ಜಿಲ್ಲಾ ಸುದ್ದಿಗಳು
ಬಾಗಲಕೋಟೆ: ಉತ್ತಮ ಆರೋಗ್ಯ ಪಡೆಯಲು ಪೌಷ್ಠಿಕಾಂಶವುಳ್ಳ ಸಿರಿಧಾನ್ಯಗಳ ಬಳಕೆ ಅತೀ ಮುಖ್ಯವಾಗಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿರುವ ನೂತನ ಆಡಿಟೋರಿಯಂ ಹಾಲ್‍ನಲ್ಲಿ ಶುಕ್ರವಾರ ಧಾರವಾಡ ಕೃಷಿ ವಿಶ್ವ ವಿದ್ಯಾಲಯ, ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಇಪ್ಕೋ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಪೌಷ್ಠಿಕ ಧಾನ್ಯಗಳ ವರ್ಷ 2023ರ ದೃಷ್ಠಿಕೋನದಡಿ ಹಮ್ಮಿಕೊಂಡ ಪೌಷ್ಟಿಕ ಕೈತೋಟದ ಮಹಾಭಿಯಾನ ಮತ್ತು ವೃಕ್ಷಾರೋಪಣೆ ಸಮಾರಂಭದಲ್ಲಿ ರೈತ ಮಹಿಳೆಯರಿಗೆ ಸಸಿ ಮತ್ತು ಬೀಜದ ಕಿಟ್‍ಗಳನ್ನು ವಿತರಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ರೈತರು ಉತ್ತಮ ಬೆಳೆಗಳನ್ನು ಬೆಳೆಯದೇ ಹೆಚ್ಚಿನ ಲಾಭಕ್ಕಾಗಿ ವಾಣಿಜ್ಯ ಬೆಳೆಗಳ ಮೊರೆಹೋಗುತ್ತಿದ್ದಾರೆ. ಇದರಿಂದ ಸಿರಿಧಾನ್ಯಗಳ ಬೆಳೆ ಕುಂಟಿತಗೊಳ್ಳುತ್ತಿದೆ. ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯಗಳ ಬಳಕೆ ಹೆಚ್ಚಾಗಬೇಕು. ಇದರಿಂದ ಮಕ್ಕಳಲ್ಲಿನ ಪೌಷ್ಟಿಕತೆ ಹೆಚ್ಚಾಗಿ ಬೆಳೆವಣಿಗೆ ಉತ್ತಮವಾಗುತ್ತದೆ. ಪ್ರತಿಯೊಬ್ಬರು ತಮ್ಮ ಮನೆ ಕೈತೋಟಗಳಲ್ಲಿ, ಹೊಲಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಯಲು ಗದ್ದಿಗೌಡರ ತಿಳಿಸಿದರು.
ಪೌಷ್ಟಿಕ ಕೈತೋಟದ ಮಹಾಭಿಯಾನಕ್ಕೆ ಚಾಲನೆ ನೀಡಿದ ಮಾತನಾಡಿದ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರು ಇಂದಿನ ದಿನಮಾನಗಳಲ್ಲಿ ಮಕ್ಕಳಿಂದ ವಯೋವೃದ್ಧವರೆಗೂ ಹೊರಗಿನ ಲಘು ಆಹಾರವನ್ನು ಸೇವಿಸುತ್ತಾ ತಮ್ಮ ರೋಗನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಅದಕ್ಕಾಗಿ ತಮ್ಮ ಆಹಾರ ಪದ್ದತಿಯನ್ನು ಉತ್ತಮವಾಗಿಸಿಕೊಂಡು ದಿನನಿತ್ಯದ ಆಹಾರದಲ್ಲಿ ಪೌಷ್ಟಿಕ ಅಂಶಗಳುಳ್ಳ ಸಿರಿಧಾನ್ಯಗಳನ್ನು ಬಳಸುವಂತೆ ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಪಿ.ಕೆ.ಪಾಟೀಲ ಮಾತನಾಡಿ ಹಳೆಯ ಅಡುಗೆ ಪದ್ಧತಿಗಳನ್ನು ಪ್ರತಿ ಮನೆಯಲ್ಲಿ ಪುನಃ ಬಳಸುವಂತಾಗಬೇಕು. ಇದರಿಂದ ಉತ್ತಮ ಆರೋಗ್ಯದ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕೃಷಿ ಜಂಟಿ ನಿರ್ದೇಶಕರಾದ ಚೇತನಾ ಪಾಟೀಲ ಮಾತನಾಡಿ, ಭಾರತೀಯರಲ್ಲಿ ಪ್ರಾಚೀನ ಕಾಲದಿಂದಲೂ ಉತ್ತಮ ಆಹಾರ ಪದ್ಧಿತಿಯಿದ್ದು, ಕರೋನಾ ಮಹಾಮಾರಿ ಬಂದಾಗ ವಿಶ್ವದಲ್ಲಿಯೇ ಭಾರತೀಯರಲ್ಲಿ ಹೆಚ್ಚಿನ ರೋಗ ನಿರೋಧಕ ಶಕ್ತಿ ಇತ್ತು. ಇದಕ್ಕೆಲ್ಲಾ ಕಾರಣ ಅಡುಗೆ ಮನೆಯ ಔಷಧಿಗಳು, ಋತುಮಾನಕ್ಕೆ ತಕ್ಕಂತೆ ನಮ್ಮ ಪೂರ್ವಜರು ಮಾಡಿರುವ ಆಹಾರ ಪದ್ಧತಿ, ದಿನನಿತ್ಯದ ಊಟದ ತಟ್ಟೆಯಲ್ಲಿ ಎಲ್ಲ ಪೋಷಕಾಂಶಗಳಿರುವಂತೆ ನೋಡಿಕೊಳ್ಳುವುದು ಪ್ರತಿ ಮನೆಯ ಮಹಿಳೆಯ ಜವಾಬ್ದಾರಿಯಾಗಿದೆ ಎಂದರು. ಇದೇ ಸಂಧರ್ಭದಲ್ಲಿ ರೈತಮಕ್ಕಳಿಗಿರುವ ಶಿಷ್ಯವೇತನದ ಸದುಪಯೋಗ ಪಡೆಯುವಂತೆ ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಭಾರತಿ ಬಣಕಾರ ಮಾತನಾಡಿ, ಸರ್ಕಾರದಿಂದ ಸಿಗುವ ಪೌಷ್ಠಿಕ ಆಹಾರ ಗರ್ಭಿಣಿ ಮಹಿಳೆಯರಿಗೆ, ಮಕ್ಕಳಿಗೆ ಸಿಗುವಂತಾಗಬೇಕು. ಬಾಲ್ಯ ವಿವಾಹ ಮತ್ತು ಲೈಂಗಿಕ ದೌರ್ಜನ್ಯ ಮತ್ತು ಯಾವುದೇ ಸಂಕಷ್ಟದಲ್ಲಿರುವ ಮಹಿಳೆಯರು ಸಹಾಯವಾಣಿಗೆ ಕರೆ ಮಾಡಿ ಸಹಾಯ ಪಡೆಯಬಹುದಾಗಿದೆ ಎಂದರು. ಸಹಾಯಕ ಕೃಷಿ ನಿರ್ದೇಶಕ ಪಾಂಡಪ್ಪ ಲಮಾಣಿ ಮಾತನಾಡಿ, ಪ್ರತಿನಿತ್ಯದ ಊಟದಲ್ಲಿ ಹಣ್ಣು ಮತ್ತು ತರಕಾರಿಗಳು ಇದ್ದಾಗ ಮಾತ್ರ ದೇಹಕ್ಕೆ ಬೇಕಾಗುವ ಉತ್ತಮ ಪೋಷಕಾಂಶಗಳು ದೊರೆಯುತ್ತವೆ. ಅದರೊಂದಿಗೆ ಸಿರಿಧಾನ್ಯಗಳ ಬಳಕೆ ಸಹ ಅಗತ್ಯವೆಂದು ತಿಳಿಸಿದರು.
Be the first to comment