ಜಿಲ್ಲಾ ಸುದ್ದಿಗಳು
ಬಾಗಲಕೋಟೆ :ಸರಕಾರ ಜಾರಿಗೆ ತಂದಿರುವ ವಿವಿಧ ಕಾಯ್ದೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದು ಮಕ್ಕಳ ರಕ್ಷಣೆಗೆ ಬದ್ದರಾಗಿರುವುದಾಗಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ.ಅಂಥೋಣಿ ಸೆಬಾಸ್ಟಿಯನ್ ಹೇಳಿದರು.
ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಮಂಗಳವಾರ ಜರುಗಿದ ಆರ್‍ಟಿಇ-2009, ಪೋಸ್ಕೋ-2012 ಹಾಗೂ ಬಾಲನ್ಯಾಯ ಕಾಯ್ದೆ-2015ರ ಅನುಷ್ಠಾನ ಕುರಿತು ಭಾಗೀದಾರರೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಕಾಯ್ದೆ ಉಲ್ಲಂಘನೆಯಾದಲ್ಲಿ ತಕ್ಷಣ ಕ್ರಮಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಫೆಬ್ರವರಿ ಮಾಹೆಯಿಂದ ಆಗಸ್ಟ-21 ವರೆಗೆ ಬಾಲ್ಯವಿವಾಹ ಪೂರ್ವ 67 ಪ್ರಕರಣಗಳು ಹಾಗೂ ಬಾಲ್ಯವಿವಾಹ ನಂತರದ 46 ಪ್ರಕರಣಗಳಲ್ಲಿ ಕೇವಲ 5 ಪ್ರಕರಣಗಳಲ್ಲಿ ಮಾತ್ರ ಎಫ್‍ಐಆರ್ ದಾಖಲಿಸಲಾಗಿದೆ. ಉಳಿದವುಗಳ ಮೇಲೆ ಏಕೆ ಎಫ್‍ಐಆರ್ ದಾಖಲಿಸಿರುವದಿಲ್ಲ. ಈ ಬಗ್ಗೆ ಎರಡು ದಿನಗಳೊಳಗಾಗಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಬಾಲ್ಯವಿವಾಹ ತಡೆಗೆ ಎಲ್ಲ ಇಲಾಖೆಗಳ ಸಹಕಾರ ಅಗತ್ಯವಾಗಿದ್ದು, ಬಾಲ್ಯವಿವಾಹ ನಿಷೇದಾಧಿಕಾರಿಗಳು ಪ್ರಕರಣಗಳಲ್ಲಿ ಭಾಗಿಯಾಗುವುದು ಮುಖ್ಯವಾಗಿದೆ ಎಂದರು.
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ ಬಾಲಕಾರ್ಮಿಕ ಪತ್ತೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಸಮೀಕ್ಷೆಗೆ ಕ್ರಮವಹಿಸಲಾಗುತ್ತಿದ್ದು, ಶಾಪ್ ಮತ್ತು ಹೋಟಲ್‍ಗಳ ಮೇಲೆ ದಾಳಿ ಮಾಡಿ ಬಾಲಕಾರ್ಮಿಕ ಪತ್ತೆಗೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಲಾಗಿದೆ. ಶಾಲೆಯಲ್ಲಿ ಮಗು ನಿರಂತರ ರಜೆ ಇದ್ದತೆ ಮನೆಗೆ ಹೋಗಿ ಪರಿಶೀಲಿಸಲು ಸೂಚಿಸಲಾಗಿದೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಮಾತನಾಡಿ ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ ಮದುವೆಕಾರ್ಡ ಮುದ್ರಕ, ಪುರೋಹಿತ ಹಾಗೂ ಆಯೋಜಕರ ಮೇಲೆ ಪ್ರಕರಣ ದಾಖಲಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಅಲ್ಲದೇ ಪೋಸ್ಕೋ ಮತ್ತು ದೌರ್ಜನ್ಯ ಪ್ರಕರಣಗಳ ಬಗ್ಗೆಯೂ ಮಾಹಿತಿ ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಮೇಶ ಸೂಳಿಕೇರಿ ಮಾತನಾಡಿ ಕೋವಿಡ್ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ತಂದೆ ಅಥವಾ ತಾಯಿ ಕಳೆದುಕೊಂಡ 292 ಮಕ್ಕಳು ಇದ್ದಾರೆ. ಅಲ್ಲದೇ ಇತರೆ ಕಾರಣಗಳಿಂದ ತಂದೆ-ತಾಯಿ ಕಳೆದುಕೊಂಡ 1699 ಮಕ್ಕಳಿದ್ದಾರೆ. ಕೋವಿಡ್‍ನಿಂದ ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡ 5 ಜನ ಮಕ್ಕಳಿಗೆ ಮುಖ್ಯಮಂತ್ರಿಗಳ ಬಾಲಸೇವಾ ಯೋಜನೆಯಡಿ ಪ್ರತಿ ತಿಂಗಳು 3500 ರೂ.ಗಳಂತೆ ಸಹಾಯಧನ ನೀಡಲಾಗುತ್ತಿದೆ ಎಂದು ತಿಳಿಸಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಆಯೋಗದ ಸದಸ್ಯರು ಮಕ್ಕಳ ಪರಿಸ್ಥಿತಿ ಅವಲೋಕಿಸಿ ಸರಕಾರ ನೀಡುವ ಸೌಲಭ್ಯಗಳನ್ನು ತಲುಪಿಸುವ ಕಾರ್ಯವಾಗಬೇಕು. ನಿರ್ಲಕ್ಷ ವಹಿಸಿದಲ್ಲಿ ಸೌಲಭ್ಯದಿಂದ ವಂಚಿತರಾಗುತ್ತಾರೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಎಸ್.ಬಿರಾದಾರ ಮಾತನಾಡಿ ಜಿಲ್ಲೆಯಲ್ಲಿ ಆರ್.ಟಿ.ಇ ಅಡಿಯಲ್ಲಿ 361 ಶಾಲೆಗಳು ನೊಂದಣಿಯಾಗಿದ್ದು, 323 ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. 8267 ವಿದ್ಯಾರ್ಥಿಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ. ಪ್ರಸಕ್ತ ಸಾಲಿಗೆ 9ನೇ ತರಗತಿಗೆ 18645, 10ನೇ ತರಗತಿಗೆ 18878 ಹೆಣ್ಣು ಮಕ್ಕಳು ಇದ್ದು, ಬಾಲ್ಯವಿವಾಹ ತಡೆಗೆ ಸಮಾಜ ವಿಜ್ಞಾನ ಬೋಧಿಸುವ ಶಿಕ್ಷಕರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ ಮಕ್ಕಳಿಗೆ ತಿಳುವಳಿಕೆ ನೀಡಲಾಗುತ್ತಿದೆ ಎಂದು ಸಭೆಗೆ ತಿಳಿಸಿದಾಗ ಶಾಲೆಗಳಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯ ಸುಸ್ಥಿತಿಯಲ್ಲಿ ಇರುವಂತೆ ಕ್ರಮವಹಿಸಲು ಡಾ.ಅಂಥೋಣಿ ತಿಳಿಸಿದರು.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 130 ಪ್ರಕರಣಗಳ ಪೈಕಿ 29 ಇತ್ಯರ್ಥಗೊಂಡಿದ್ದು, 101 ಮಾತ್ರ ಬಾಕಿ ಉಳಿದಿವೆ. ಬಾಲನ್ಯಾಯ ಮಂಡಳಿ ಮುಂದೆ ಪ್ರಸಕ್ತ ತ್ರೈಮಾಸಿಕದಲ್ಲಿ 8 ಪ್ರಕರಣಗಳ ಸೇರಿ ಒಟ್ಟು 45 ಪ್ರಕರಣಗಳಿದ್ದು, ಈ ಪೈಕಿ 10 ಇತ್ಯರ್ಥಿಗೊಂಡಿವೆ. 43 ಪ್ರಕರಣಗಳು ಬಾಕಿ ಉಳಿದಿವೆ. ವಿಶೇಷ ಪಾಲನೆ ಯೋಜನೆಯಡಿ 1151 ಫಲಾನುಭವಿಗಳಲ್ಲಿ 18 ವರ್ಷ ಮೇಲ್ಪಟ್ಟ 43 ಮಕ್ಕಳನ್ನು ಯೋಜನೆಯಿಂದ ಕೈಬಿಟ್ಟು, ಉಳಿದ 1108 ಮಕ್ಕಳಿಗೆ ಆರ್ಥಿಕ ಸೌಲಭ್ಯ ನೀಡಲಾಗುತ್ತಿದೆ. ಮಕ್ಕಳ ರಕ್ಷಣಾ ಕಾಯ್ದೆಗಳ ಬಗ್ಗೆ ತಾಲೂಕಾ ಮಟ್ಟದಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಸಭೆಗೆ ತಿಳಿಸಿದರು.
ಸಭೆಯಲ್ಲಿ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯರಾದ ಭಾರತಿ ವಾಳ್ವೇಕರ, ಅಶೋಕ ಯರಗಟ್ಟಿ, ಜಯಶ್ರೀ ಪರಶುರಾಮ ಎಂ.ಎಲ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಭಾರತಿ ಬಣಕಾರ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಗುಲಾಮ ನದಾಫ್, ಸದಸ್ಯರಾದ ಎಸ್.ಎಸ್.ಬೆಳಗಲಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಡಾ.ಅಂಥೋಣಿ ಸೆಬಾಸ್ಟಿಯನ್ ನವನಗರದ ಬಾಲಕರ ಮತ್ತು ಬಾಲಕಿಯರ ಬಾಲಮಂದಿರ ಮತ್ತು ಬಿಟಿಡಿಎ ಆವರಣದಲ್ಲಿರುವ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Be the first to comment