ಜಿಲ್ಲಾ ಸುದ್ದಿಗಳು
ಬಾಗಲಕೋಟೆ :ಜಿಲ್ಲೆಯಾದ್ಯಂತ ಸೆಪ್ಟೆಂಬರ 17 ರಂದು ಹಮ್ಮಿಕೊಂಡ ಬೃಹತ್ ಲಸಿಕಾ ಮೇಳ ಸಂಪೂರ್ಣ ಯಶಸ್ವಿಯಾಗಿದ್ದು, ಒಂದೇ ದಿನದಲ್ಲಿ 85,712 ಜನರಿಗೆ ಕೋವಿಡ್ ಲಸಿಕೆ ನೀಡುವ ಮೂಲಕ ಗುರಿ ಮೀರಿ ಸಾಧನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆ ಅಂಗವಾಗಿ ಸೆಪ್ಟೆಂಬರ 17 ರಂದು ಬೃಹತ್ ಲಸಿಕಾ ಮೇಳ ಹಮ್ಮಿಕೊಳ್ಳಲಾಗಿತ್ತು. ಬಾಗಲಕೋಟೆ ಜಿಲ್ಲೆಗೆ ಒಂದೇ ದಿನದಲ್ಲಿ 75 ಸಾವಿರ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಆದರೆ ಗುರಿ ಮೀರಿ ಸಾಧನೆ ಮಾಡುವ ಮೂಲಕ ದಾಖಲೆ ನಿರ್ಮಿಸಲಾಗಿದೆ. ಅಲ್ಲದೇ ರಾಜ್ಯದ ಟಾಪ್ 15 ರಲ್ಲಿ 8ನೇ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದ್ದಾರೆ.
ಬೃಹತ್ ಕೋವಿಡ್ ಲಸಿಕಾ ಮೇಳದ ಯಶಸ್ವಿಗೆ ಶ್ರಮಿಸಿದ ಕಂದಾಯ, ಆರೋಗ್ಯ, ಗ್ರಾಮೀಣಾಭಿವೃದ್ದಿ, ನಗರ ಸ್ಥಳೀಯ ಸಂಸ್ಥೆಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಶಿಕ್ಷಣ ಇಲಾಖೆ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಮೇಳದ ಯಶಸ್ವಿಗೆ ಸಹಕರಿಸಿದ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರಿಗೂ ಸಹ ಧನ್ಯವಾದಗಳನ್ನು ತಿಳಿಸಿದ್ದಾರೆ.
ಬೃಹತ್ ಲಸಿಕಾ ಮೇಳದಲ್ಲಿ ಒಟ್ಟು 85,712 ಜನರಿಗೆ ಲಸಿಕೆ ನೀಡಲಾಗಿದ್ದು, ಅದರಲ್ಲಿ ಮೊದಲನೇ ಡೋಸ್ 56316 ಜನ ಪಡೆದರೆ, ಎರಡನೇ ಡೋಸ್ 29396 ಜನ ಪಡೆದುಕೊಂಡಿದ್ದಾರೆ. ಕೋವಿಶಿಲ್ಡ ಲಸಿಕೆಯನ್ನು 77733 ಜನ, ಕೋವ್ಯಾಕ್ಸಿನ್ ಲಸಿಕೆಯನ್ನು 7979 ಜನ ಪಡೆದುಕೊಂಡಿರುತ್ತಾರೆ. ಮೇಳದಲ್ಲಿ ಜಮಖಂಡಿ ತಾಲೂಕಿನಲ್ಲಿ ಅತೀ ಹೆಚ್ಚು ಅಂದರೆ 22,155 ಜನ ಪಡೆದುಕೊಂಡಿದ್ದಾರೆ. ಬಾದಾಮಿ ತಾಲೂಕಿನಲ್ಲಿ 16910, ಬಾಗಲಕೋಟೆ 10646, ಬೀಳಗಿ 8057, ಹುನಗುಂದ 16119, ಮುಧೋಳ 11677 ಜನ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ 149 ಜನ ಲಸಿಕೆ ಪಡೆದುಕೊಂಡಿರುತ್ತಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
Be the first to comment