ಜಿಲ್ಲಾ ಸುದ್ದಿಗಳು
ಒಂದೇ ದಿನದಲ್ಲಿ ಜಕಣಾಚಾರಿ ಮೂತಿ ಕೆತ್ತನೆ
ವಿಶ್ವಕರ್ಮ ಅಮರಶಿಲ್ಪಿ ಚಕಣಾಚಾರಿ ಸಂಸ್ಮರಣ ದಿನಾಚರಣೆ ಅಂಗವಾಗಿ 24 ಗಂಟೆಯೊಳಗೆ ಶಿಲೆಯಲ್ಲಿ ಜಕಣಾಚಾರಿಯ ಸುಂದರ ಮೂರ್ತಿಯನ್ನು ಕೆತ್ತಿದ ಮೈನೇಶ ಬಡಿಗೇರ ಅವರ ಕಲಾಕೃತಿ ಎಲ್ಲರ ಆಕರ್ಷಣೆ ಹಾಗೂ ಗಮನ ಸೆಳೆಯಿತು.
ಬಾಗಲಕೋಟೆ:ತಮ್ಮ ವಿಶಿಷ್ಟ ಕೈಚಳಕದಿಂದ ಕಲ್ಲಿನಲ್ಲಿ ಆಕರ್ಷಕ ಶಿಲ್ಪಕಲೆ ತೋರಿಸುವ ಮೂಲಕ ಅಮರಶಿಲ್ಪಿ ಚಕಣಾಚಾರಿ ಗಾಂಧರ್ವ ಲೋಕದ ಅವತಾರಿ ಪರುಷನಾಗಿದ್ದಾನೆ ಎಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.
ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಅವರ ಸಂಸ್ಮರಣ ದಿನಾಚರಣೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶಿಲ್ಪಕಲೆಯುವ ಹುಟ್ಟಿನಿಂದ ಹಾಗೂ ಆನುವಂಶಿಕವಾಗಿ ಬರುವ ಕಲೆಯಾಗಿದೆ. ಐತಿಹಾಸಿಕ ಬೇಲೂರ, ಹಳೆಬೀಡಿನಲ್ಲಿ ಸುಂದವಾಗಿ ಕಲ್ಲಿನಿಂದ ಕೆತ್ತನೆ ನೋಡಿದರೆ ಜಕಣಾಚಾರಿಯವರ ನೆನಪು ಬರುತ್ತದೆ ಎಂದರು.
ವಿಶ್ವಕರ್ಮರ ಅಮರಶಿಲ್ಪಿ ಜಕಣಾಚಾರಿ ಅನುಯಾಯಿಗಳಾದ ಶಿಲ್ಪಕಲಾವಿದರೆಲ್ಲರೂ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ಕೌಶಲ್ಯಾಭಿವೃದ್ದಿ ವಿನೂತನ ಯೋಜನೆಯಲ್ಲಿ ಈ ಕಲೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದಕ್ಕಾಗಿ ಪ್ರತಿವರ್ಷ ರಾಮಲೀಲಾ ಮೈದಾನದಲ್ಲಿ ಏರ್ಪಡುವ ಪ್ರದರ್ಶನದಲ್ಲಿ ತಮ್ಮ ತಮ್ಮ ಶಿಲ್ಪಕಲೆ ಪ್ರದರ್ಶಿಸಲು ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಆಸಕ್ತರು ಪ್ರದರ್ಶನಕ್ಕೆ ವಿಶೇಷ ರೀತಿಯ ಶಿಲ್ಪಕಲಾಕೃತಿಗಳನ್ನು ಪ್ರದರ್ಶಿಸಿ ಲಾಭ ಪಡೆದುಕೊಳ್ಳಲು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬುಡಾದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ ಅವರು ಜಕಣಾಚಾರಿ ಶ್ರೇಷ್ಠ ಶಿಲ್ಪಕಲಾ ಕೃತಿ ರಚನೆಕಾರರು ಆಗಿದ್ದು, ಇವರ ಕೃತಿಗೆ ಬೇಲೂರು, ಹಳೆಬೀಡಿನ ದೇವಾಲಯಗಳು ಸಾಕ್ಷಿಯಾಗಿವೆ. ಇಂತಹ ಶಿಲ್ಪಿಗೆ ಮಗನಾದವ ಡಕನಾಚಾರಿ ತಂದೆಗಿಂತಲೂ ಶ್ರೇಷ್ಠ ಶಿಲ್ಪಿಯಾಗಿದ್ದ. ಚೆನ್ನಕೇಶವ ಮೂರ್ತಿಯಲ್ಲಿ ದೋಷವಿದೆ ಎಂದು ತಂದೆಯ ಮೇಲೆಯೇ ಆರೋಪ ಮಾಡುವಂತ ಘಟನೆ ಕೂಡಾ ನಡೆದು ಹೋಗಿದೆ. ಇದರಿಂದ ಮಗನ ಚಾಣಾಕ್ಷತನ ಕಾಣಬಹುದಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮಾತನಾಡಿ ಗಾಂಧರ್ವ ಕಲೆಗಳಾದ ನೃತ್ಯ, ಕಲೆ, ಸಂಗೀತ, ಸಾಹಿತ್ಯ ಸೇರಿದಂತೆ ಶಿಲ್ಪಕಲೆ ಸಹ ಒಂದಾಗಿದೆ. ಈ ಎಲ್ಲ ಕಲೆಗಳು ಲಲಿತ ಕಲೆಗಳಾಗಿವೆ. ಇವುಗಳ ಉಳಿವಿಗಾಗಿ ಜಿಲ್ಲೆಯ ಬಾದಾಮಿಯಲ್ಲಿ ಲಲಿತಕಲಾ ಅಕಾಡೆಮಿ ಪ್ರಾರಂಭಿಸಲು ಚಿಂತನೆ ನಡೆದಿದೆ. ಇಂತಹ ಕಲೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ತಿಳಿಸಿದರು.
ಸಮುದಾಯ ಹಿರಿಯರಾದ ನಿವೃತ್ತ ಪ್ರಾಚಾರ್ಯ ವಿ.ಎನ್.ಕಮ್ಮಾರ ಮಾತನಾಡಿ ಚಕಣಾಚಾರಿಯವರ ಸಮಗ್ರ ಜೀವನ ಚರಿತ್ರೆಯನ್ನು ವಿವರವಾಗಿ ತಿಳಿಸಿಕೊಟ್ಟರು. ಮುರುನಾಳ ಮಳೆಯ ರಾಜೇಂದ್ರ ಮಠದ ಜಗನ್ನಾಥ ಸ್ವಾಮಿಗಳು ಹಾಗೂ ಮಳೆಯ ರಾಜೇಂದ್ರ ಸ್ವಾಮಿಗಳು ಸಾನಿದ್ಯ ವಹಿಸಿ ಆರ್ಶೀವಚನ ನೀಡಿದರು. ಇದೇ ಸಂದರ್ಭದಲ್ಲಿ ಕಟ್ಟಿಗೆ ಹಾಗೂ ಶಿಲೆಯಲ್ಲಿ ನಿರ್ಮಿಸಲಾದ ಹಂಪಿ ರಥ, ನಟರಾಜ, ವಿಶ್ವಕರ್ಮ ಹಾಗೂ ಶಿಲಾಬಾಲಕಿಯ ಕಲಾಕೃತಿಗಳನ್ನು ನಿರ್ಮಿಸಿದ ಯುವ ಶಿಲ್ಪಕಲಾವಿದರಾದ ಮೌನೇಶ ಬಡಿಗೇರ, ಮೋಹನ ಬಡಿಗೇರ, ಬಸವರಾಜ ಬಡಿಗೇರ ಅವರನ್ನು ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ವಿಶ್ವಕರ್ಮ ಸಮುದಾಯದ
ಮುಖಂಡರು ಸೇರಿದಂತೆ ಇತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಎನ್.ಹೇಮಾವತಿ ಪ್ರಾರಂಭದಲ್ಲಿ ಸ್ವಾಗತಿಸಿ ಕೊನೆಗೆ ವಂದಿಸಿದರು. ಶಂಕರಲಿಂಗ ದೇಸಾಯಿ ನಿರೂಪಿಸಿದರು.
Be the first to comment