ಜಿಲ್ಲಾ ಸುದ್ದಿಗಳು
ಹೊನ್ನಾವರ:
ಬ್ರಾಂಚ್ ಪೋಸ್ಟ್ ಮಾಸ್ಟರ್ ಎಂಬಾತ ಠೇವಣಿದಾರರ ಪಾಸ್ ಪುಸ್ತಕದಲ್ಲಿ ಹಣ ಜಮಾ ತೋರಿಸಿ ಇಲಾಖೆಯ ದಾಖಲೆಗಳಲ್ಲಿ ಹಣ ಜಮಾ ತೋರಿಸದೇ ಠೇವಣಿದಾರರ ಹಣವನ್ನು ತನ್ನ ಸ್ವಂತ ಬಳಕೆಗೆ ವಿನಿಯೋಗಿಸಿಕೊಂಡು ನಂಬಿಕೆ, ದ್ರೋಹವೆಸಗಿದ ಹಿನ್ನೆಲೆಯಲ್ಲಿ ಆರೋಪಿಗೆ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ಜೊತೆಗೆ 2 ಸಾವಿರ ರೂ. ದಂಡ ವಿಧಿಸಿ ಬುಧವಾರ ಆದೇಶ ಹೊರಡಿಸಿದೆ.
ಮೂಲತಃ ಹೊನ್ನಾವರ ತಾಲೂಕಿನ ಕಡ್ಲೆ ಗ್ರಾಮದ ಉಪ್ಲೆಯ ನಿವಾಸಿ ಮಹಾಬಲೇಶ್ವರ (ರವಿ) ಗಣಪತಿ ಭಂಡಾರಿ ಶಿಕ್ಷೆಗೊಳಗಾದ ಪೋಸ್ಟ್ ಮಾಸ್ಟರ್. ಈತ ಹೊನ್ನಾವರ ಠಾಣಾ ವ್ಯಾಪ್ತಿಯಲ್ಲಿ ಬರುವ ಮಾವಿನಕುರ್ವಾ ಹೊಸಾಡದ ಅಂಚೆ ಕಚೇರಿಯಲ್ಲಿ ಬ್ರಾಂಚ್ ಪೋಸ್ಟ್ ಮಾಸ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಆರೋಪಿಯು 2006 ನೇ ಸಾಲಿನಲ್ಲಿ ಠೇವಣಿದಾರರಾದ ಸುಭದ್ರಾ ಗಣಪತಿ ನಾಯ್ಕ, ಗಣಪತಿ ಮಂಜು ಗೌಡ, ಮಾದೇವಿ ಈರಪ್ಪ ನಾಯ್ಕ, ಗಣಪತಿ ಸುಬ್ರಾಯ ಗೌಡ, ಕರಿಯಮ್ಮ ಗೋವಿಂದ ಗೌಡ ಇವರು ತಮ್ಮ ಖಾತೆಯಲ್ಲಿ ಠೇವಣಿ ಇಟ್ಟ ಹಣವನ್ನು ಪಾಸ್ ಪುಸ್ತಕದಲ್ಲಿ ಹಣದ ಜಮಾ ತೋರಿಸಿದ್ದಾನೆ ಎನ್ನಲಾಗಿದೆ. ಆದರೆ ಆತ ಈ ಬಗ್ಗೆ ಖಾತೆಗಳಿಗೆ ಜಮಾ ಮಾಡದೇ ತನ್ನ ಸ್ವಂತ ಉಪಯೋಗಕ್ಕೆ ಬಳಸಿಕೊಂಡ ಬಗ್ಗೆ ಹೊನ್ನಾವರ ಪೋಲೀಸ್ ಠಾಣೆಯಲ್ಲಿ ಖುದ್ದು ಪ್ರಕರಣ ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಪಿಎಸ್‍ಐ ರೇವತಿ ಹಾಗೂ ವೆಂಕಪ್ಪ ನಾಯಕ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ವೆಂಕಟೇಶ.ಕೆ.ಗೌಡ ವಾದ ಮಂಡಿಸಿದ್ದರು. ಈತನ ಮೇಲೆ ದಾಖಲಾಗಿದ್ದ 5 ಪ್ರಕರಣಗಳ ವಿಚಾರಣೆ ನಡೆಸಿದ ಹೊನ್ನಾವರ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಕುಮಾರ್. ಜಿ ಅವರು ವಿಚಾರಣೆ ನಡೆಸಿದ್ದು, ಅಪರಾಧಿಗೆ 2 ವರ್ಷ ಜೈಲು, 2 ಸಾವಿರ ರೂ. ದಂಡ ವಿಧಿಸಿದೆ.
Be the first to comment