ರಾಜ್ಯ ಸುದ್ದಿಗಳು
ಬೆಂಗಳೂರು:ರಾಜ್ಯದಲ್ಲಿನ ಕಂದಾಯ ಇಲಾಖೆಯ (Revenue Department ) ತಾಲ್ಲೂಕು ಮಟ್ಟದಲ್ಲಿನ ಮಿನಿ ವಿಧಾನಸೌಧದ (Vidhan Soudha ) ಕಟ್ಟಗಳಿಗೆ, ಇದುವರೆಗೆ ಮಿನಿ ವಿಧಾನಸೌಧವೆಂದೇ ಕರೆಯಲಾಗುತ್ತಿತ್ತು.
ಇಂತಹ ಹೆಸರನ್ನು ರಾಜ್ಯ ಸರ್ಕಾರ ( Karnataka Government ) ಬದಲಾಯಿಸಿದ್ದು, ಈಗ ತಾಲ್ಲೂಕು ಆಡಳಿತ ಸೌಧ ಎಂಬುದಾಗಿ ನಾಮಾಂಕಿತ ಮಾಡಲಾಗಿದೆ.ಈ ಕುರಿತಂತೆ ಕಂದಾಯ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಜಯಲಕ್ಷ್ಮೀ ಸುತ್ತೋಲೆ ಹೊರಡಿಸಿದ್ದು, ರಾಜ್ಯದಲ್ಲಿನ ತಾಲ್ಲೂಕು ಮಟ್ಟದಲ್ಲಿ ಕಂದಾಯ ಇಲಾಖೆಯನ್ನೊಳಗೊಂಡಂತೆ ಇತರೆ ಸರ್ಕಾರಿ ಕಚೇರಿಗಳು ( Taluk Office ) ಮಿನಿ ವಿಧಾನಸೌಧದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿರುವ ಮಿನಿ ವಿಧಾನಸೌಧ ಎಂಬ ತಾಲ್ಲೂಕು ಆಡಳಿತ ಕಚೇರಿಗಳನ್ನು ರಾಜ್ಯದ ಭಾಷಾನೀತಿಗೆ ಒಳಪಡುವಂತೆ ಹಾಗೂ ರಾಜ್ಯದ ಅಧಿಕೃತ ಭಾಷೆ ಕನ್ನಡವಾಗಿರುವುದರಿಂದ ನಾಡು-ನುಡಿ ಸಂಸ್ಕೃತಿಗೆ ಪೂರಕವಾಗಿ ತಾಲ್ಲೂಕು ಆಡಳಿತ ಸೌಧ ಎಂದು ಬದಲಿಸುವುದು ಸೂಕ್ತವೆಂದು ಹಾಗೂ ಪ್ರಸ್ತುತ ಇರುವ ಮಿನಿ ಎಂಬ ಪದ ಆಂಗ್ಲ ಭಾಷೆಯಾಗಿದ್ದು, ತಾಲ್ಲೂಕು ಮಟ್ಟದ ಆಡಳಿತ ಕಟ್ಟಡಗಳಲ್ಲಿ ಯಾವುದೇ ಕಲಾಪಗಳನ್ನಾಗಲಿ, ಕಾಯಿದೆ ಕಾನೂನುಗಳನ್ನಾಗಲಿ ರೂಪಿಸುವ ಶಕ್ತಿ ಕೇದ್ರಗಳಲ್ಲದ ಕಾರಣ, ಮಿನಿ ವಿಧಾನಸೌಧ ಎಂಬುದರ ಬದಲಾಗಿ, ತಾಲ್ಲೂಕು ಆಡಳಿತ ಸೌಧ ಎಂದು ಬದಲಿಸುವುದು ಅರ್ಥಪೂರ್ಣವಾಗಿರುತ್ತದೆ ಎಂದು ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸಾರ್ವಜನಿಕರು ಮತ್ತು ಗಣ್ಯ ವ್ಯಕ್ತಿಗಳು ಕೋರಿರುತ್ತಾರೆ.
ಈ ಹಿನ್ನಲೆಯಲ್ಲಿ ಪ್ರಸ್ತುತ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿನ ಮಿನಿ ವಿಧಾನಸೌಧ ಎಂಬ ನಾಮಾಂಕಿತದ ಬದಲು, ತಾಲ್ಲೂಕು ಆಡಳಿತ ಸೌಧ ಎಂದು ನಾಮಾಂಕಿತಗೊಳಿಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವಂತೆ ಸಕ್ಷಮ ಪ್ರಾಧಿಕಾರಗಳಿಗೆ ಈ ಮೂಲಕ ತಿಳಿಸಲಾಗಿದೆ ಎಂದಿದ್ದಾರೆ.
Be the first to comment