ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸುವಲ್ಲಿ ವಿಳಂಬ ದೋರಣೆ ಅನುಸರಿಸಿದ 5 ಜನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಗುರುವಾರ ಜರುಗಿದ ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು 41 ಬಾಲ್ಯವಿವಾವ ನಡೆದ ಪೈಕಿ 32 ಮಾತ್ರ ಪ್ರಕರಣ ದಾಖಲಿಸಲಾಗಿತ್ತು. ಬಾಕಿ ಉಳಿದ 9 ಬಾಲ್ಯವಿವಾಹವಾದ ಬಗ್ಗೆ ಎಫ್‍ಐಆರ್ ದಾಖಲಿಸಲು ತಿಳಿಸಿದಾಗ್ಯೂ ಸಹ ವಿಳಂಬ ದೋರಣೆ ತೋರಿದ 5 ಜನ ಸಿಡಿಪಿಓಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಭಾರತಿ ಬಣಕಾರ ಅವರಿಗೆ ಸೂಚಿಸಿದರು.
ಸಮಗ್ರ ಶಿಶು ಅಭಿವೃದ್ದಿ ಯೋಜನೆಯಡಿ ಜಿಲ್ಲೆಯಲ್ಲಿ 2164 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ ಸ್ವಂತ ಕಟ್ಟಡ, ಬಾಡಿಗೆ ಕಟ್ಟಡ, ಸಮುದಾಯ, ಪಂಚಾಯತ, ಶಾಲಾ ಕಟ್ಟಡ, ಶಾಲಾ ಕಟ್ಟಡ ಸೇರಿದಂತೆ ಗ್ರಾಮೀಣ ಹಾಗೂ ನಗರಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ನೀಡಲು ಆಯಾ ತಾಲೂಕಿನ ಸಿಡಿಪಿಓಗಳಿಗೆ ಸೂಚಿಸಿದರು. ಅಲ್ಲದೇ ಅಂಗನವಾಡಿಗಳಲ್ಲಿ ಆಗಾಗ್ಗೆ ಭೇಟಿ ನೀಡಿ ಮೂಲಭೂತ ಸೌಲಭ್ಯಗಳ ಬಗ್ಗೆ ಪರಿಶೀಲಿಸುವಂತೆ ತಾ.ಪಂ ಇಓ ಹಾಗೂ ಸಿಡಿಪಿಓಗಳಿಗೆ ಸೂಚಿಸಿದರು.
ಅಪೌಷ್ಠಿಕ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಮಕ್ಕಳಿಗೆ ನೀಡುತ್ತಿರುವ ಆಹಾರದ ಬಗ್ಗೆ ಪರೀಕ್ಷಿಸಬೇಕು. ಅನಿರೀಕ್ಷಿತವಾಗಿ ಎಂ.ಎಸ್.ಪಿ.ಟಿ.ಸಿಗಳಿಗೆ ಭೇಟಿ ನೀಡಿ ಗುಣಮಟ್ಟವನ್ನು ಪರಿಶೀಲಿಸುವ ಕೆಲಸವಾಗಬೇಕು. ಸಾಂತ್ವನ ಕೇಂದ್ರದಲ್ಲಿ ನೆರವು ಕೋರಿ ಬರುವ ಸಂತ್ರಸ್ತ ಮಹಿಳೆಯರಿಗೆ ಸೂಕ್ತ ಸಲಹೆ ನೀಡಿ ಕಾನೂನಿನ ನೆರವು ಒದಗಿಸುವ ಕೆಲಸವಾಗಬೇಕು. ಅವರನ್ನು ಉದ್ಯೋಗಸ್ಥರನ್ನಾಗಿ ಮಾಡಲು ಕ್ರಮವಹಿಸಲು ತಿಳಿಸಿದಾಗ ಈಗಾಗಲೇ 8 ಜನ ಮಹಿಳೆಯರಿಗೆ ವಿವಿಧ ಉದ್ಯೋಗದಲ್ಲಿ ತೊಡಗಿರುವುದಾಗಿ ಬಾದಾಮಿ, ಮುಧೋಳ ತಾಲೂಕಿನ ಸಾಂತ್ವನ ಕೇಂದ್ರದ ಪ್ರತಿನಿಧಿಗಳು ಸಭೆಗೆ ತಿಳಿಸಿದರು.
ಜಿ.ಪಂ ಸಿಇಓ ಟಿ.ಭೂಬಾಲನ್ ಮಾತನಾಡಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪೂರಕ ಪೌಷ್ಠಿಕ ಆಹಾರ ವಿತರಣೆ, ಮೂಲಭೂತ ಸೌಕರ್ಯ, ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರಿಗೆ ಆಹಾರ ಸಾಮಗ್ರಿಗಳ ವಿತರಣೆ ಬಗ್ಗೆ ಪರಿಶೀಲನೆ ನಡೆಸಬೇಕು. ಅನುಷ್ಠಾನದಲ್ಲಿ ಲೋಪವಾದಲ್ಲಿ ಶಿಸ್ತು ಕ್ರಮಜರುಗಿಸಲು ಮುಂದಾಗಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಭಾರತಿ ಬಣಕಾರ ಮಾತನಾಡಿ ಜಿಲ್ಲೆಯಲ್ಲಿ ಒಟ್ಟು 2221 ಅಂಗನವಾಡಿ ಕೇಂದ್ರಗಳಿ ಕಾರ್ಯನಿರ್ವಹಿಸುತ್ತಿವೆ. ಮಾತೃಪೂರ್ನ ಯೋಜನೆಯಡಿ 21208 ಗರ್ಭಿಣಿಯರು, 20408 ಬಾಣಂತಿಯರು ಇದರ ಪ್ರಯೋಜ ಪಡೆಯುತ್ತಿದ್ದಾರೆ. ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಹೆಣ್ಣು ಮಕ್ಕಳಿ ಲಿಂಗ ಅನುಪಾತವು ಸಮತೋಲನಕ್ಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸದ್ಯ ಎನ್‍ಎಫ್‍ಎಚ್‍ಎಸ್-5ರ ಪ್ರಕಾರ ಜಿಲ್ಲೆಯಲ್ಲಿ ಲಿಂಗಾನುಪಾತ 1007 ಇರುವುದಾಗಿ ತಿಳಿಸಿದರು. ನವನಗರದ ಸೆಕ್ಟರ್ ನಂ.4ರಲ್ಲಿ ಸಖಿ ಕೇಂದ್ರದ ಕಟ್ಟಡ ನಿರ್ಮಾಣವಾಗಿದ್ದು, ವಿದ್ಯುತ್ ವೈರಿಂಗ್ಗ ಕೆಲಸ ಮಾತ್ರ ಬಾಕಿ ಇರುವುದಾಗಿ ಸಭೆಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ವಕೀಲರ ಸಂಘದ ಅಧ್ಯಕ್ಷ ವಿ.ಬಿ.ಚೌಕಿಮಠ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾಹುಲ್‍ಕುಮಾರ ಬಾವಿದೊಡ್ಡಿ ಸೇರಿದಂತೆ ಆಯಾ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.
Be the first to comment