ದೇಶದ ಸುದ್ದಿಗಳು
ನವದೆಹಲಿ: ಶತಮಾನಗಳಿಂದ ವಿವಾದಕ್ಕೊಳಗಾಗಿದ್ದ ರಾಮಜನ್ಮ ಭೂಮಿ ಸ್ಥಳ ಬಗ್ಗೆ ಐತಿಹಾಸಿಕ ತೀರ್ಪು ನೀಡಿದ ಸುಪ್ರಿಂ ಕೋರ್ಟ್ ಸಂವಿಧಾನಿಕ ಪೀಠದ ಐವರು ನ್ಯಾಯಾದೀಶರ ಬಗ್ಗೆ ಕಿರುಪರಿಚಯ.
ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೋಯ್, ನ್ಯಾಯಮೂರ್ತಿ ಎಸ್.ಎ ಬೋಬ್ಡೆ, ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ಕರ್ನಾಟಕ ಮೂಲದ ನ್ಯಾಯಮೂರ್ತಿ ಅಬ್ದುಲ್ ನಜೀರ್ ಮತ್ತು ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರ ಬಗ್ಗೆ ಕಿರು ಪರಿಚಯ.
ಮುಖ್ಯ ನ್ಯಾ. ರಂಜನ್ ಗೊಗೋಯ್
ಮುಖ್ಯ ನ್ಯಾಯಮೂರ್ತಿಗಳಾಗಿರುವ ರಂಜನ್ ಗೋಗೊಯ್ ಅಸ್ಸಾಂ ಮೂಲದವರು. ದೇಶದ ಈಶಾನ್ಯ ಭಾಗದಿಂದ ನ್ಯಾಯಾಂಗ ವ್ಯವಸ್ಥೆಯಲ್ಲಿ ಉನ್ನತ ಸ್ಥಾನಕ್ಕೆ ನೇಮಕಗೊಂಡ ಮೊದಲಿಗರು ರಂಜನ್ ಗೋಗೊಯ್. 1978ರಲ್ಲಿ ಗುವಾಹಟಿಯ ಹೈಕೋರ್ಟ್ ನಲ್ಲಿ ವಕೀಲರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಫೆಬ್ರವರಿ 28, 2001ರಂದು ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು. ನ್ಯಾಯಾಧೀಶರಾದ ನಂತರ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಗಳಲ್ಲಿ ರಂಜನ್ ಗೋಗಯ್ ಸೇವೆ ಸಲ್ಲಿಸಿದ್ದಾರೆ. ಏಪ್ರಿಲ್ 2012ರಂದು ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಬಡ್ತಿ ಪಡೆದರು. ನವೆಂಬರ್ 17ರಂದು ನಿವೃತ್ತಿ ಹೊಂದುತ್ತಿರುವ ರಂಜನ್ ಗೋಗೊಯ್, ವೃತ್ತಿ ಜೀವನದಲ್ಲಿ ಹಲವು ಪ್ರಕರಣಗಳನ್ನು ಆಲಿಸಿದ್ದು, ಅವುಗಳಲ್ಲಿ ಅಯೋಧ್ಯೆ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‍ಸಿಆರ್) ಸೇರಿವೆ.
ನ್ಯಾ. ಶರದ್ ಅರವಿಂದ್ ಬೋಬ್ಡೆ
ರಂಜನ್ ಗೋಗೊಯ್ ಅವರ ನಿವೃತ್ತಿ ಬಳಿಕ ನ್ಯಾ. ಶರದ್ ಅರವಿಂದ್ ಬೋಬ್ಡೆ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕವಾಗಲಿದ್ದಾರೆ. 2000ರಲ್ಲಿ ಬಾಂಬೆ ಹೈಕೋರ್ಟ್ ನಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ಬೋಬ್ಡೆ ಅವರು ನೇಮಕಗೊಂಡರು. ಮಧ್ಯ ಪ್ರದೇಶದ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ. ಮಹಾರಾಷ್ಟ್ರ ಮೂಲದವರಾಗಿರುವ ಬೋಬ್ಡೆ ಅವರು ಏಪ್ರಿಲ್ 2013ರಲ್ಲಿ ಸುಪ್ರಿಂಕೋರ್ಟಿಗೆ ಬಡ್ತಿ ಪಡೆದರು. 63 ವರ್ಷದ ಬೋಬ್ಡೆ ನವೆಂಬರ್ 17ರ ನಂತರ ಸಿಜೆಐ ಆಗಿ 18 ತಿಂಗಳು ಕಾರ್ಯ ನಿರ್ವಹಿಸಲಿದ್ದಾರೆ. ಇತ್ತೀಚೆಗೆ ಖಾಸಗಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ, ವಿಶ್ವದ ಪ್ರಮುಖವಾದ ಕೇಸ್ ಗಳಲ್ಲಿ ಅಯೋಧ್ಯೆ ಪ್ರಕರಣ ಸಹ ಒಂದಾಗಿದೆ ಎಂದು ಹೇಳಿದ್ದರು.
ನ್ಯಾ. ಡಿ.ವೈ ಚಂದ್ರಚೂಡ್
ಸುಪ್ರಿಂ ಕೋರ್ಟಿನಲ್ಲಿ ಮುಖ್ಯ ನ್ಯಾಯಾಧೀಶರಾಗಿ ಅತಿ ಹೆಚ್ಚು ವರ್ಷ ಸೇವೆ ಸಲ್ಲಿಸಿದ್ದ ವೈ.ವಿ. ಚಂದ್ರಚೂಡ್ ಅವರ ಪುತ್ರರಾಗಿರುವ ಡಿ.ವೈ.ಚಂದ್ರಚೂಡ್ ಮೇ 2016ರಲ್ಲಿ ಸುಪ್ರೀಕೋರ್ಟಿನ ನ್ಯಾಯಾಧೀಶರಾಗಿ ನೇಮಕಗೊಂಡರು. ಹಾರ್ವರ್ಡ್ ನಲ್ಲಿ ಕಾನೂನು ಪದವಿ ಪಡೆದಿರುವ ಚಂದ್ರಚೂಡ್ ಬಾಂಬೆ ಮತ್ತು ಅಲಹಬಾದ್ ಹೈಕೋರ್ಟಿನಲ್ಲಿ ಸೇವೆ ಸಲ್ಲಿಸಿದ್ದಾರೆ.
ನ್ಯಾ.ಅಶೋಕ್ ಭೂಷಣ್
1979ರಲ್ಲಿ ನ್ಯಾ.ಅಶೋಕ್ ಭೂಷಣ್ ಅಲಹಬಾದ್ ಹೈಕೋರ್ಟಿನಲ್ಲಿ ವಕೀಲರಾಗಿ ತಮ್ಮ ವೃತ್ತಿ ಜೀವನವನ್ನು ಅರಂಭಿಸಿದರು. 2001ರಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡರು. ಜುಲೈ 2014ರಲ್ಲಿ ಕೇರಳ ಹೈಕೋರ್ಟಿಗೆ ವರ್ಗಾವಣೆಗೊಂಡು ಮಾರ್ಚ್ 2015ರಲ್ಲಿ ಕೇರಳ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು. ಮೇ 13, 2016ರಲ್ಲಿ ಸುಪ್ರೀಂಕೋರ್ಟಿನ ನ್ಯಾಯಾಧೀಶರಾಗಿ ನೇಮಕಗೊಂಡು ಸೇವೆ ಸಲ್ಲಿಸುತ್ತಿದ್ದಾರೆ.
ನ್ಯಾ.ಅಬ್ದುಲ್ ನಜೀರ್
ಫೆಬ್ರವರಿ 1983ರಲ್ಲಿ ಕರ್ನಾಟಕದ ಹೈಕೋರ್ಟಿನಲ್ಲಿ 20 ವರ್ಷಗಳ ಕಾಲ ನ್ಯಾ.ಅಬ್ದುಲ್ ನಜೀರ್ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. 2003ರಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು. ತದನಂತರ ಖಾಯಂ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು. ಫೆಬ್ರವರಿ 17, 2017ರಂದು ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ಪಡೆದರು.
Be the first to comment