂದ್ರ ಭೂಸಾರಿಗೆ ಸಚಿವರು ಸ್ಪಂದಿಸಿ ಈಗಾಗಲೇ ಶಿರಾಡಿ ಘಾಟ್ ಹೆದ್ದಾರಿ ಉನ್ನತೀಕರಣಕ್ಕೆ 1,200 ಕೋಟಿ ರೂ.ಗಳನ್ನು ಮತ್ತು ಬಾನಾಪುರ –ಗದ್ದನಕೇರಿ ಹೆದ್ದಾರಿ ವಿಸ್ತರಣೆಗೆ 173 ಕೋಟಿ ರೂ. ಘೋಷಿಸಿರುವುದು ನಮ್ಮ ರಾಜ್ಯಕ್ಕೆ ಕೇಂದ್ರವು ನೀಡಿದ ವಿಶೇಷ ಕೊಡುಗೆಯಾಗಿದೆ ಎಂದು ಸಿ.ಸಿ.ಪಾಟೀಲರು ಪ್ರತಿಕ್ರಿಯಿಸಿದ್ದಾರೆ.

400 ಹೊಸ ರೈಲುಗಳ ಪ್ರಾರಂಭಕ್ಕೆ ನಿರ್ಧಾರ, ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು 2.83 ಲಕ್ಷ ಕೋಟಿ ರೂ. ನಿಗದಿಪಡಿಸಿರುವುದು, ಕಾವೇರಿ-ಪೆನ್ನಾರ್- ಕೃಷ್ಣಾ ನದಿ ಜೋಡಣೆಗೆ ಸಮ್ಮತಿಸಿರುವುದು,ಅಂಗನವಾಡಿಗಳಿಗೆ ವಿಶೇಷ ಸೌಲಭ್ಯ ನೀಡಿ ಮೇಲ್ದರ್ಜೆಗೇರಿಸುವುದು, ಬೆಂಗಳೂರಿನ ನಿಮ್ಹಾನ್ಸ್ ಆಶ್ರಯದಲ್ಲಿ ಮಾನಸಿಕ ಆರೋಗ್ಯ ಚಿಕಿತ್ಸೆಗೆ ಮತ್ತಷ್ಟು ಹೆಚ್ಚಿನ ವ್ಯವಸ್ಥೆ ಕಲ್ಪಿಸುವುದು, ರಾಜ್ಯಗಳಿಗೆ ಮುಂದಿನ 50 ವರ್ಷ ಬಡ್ಡಿರಹಿತವಾಗಿ 1 ಲಕ್ಷ ಕೋಟಿ ರೂ. ಸಾಲ ನೀಡಲು ಮುಂದಾಗಿರುವುದು,ಮುಂತಾದ ಅನೇಕ ಹೊಸ ನಿರ್ಧಾರಗಳಿಂದಾಗಿ ಇದೊಂದು ಜನಪರ ಬಜೆಟ್ ಆಗಿದೆ ಎಂದು ಸಿ.ಸಿ.ಪಾಟೀಲರು ವಿಶ್ಲೇಷಿಸಿದ್ದಾರೆ.

Be the first to comment

Leave a Reply

Your email address will not be published.


*