ವಿದೇಶಿ ಸುದ್ದಿಗಳು
ಶನಿವಾರವೇ ಆಪರೇಶನ್ ಬಗ್ದಾದಿ ಆರಂಭ:
ಶನಿವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಹಿರಿಯ ಸಲಹೆಗಾರರು ಕಂಟ್ರೋಲ್ ರೂಂನಲ್ಲಿ ಬಗ್ದಾದಿ ವಿರುದ್ಧದ ಕಾರ್ಯಾಚರಣೆಯ ನೇರ ಪ್ರಸಾರ ವೀಕ್ಷಿಸಲು ಸಜ್ಜಾಗಿ ಕುಳಿತಿದ್ದರು. ಅಮೆರಿಕ ವಿಶೇಷ ಪಡೆಗಳು ಬರೋಬ್ಬರಿ ಆರು ಸಾವಿರ ಮೈಲಿ ದೂರದಲ್ಲಿರುವ ಸಿರಿಯಾದ ಇದ್ಲಿಬ್ ಬಾರಿಶ ಹಳ್ಳಿಯ ಅಡಗುತಾಣದಲ್ಲಿ ಅಡಗಿದ್ದ ಬಗ್ದಾದಿ ವಿರುದ್ಧ ರಹಸ್ಯ ಕಾರ್ಯಾಚರಣೆಗೆ ಸಜ್ಜಾಗಿತ್ತು.
ಸಿರಿಯಾದ ಬಾರಿಶ ಹಳ್ಳಿಯಲ್ಲಿ ಬಗ್ದಾದಿ ಅಡಗುತಾಣದ ಬಗ್ಗೆ ಸಿಐಎ 48 ಗಂಟೆಗಳ ಕಾಲ ಮಾಹಿತಿಯನ್ನು ಕಲೆ ಹಾಕಿತ್ತು. ಸಿಐಎ ಮಾಹಿತಿ ಮೇರೆಗೆ ಎಂಟು ಸಿಎಚ್ 47 ಹೆಲಿಕಾಪ್ಟರ್ ಗಳು ರಾತ್ರಿ ಉತ್ತರ ಇರಾಕ್ ನಂತೆ ಹೊರಟಿದ್ದವು. ಕ್ರೂರಿ ಅಬು ಬಕರ್ ಬಗ್ದಾದಿಯನ್ನು ಗುರಿಯಾಗಿರಿಸಿಕೊಂಡು ಹೊರಟ ಅಮೆರಿಕದ ವಿಶೇಷ ಡೆಲ್ಟಾ ಪಡೆಗಳು ಸಿರಿಯಾದತ್ತ ದಾಂಗುಡಿ ಇಟ್ಟಿದ್ದವು. ಬಗ್ದಾದಿ ವಿರುದ್ಧದ ಕಾರ್ಯಾಚರಣೆಗೆ ಇಟ್ಟ ಹೆಸರು “ಕೇಯ್ಲಾ ಮುಲ್ಲೆರ್ (ಈಕೆ ಅಮೆರಿಕದ ಸಮಾಜಸೇವೆ ಕಾರ್ಯಕರ್ತೆ, ಈಕೆಯನ್ನು ಬಗ್ದಾದಿ ಹತ್ಯೆಗೈದಿದ್ದ).
ಅಮೆರಿಕದ ಪಡೆಗಳು ಬಗ್ದಾದಿಯ ಅಡಗುತಾಣದತ್ತ ಧಾವಿಸುತ್ತಲೇ ಅಪಾಯದ ಮುನ್ಸೂಚನೆ ಅರಿತ ಬಗ್ದಾದಿ ಓಡಿಹೋಗಿ ಸುರಂಗದಲ್ಲಿ ಅಡಗಿಕೊಂಡಿದ್ದ. ಸ್ವಯಂ ಚಾಲಿತ ಗನ್ ಗಳಿಂದ ಗುಂಡಿನ ದಾಳಿ ಆರಂಭವಾಗಿದ್ದನ್ನು ಸ್ಥಳೀಯ ಜನರು ಗಮನಿಸಿರುವುದಾಗಿ ವರದಿ ವಿವರಿಸಿದೆ. ಟ್ರಂಟ್ ಆದೇಶದ ಮೇರೆಗೆ ಇಡೀ ಕಟ್ಟಡವನ್ನೇ ಸ್ಫೋಟಿಸಲು ಆದೇಶ ಕೊಟ್ಟಿದ್ದು, ಅದರಂತೆ ಅಮೆರಿಕದ ಪಡೆಗಳು ಇಡೀ ಕಟ್ಟಡವನ್ನೇ ಬಾಂಬ್ ದಾಳಿಯಿಂದ ಧ್ವಂಸ ಮಾಡಿಬಿಟ್ಟಿದ್ದವು!
ಅಷ್ಟರೊಳಗೆ ಬಗ್ದಾದಿ ತನ್ನ ಮೂವರು ಮಕ್ಕಳೊಂದಿಗೆ ಆತ್ಮಾಹುತಿ ಮಾಡಿಕೊಂಡು ಬಿಟ್ಟಿದ್ದ. ಐಸಿಸ್ ಸ್ಥಾಪಕ ಹೀರೋ ರೀತಿ ಸಾವನ್ನಪ್ಪಿಲ್ಲ. ಬಗ್ದಾದಿ ಹೇಡಿಯಂತೆ
, ಗೋಗರೆದು ಮಕ್ಕಳ ಜತೆಯೇ ಆತ್ಮಾಹುತಿ ಮಾಡಿಕೊಂಡಿದ್ದಾನೆ ಎಂದು ಟ್ರಂಪ್ ವಿವರಿಸಿದ್ದಾರೆ.
ಸುರಂಗದೊಳಗಿನ ಬಂಕರ್ ನೊಳಗೆ ಬಗ್ದಾದಿ ಸಾವನ್ನಪ್ಪಿದ್ದ. ಅಷ್ಟೇ ಅಲ್ಲ ಬಾಂಬ್ ಸ್ಫೋಟದಿಂದ ಬಗ್ದಾದಿ ದೇಹ ಛಿದ್ರ, ಛಿದ್ರವಾಗಿ ಹೋಗಿತ್ತು. ಅಮೆರಿಕ ಪಡೆಗಳು ಅವಶೇಷಗಳಡಿ ಬಿದ್ದಿದ್ದ ಶವದ ತುಂಡುಗಳನ್ನು ಸಂಗ್ರಹಿಸಿದ್ದವು. ಕಾರ್ಯಾಚರಣೆ ಪಡೆ ಜತೆಗಿದ್ದ ವಿಧಿವಿಜ್ಞಾನ ತಜ್ಞರು ಬಗ್ದಾದಿಯ ಡಿಎನ್ ಎ ಸ್ಯಾಂಪಲ್ ಅನ್ನು ಕೊಂಡೊಯ್ದಿದ್ದು, ಅಲ್ಲಿಯೇ ಪರೀಕ್ಷೆಗೊಳಪಡಿಸಿದ್ದವು. ಯಾಕೆಂದರೆ ಈ ಹಿಂದೆ ನಡೆದ ಕೆಲವು ದಾಳಿಯಲ್ಲಿ ಬಗ್ದಾದಿ ಸಾವನ್ನಪ್ಪಿದ್ದ ಎಂದು ಹೇಳಲಾಗಿತ್ತು. ಆದರೆ ಈ ಬಾರಿ ಅಮೆರಿಕ ಪಡೆಯ ದಾಳಿ ಯಶಸ್ವಿ ಕಂಡಿತ್ತು.
ಲ್ಯಾಬ್ ತಂತ್ರಜ್ಞರು ಕಾರ್ಯಾಚರಣೆ ನಡೆದ ಸ್ಥಳದಲ್ಲಿಯೇ ಡಿಎನ್ ಎ ಪರೀಕ್ಷೆ ನಡೆಸಿ, 15 ನಿಮಿಷಗಳಲ್ಲಿಯೇ ಸಾವನ್ನಪ್ಪಿದ್ದು ಬಗ್ದಾದಿ ಎಂಬ ಅಧಿಕೃತ ಸಂದೇಶವನ್ನು ಡೊನಾಲ್ಡ್ ಟ್ರಂಪ್ ಗೆ ರವಾನಿಸಿತ್ತು.
ಬಗ್ದಾದಿ ಸಾವನ್ನಪ್ಪಿದ್ದ ನಂತರವೂ ಅಮೆರಿಕ ಪಡೆಗಳು ಸುಮಾರು ಎರಡು ಗಂಟೆಗಳ ಕಾಲ ಕಂಪೌಂಡ್ ನಲ್ಲಿ ಕಾರ್ಯಾಚರಣೆ ನಡೆಸಿ, ಇಸ್ಲಾಮಿಕ್ ಸ್ಟೇಟ್ ಗೆ ಸೇರಿದ್ದ ಸೂಕ್ಷ್ಮ ವಸ್ತುಗಳನ್ನು (ಮಹತ್ವದ ಮಾಹಿತಿ, ಮುಂದಿನ ದಾಳಿ ಕುರಿತ ಸ್ಕೆಚ್) ವಶಪಡಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ನಂತರ ಅಮೆರಿಕದ ಯುದ್ಧ ವಿಮಾನಗಳು ಆರು ರಾಕೆಟ್ ಗಳ ಮೂಲಕ ಇಡೀ ಬಗ್ದಾದಿ ಕಟ್ಟಡವನ್ನು ನೆಲಸಮ ಮಾಡಿರುವುದಾಗಿ ವರದಿ ವಿವರಿಸಿದೆ. ಈ ವಿಷಯ ಖಚಿತವಾಗುತ್ತಿದ್ದಂತೆಯೇ ಶನಿವಾರ ಡೊನಾಲ್ಡ್ ಟ್ರಂಪ್ (ಭಾರತದಲ್ಲಿ ಭಾನುವಾರ ಸಂಜೆ) ಮಹತ್ತರ ಘಟನೆಯೊಂದ ನಡೆದಿದೆ ಎಂದು ಟ್ವೀಟ್ ಮಾಡುವ ಮೂಲಕ ಕುತೂಹಲ ಮೂಡಿಸಿದ್ದರು.
ಶ್ವೇತ ಭವನದ ವಕ್ತಾರ ಹೋಗಾನ್ ಗಿಡ್ಲೈ, ಡೊನಾಲ್ಡ್ ಟ್ರಂಪ್ ಅವರು ಭಾನುವಾರ ಬೆಳಗ್ಗೆ ಮಹತ್ತರ ಪ್ರಕಟಣೆಯನ್ನು ತಿಳಿಸಲಿದ್ದಾರೆ ಎಂದು ಹೇಳಿದ್ದರು. ಅದರಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಐಸಿಸ್ ಸ್ಥಾಪಕ ಬಗ್ದಾದಿಯನ್ನು ಅಮೆರಿಕ ಪಡೆಗಳು ಹತ್ಯೆಗೈದಿರುವುದನ್ನು ಘೋಷಿಸಿದ್ದರು.
Be the first to comment