ರಾಯಚೂರು; ಅಕ್ರಮ ಮರಳು ದಂಧೆಗೆ ಬರಿದಾಗುತ್ತಿದೆ ಕೃಷ್ಣಾ ನದಿಯೊಡಲು, ಲೂಟಿಕೋರರಿಗೆ ಜನಪ್ರತಿನಿಧಿಗಳ ಸಾಥ್


   ರಾಜ್ಯ ಸುದ್ದಿಗಳು



ರಾಯಚೂರು, ನವೆಂಬರ್: ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ‌ಗೆ ಎಗ್ಗಿಲ್ಲದಂತಾಗಿದೆ. ಹಗಲು ರಾತ್ರಿ ಮರಳನ್ನು ತೋಡಿ ತೋಡಿ ನದಿ ಒಡಲು ಬರಿದಾಗುತ್ತಿದೆ. ನದಿಯಾಶ್ರಿತ ಜೀವಿಗಳಿಗೂ ಇದು ಕೊಡಲಿಯೇಟಾಗಿದೆ.


                            AVD


ಆದರೆ ಈ ಅಕ್ರಮಕ್ಕೆ ಬ್ರೇಕ್ ಹಾಕಬೇಕಾದವರು ಮಾತ್ರ ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ. ಗೊತ್ತಿದ್ದೂ ಗೊತ್ತಿಲ್ಲದಂತೆ ಜಾಣತನ ತೋರುತ್ತಿದ್ದಾರೆ. ಜನಪ್ರತಿನಿಧಿಗಳ ಈ ಜಾಣತನದಿಂದ ಪ್ರಕೃತಿ ಸಂಪತ್ತು ಲೂಟಿ ಆಗುತ್ತಿದೆ.

ಕೃಷ್ಣಾ ನದಿಯಲ್ಲಿ ಅಕ್ರಮ ಮರಳು ದಂಧೆ
ನದಿಯ ತಟದಲ್ಲಿ ನಿಂತಿರುವ ಟಿಪ್ಪರ್ ಗಳಿಗೆ ಮರಳು ತುಂಬುತ್ತಿರುವ ಹಿಟಾಚಿ, ಮರಳು ಹೆಕ್ಕಿ ಹೆಕ್ಕಿ ಬರಿದಾಗಿರುವ ನದಿ ಒಡಲು. ಇದು ರಾಯಚೂರು ಜಿಲ್ಲೆಯ ಕೃಷ್ಣಾ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಯ ನೋಟ. ಜಿಲ್ಲೆಯ ಕೃಷ್ಣಾ ಹಾಗು ತುಂಗಭದ್ರಾ ನದಿಯನ್ನು ಎಗ್ಗಿಲ್ಲದೆ ಮರಳು ದಂಧೆಕೋರರು ಬಗೆಯುತ್ತಲೇ ಇದ್ದಾರೆ. ದೇವದುರ್ಗ ತಾಲೂಕಿನ ಕೃಷ್ಣಾ ನದಿ ತಟದ ಕರಕಳ್ಳಿ, ಲಿಂಗದಳ್ಳಿ, ಹೆರುಂಡಿ, ಅಂಜಳ, ಜೋಳದಡಗಿ, ಹೂವಿನ ಹೆಡಗಿ ಸೇರಿದಂತೆ ನದಿ ತಟದ ಗ್ರಾಮಗಳಲ್ಲಿ ಅಕ್ರಮ ಮರಳು ದಂಧೆ ಮುಂದುವರಿದಿದೆ. ಆದರೆ ಇದನ್ನು ಕೇಳುವವರೇ ಇಲ್ಲದಂತಾಗಿದೆ.

ಒಡಲು ಬಗೆದು ಮರಳು ಮಾರಿದ್ದೀರಲ್ಲ, ಬಂದಿದೆ ನೋಡಿ ಹೊಳೆ ಮನೆ ಬಾಗಿಲಿಗೆ


ಜನಪ್ರತಿನಿಧಿಗಳ ಕೃಪಾಕಟಾಕ್ಷ?
ಈ ರೀತಿ ನದಿಯ ಮರಳನ್ನು ಬಗೆಯುತ್ತಾ ಲಾಭ ಮಾಡಿಕೊಳ್ಳುವ ದಂಧೆಗೆ ಬ್ರೇಕ್ ಇಲ್ಲದಂತಾಗಿದೆ. ಅಕ್ರಮ ಸ್ಟಾಕ್ ಯಾರ್ಡ್ ಮಾಡಿಕೊಂಡು ದಂಧೆಕೋರರು ಹಗಲು ರಾತ್ರಿ ಮರಳು ಲೂಟಿ ಮಾಡುತ್ತಿದ್ದಾರೆ. ಆದರೆ ಇದಕ್ಕೆಲ್ಲ ನಿಯಂತ್ರಣ ಹೇರಬೇಕಿದ್ದವರೇ ಸಹಕಾರ ನೀಡುತ್ತಿದ್ದಾರೆ ಎನ್ನುವ ಆರೋಪ ಇದೆ. ಮರಳು ಅಕ್ರಮಕ್ಕೆ ಜಿಲ್ಲೆಯ ಅಧಿಕಾರಿಗಳ ಸಹಕಾರ, ಜನಪ್ರತಿನಿಧಿಗಳ ಕೃಪಾಕಟಾಕ್ಷ ಇದೆ ಅನ್ನುವ ಆರೋಪವೂ ಕೇಳಿಬಂದಿದೆ.

ಕೋರ್ಟ್ ಆದೇಶಕ್ಕೂ ಬೆಲೆ ಇಲ್ಲ
ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಕೋರ್ಟ್ ಆದೇಶ ನೀಡಿದೆ. ಕೋರ್ಟ್ ಆದೇಶ ಪಾಲಿಸಬೇಕಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮಾಮೂಲಿ ಹಣಕ್ಕೆ ಜೋತು ಬಿದ್ದು, ಗೊತ್ತಿದ್ದು ಗೊತ್ತಿಲ್ಲದಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ದೇವದುರ್ಗ ತಾಲ್ಲೂಕಿನಾದ್ಯಂತ ಅವ್ಯಾಹತವಾಗಿ ನದಿಯಿಂದ ಮರಳು ಕೊಳ್ಳೆ ಹೊಡೆಯಲಾಗುತ್ತಿದೆ. ಜಿಲ್ಲೆಯ ಪ್ರಭಾವಿಗಳು ರಾಯಲ್ಟಿ ನಿಯಮ ಮೀರಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆ ಎನ್ನಲಾಗಿದೆ.

ಕಡಿವಾಣಕ್ಕೆ ಒತ್ತಾಯ
ಪ್ರಭಾವಿ ನಾಯಕರ ಸಂಬಂಧಿಗಳು, ಬೆಂಬಲಿಗರು, 15 ಟನ್ ಮರಳು ಸಾಗಾಣಿಕೆಗೆ ಪರವಾನಗಿ ಪಡೆದು 20ಟನ್ ಗೂ ಹೆಚ್ಚು ಮರಳನ್ನು ಸಾಗಿಸುತ್ತಿದ್ದಾರೆ. ಅಲ್ಲದೆ ನದಿ ತಟದಲ್ಲಿ ಮರಳು ಸ್ಟಾಕ್ ಮಾಡಿಕೊಂಡು ರಾತ್ರೋರಾತ್ರಿ ಮರಳನ್ನು ಸ್ಟಾಕ್ ಯಾರ್ಡ್ ಗೆ ಕದ್ದು ತುಂಬಿಕೊಳ್ಳುತ್ತಿದ್ದಾರೆ ಅನ್ನುವ ಆರೋಪ ಕೇಳಿಬರುತ್ತಿದೆ. ಹೀಗಾಗಿ ಅಕ್ರಮ ಮರಳು ದಂಧೆಯಿಂದ ನದಿ ತಟದ ಗ್ರಾಮಸ್ಥರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.

ಕಳೆದ ಹಲವು ವರ್ಷಗಳಿಂದ ಜಿಲ್ಲೆಯ ಕೃಷ್ಣಾ ಹಾಗು ತುಂಗಭದ್ರಾ ನದಿ ಒಡಲನ್ನು ದಂಧೆಕೋರರು ಬಗೆದು ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದಾರೆ. ಅಕ್ರಮಕ್ಕೆ ಕಡಿವಾಣ ಹಾಕಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳೇ ಪರೋಕ್ಷವಾಗಿ ದಂಧೆಯಲ್ಲಿ ತೊಡಗಿರುವುದು ವಿಪರ್ಯಾಸವೇ ಸರಿ. ಇನ್ನಾದರೂ ಸರ್ಕಾರ ಎಚ್ಚೆತ್ತು ಪ್ರಕೃತಿ ಸಂಪತ್ತನ್ನು ಉಳಿಸುವ ಕೆಲಸ ಮಾಡಬೇಕಿದೆ.

Be the first to comment

Leave a Reply

Your email address will not be published.


*