ಜಿಲ್ಲಾ ಸುದ್ದಿಗಳು
ಬಾಗಲಕೋಟೆ : ರಾಜ್ಯ, ಜಿಲ್ಲಾ ಹಾಗೂ ತಾಲೂಕಾ ಮಟ್ಟದಲ್ಲಿರುವ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಬಡವರಿಗೆ ಉಚಿತವಾಗಿ ಕಾನೂನಿನ ಅರಿವು ಮತ್ತು ನೆರವು ನೀಡಲಾಗುತ್ತಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ ತಿಳಿಸಿದರು.
ನಗರದ ಹಜರತ್ ಶಹಿನಶಾವಲಿ ದರ್ಗಾದ ಆವರಣದಲ್ಲಿಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ತಾ.ಪಂ, ಶಿಶು ಅಭಿವೃದ್ದಿ ಯೋಜನೆ, ಎಸ್.ಸಿ.ನಂದಿಮಠ ಕಾನೂನು ಮಹಾವಿದ್ಯಾಲಯ, ಸರ್ಚ ಸ್ವಯಂ ಸೇವಾ ಸಂಸ್ಥೆ, ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ಹಕ್ಕುಗಳನ್ನು ಪಡೆಯಲು ಕಾನೂನಿನ ಮೊರೆ ಹೋಗಬೇಕಾಗುತ್ತದೆ. ಕೋರ್ಟ ಮೆಟ್ಟಿಲು ಹತ್ತಲು ಬಡವರಿಗೆ ಕಷ್ಟಸಾಧ್ಯ. ಇದರಿಂದ ಹಕ್ಕುಗಳನ್ನು ಪಡೆಯಲು ಹಿಂಜರಿಯುತ್ತಾರೆ. ಅಂತವರಿಗೆ ಉಚಿತವಾಗಿ ಕಾನೂನು ಸೇವೆ ನೀಡಲೆಂದೇ ಪ್ರಾಧಿಕಾರ ರಚಿಸಲಾಗಿದ್ದು, ಇದರ ಮೂಲಕ ತಮ್ಮ ಹಕ್ಕನ್ನು ಪಡೆಯಲು ಸಾಧ್ಯವಾಗುತ್ತದೆ. ಕಾನೂನಿನಡಿಯಲ್ಲಿರುವ ಯಾವುದೇ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಚಿತ ಕಾನೂನು ಸೇವೆ ಪಡೆದುಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಪ್ರಾಧಿಕಾರದ ದ್ಯೆಯೋದ್ದೇಶ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಗುಲಾಬ ನದಾಫ್ ಪ್ರಾಧಿಕಾರದಿಂದ ಸಿಗುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಲು ಸಾರ್ವಜನಿಕರಿಗೆ ಕರೆ ನೀಡಿದರು. ಎಸ್.ಸಿ.ನಂದಿಮಠ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಪಿ.ಚಂದ್ರಿಕಾ ಅವರು ದತ್ತು ಪ್ರಕ್ರಿಯೆ ಕಾನೂನು ಕುರಿತು ಹಾಗೂ ದತ್ತು ಪ್ರಕ್ರಿಯೆ ಹಾಗೂ ನಿರ್ವಹಣೆ ಕುರಿತು ಸರ್ಚ ಸ್ವಯಂ ಸಂಸ್ಥೆಯ ನಿರ್ದೇಶಕ ವೆಂಕಟೇಶ ಮೋಖೆ ಅವರು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಮೇಶ ಸೂಳಿಕೇರಿ, ಮಕ್ಕಳ ರಕ್ಷಣಾಧಿಕಾರಿ ಕೇಶವದಾಸ, ಮೇಲ್ವಿಚಾರಕಿ ವೀಣಾ ಪಟ್ಟಣಶೆಟ್ಟಿ, ನವನಗರದ ಮಹಿಳಾ ಪೊಲೀಸ್ ಠಾಣೆಯ ಪಿಎಸ್‍ಐ ಜಯಶ್ರೀ, ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‍ಐ ರೇಖಾ ದೊಡಮನಿ, ಜಿಲ್ಲಾ ರಕ್ಷಣಾ ಘಟಕದ ಸಂತೋಷ ಹುಡಕನ್ನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.
Be the first to comment