ಜಿಲ್ಲಾ ಸುದ್ದಿಗಳು
ಬಾಗಲಕೋಟೆ : ಜಿಲ್ಲೆಯ ಕಬ್ಬು ಬೆಳೆಗಾರರ ಹೆಚ್ಚುವರಿ ಬಾಕಿ ಹಣ ಪಾವತಿ ಹಾಗೂ ಪ್ರಸಕ್ತ ಹಂಗಾಮಿನ ಎಫ್‍ಆರ್‍ಪಿ ದರ ಘೋಷಣೆ ಕುರಿತಂತೆ ಚರ್ಚಿಸಲು ಅಕ್ಟೋಬರ 27 ರಂದು ಸಂಜೆ 4.30ಕ್ಕೆ ಸಕ್ಕರೆ ಕಾರ್ಖಾನೆ ಮಾಲಿಕರ ಮತ್ತು ರೈತರ ಜೊತೆ ಸಭೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಸಕ್ಕರೆ ಕಾರ್ಖಾನೆ ಮಾಲಿಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಕ್ಕರೆ ಕಾರ್ಖಾನೆಗಳು ಹಳೆಯ ಬಾಕಿಯನ್ನು ಆದಷ್ಟೂ ಬೇಗನೇ ಸಂಪೂರ್ಣವಾಗಿ ಪಾವತಿಸಬೇಕು. ಪ್ರಸಕ್ತ ವರ್ಷದ ಹಂಗಾಮು ಪ್ರಾರಂಭಿಸುವ ಪೂರ್ವದಲ್ಲಿ ದರ ಘೋಷಣೆ ಮಾಡುವಂತೆ ಎಲ್ಲ ಸಕ್ಕರೆ ಕಾರ್ಖಾನೆ ಮಾಲಿಕರಿಗೆ ಸೂಚಿಸಿದರು.
ಕಬ್ಬಿನ ಬಾಕಿ ಪಾವತಿಗೆ ಈಗಾಗಲೇ ರೈತ ಮುಖಂಡರುಗಳು ಮುಧೋಳದಲ್ಲಿ ಪ್ರತಿಭಟನೆ ಮಾಡುತ್ತಿರುವುದರಿಂದ ರೈತರ ಹಿತದೃಷ್ಟಿಯಿಂದ ಅಕ್ಟೋಬರ 27 ರಂದು ರೈತರ ಮುಖಂಡರ ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ, ವ್ಯವಸ್ಥಾಪಕ ನಿರ್ದೇಶಕರುಗಳೊಂದಿಗೆ ಇನ್ನೊಂದು ಸಭೆ ಕರೆದು ಅವರ ಅಹವಾಲುಗಳನ್ನು ಆಲಿಸಿ, ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿಸದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಮಾತನಾಡಿ ಜಿಲ್ಲೆಯ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ತಮ್ಮ ತಮ್ಮ ರೈತರ ಮನವಲಿಸಿ, ಈ ಸಾಲಿನ ದರವನ್ನು ಪ್ರಕಟಿಸಿ ಕಾರ್ಖಾನೆಯನ್ನು ಪ್ರಾರಂಭಿಸುವಂತೆ ಸಲಹೆ ನೀಡಿದರು. ಸಭೆಯಲ್ಲಿ ಆಹಾರ ಇಲಾಖೆಯ ಜಂಟಿ ನಿದೇರ್ಶಕ ಶ್ರೀಶೈಲ ಕಂಕಣವಾಡಿ, ಉಪವಿಭಾಗಾಧಿಕಾರಿಗಳಾದ ಎಂ.ಗಂಗಪ್ಪ, ಸಿದ್ದು ಹುಲ್ಲೊಳ್ಳಿ ಸೇರಿದಂತೆ ವಿವಿಧ ಸಕ್ಕರೆ ಕಾರ್ಖಾನೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
Be the first to comment