ಕೊಟ್ಪಾ ದಾಳಿ : 26 ಪ್ರಕರಣ ದಾಖಲು

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ: ಜಿಲ್ಲೆಯಲ್ಲಿ ತಂಬಾಕು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ಮುಂದುವರೆದಿದ್ದು, ತಂಬಾಕು ನಿಯಂತ್ರಣ ತಂಡ ಬಾದಾಮಿ ನಗರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಅಂಗಡಿಗಳ ಮೇಲೆ ದಿಡೀರ ದಾಳಿ ನಡೆಸಿ ನಿಯಮಗಳ ಉಲ್ಲಂಘಣೆ ಆರೋಪಕ್ಕಾಗಿ ದಂಡವನ್ನು ವಿಧಿಸಿದೆ.


ಬಾದಾಮಿ ನಗರದಲ್ಲಿ ತಂಬಾಕು ಉತ್ಪನ್ನಗಳ ಸಗಟು ಹಾಗೂ ಚಿಲ್ಲರೆ ಮಾರಾಟಗಾರರ ಅಂಗಡಿಗಳಿಗೆ ದಾಳಿ ನಡೆಸಿ ಕೋಟ್ಪಾ ಕಾಯ್ದೆ-2003 ರ 4, ಮತ್ತು 6 ಸೆಕ್ಷನಗಳ ಉಲ್ಲಂಘಿಸಿದವರ ವಿರುದ್ದ ಒಟ್ಟು 26 ಪ್ರಕರಣಗಳನ್ನು ದಾಖಲಿಸಿ 1900 ರೂ.ಗಳ ದಂಡ ವಿಧಿಸಿದೆ. ತಂಬಾಕು ಉತ್ಪನ್ನಗಳ ಮಾರಾಟ ಮಾರಾಟಗಾರರಿಗೆ ತಮ್ಮ ಅಂಗಡಿಗಳಲ್ಲಿ ಕಡ್ಡಾಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಫಲಕ ಕಡ್ಡಾಯವಾಗಿ ಹಾಕಲು ತಿಳಿಸಿತು.

ಸೀಗರೇಟ್ ಬೀಡಿಗಳನ್ನು ಬಿಡಿ ಬಿಡಿಯಾಗಿ ಮಾರಾಟ ಮಾಡಬಾರದು ಹಾಗೂ ತಂಬಾಕು ಉತ್ಪನ್ನಗಳ ಬಗ್ಗೆ ಗೋಡೆ ಬರಹ, ಹೋರ್ಡಿಂಗ್ಸ್ ದೃಶ್ಯ ಹಾಗೂ ಮುದ್ರಣ ಮಾಧ್ಯಮದ ಮೂಲಕ ತಂಬಾಕು ಉತ್ಪನ್ನಗಳ ಜಾಹೀರಾತು ಮಾಡಬಾರದೆಂದು ಕರಪತ್ರ ನೀಡುವ ಮೂಲಕ ತಿಳಿಹೇಳಿದರು. ಸೆಕ್ಷನ್ 6 (ಬಿ) ಕಾಯ್ದೆ ಅನುಸಾರ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ 100 ಗಜ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ ಉಲ್ಲಂಘಣೆಯಾದರೆ ದಂಡ ಹಾಗೂ ಸೆರೆವಾಸ ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಿದರು.

ದಾಳಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಘಟಕದಿಂದ ಜಿಲ್ಲಾ ತಂಬಾಕು ಸಲಹೆಗಾರರಾದ ಶಶಿಕಾಂತ ಕುಮಠಳ್ಳಿ, ಶಿವಲಿಂಗ ಕರಗಣ್ಣಿ, ಬಾದಾಮಿ ಆರೋಗ್ಯ ಇಲಾಖೆಯ ವಿ.ಎಸ್.ಹೊಸೂರ ಹಾಗೂ ಪೋಲಿಸ ಇಲಾಖೆ ಸಿಬ್ಬಂದಿಯಾದ ಡಿ.ಡಿ.ಧೂಳಖೇಡ ರವರು ಭಾಗವಹಿಸಿದ್ದರು.

Be the first to comment

Leave a Reply

Your email address will not be published.


*