ಲಿಂಗಸುಗೂರು : ‘ಸರಕಾರ ಬಡವರ ಆರೋಗ್ಯದ ಕಾಳಜಿ ಮಾಡಾಕ ಸರಕಾರಿ ದವಾಖಾನ್ಯಾಗ ಎಲ್ಲಾ ವ್ಯವಸ್ಥೆ ಮಾಡೀವಿ ಅಂತೇಳ್ತಾರ. ಆದ್ರಿಲ್ಲಿಗೆ ಹುಶಾರಿಲ್ಲಾ ಅಂತ ಬಂದ್ರ, ಗುಳಿಗಿ, ಟಾಣಿಕ್, ಇಂಜಿಕ್ಷನ್, ಗುಲ್ಕೋಸ್, ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ ಎಲ್ಲಾದಕ್ಕೂ ಹೊರಗಡೆ ಚೀಟಿ ಬರೆದು ಕೊಡ್ತಾರ. ನೂರಾರು, ಸಾವಿರಾರು ರೂಪಾಯಿ ಖರ್ಚು ಮಾಡಾಗ ನಮ್ಗ ಶಕ್ತಿ ಇಲ್ಲಾರೀ ಸಾಹೇಬ್ರಾ, ಎಲ್ಲಾನೂ ಹೊರಗಡೇನೆ ಬರೆದು ಕೊಟ್ರ ನಾವ್ಯಾಕ್ರೀ ಸರಕಾರಿ ದವಾಖಾನಿಗೆ ಬರಬೇಕು.
ಬಡವರ ಶಾಪ ಇವರಿಗೆ ತಟ್ಟದೇ ಇರಲ್ಲಾ. ಯಾವಾಗ್ಲೂ ಈ ದವಾಖಾನ್ಯಾಗ ಬಿಟ್ಟಿಬ್ಯಾರ್ಕಿಯಿಂದಾನೇ ನೋಡ್ತಾರ. ನಮ್ ಲಕ್ಷಮಪ್ಪ ಸಾಬ್ರು ಇದ್ದಿದ್ದಕ್ಕಾ ಅಲ್ಪಸ್ವಲ್ಪ ಆರೋಗ್ಯ ಖಾತ್ರಿ ಐತ್ರಿ. ಇಲ್ಲಂದ್ರ ನಮ್ ತ್ರಾಸ್ ಯಾರಿಗೆ ಹೇಳ್ಬೇಕ್ರಿ. ನೀವಾದ್ರೂ ಹೇಳಿ ವ್ಯವಸ್ಥೆನಾ ಸರಿ ಮಾಡ್ರೀ ಯಪ್ಪಾ..’ ಇದು ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿನ ವಾಸ್ತವಿಕ ಪರಿಸ್ಥಿತಿಯನ್ನು ಗ್ರಾಮೀಣ ಪ್ರದೇಶದ ರೋಗಿಗಳು ಶಾಸಕರು, ಅಧಿಕಾರಿಗಳ ಮುಂದೆ ಅನಾವರಣಮಾಡಿದ ಪರಿ ಇದು.
ಸೋಮವಾರ ಸಂಜೆ ಶಾಸಕ ಡಿ.ಎಸ್.ಹೂಲಗೇರಿ, ಜಿ.ಪಂ. ಅದ್ಯಕ್ಷೆ ಆದಿಮನಿ ವೀರಲಕ್ಷ್ಮಿ, ಸಿಇಒ ಲಕ್ಷ್ಮಿಕಾಂತರೆಡ್ಡಿ, ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಏಕಾಏಕಿ ಭೇಟಿ ನೀಡಿದ್ದರಿಂದ ಆಸ್ಪತ್ರೆಯ ವಾತಾವರಣ ಎಂದಿನಂತೆ ಕಲುಶಿತವಾಗಿತ್ತು. ಶೌಚಾಲಯ ಸೇರಿ ಆವರಣವೆಲ್ಲಾ ಗಬ್ಬೆದ್ದು ನಾರುತ್ತಿತ್ತು. ವಾರ್ಡ್‍ಗಳಲ್ಲಂತೂ ದುರ್ನಾತ ಬರುತ್ತಿತ್ತು. ಇದೆಲ್ಲವನ್ನೂ ಪರಿಶೀಲನೆ ಮಾಡಿದ ಶಾಸಕರು ವೈದ್ಯಾಧಿಕಾರಿಗಳನ್ನು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
Be the first to comment