ಬೆಂಬಲ ಬೆಲೆ ಯೋಜನೆಯಡಿ ಹೆಸರು ಕಾಳು ಖರೀದಿ:30 ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭ : ಎಡಿಸಿ ಮುರಗಿ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಖರೀದಿ ಕೇಂದ್ರಗಳ ವಿವರ
ಬೆಂಬಲ ಬೆಲೆಯಲ್ಲಿ ಹೆಸರುಕಾಳು ಖರೀದಿಸಲು ಜಿಲ್ಲೆಯಲ್ಲಿ ಒಟ್ಟು 14 ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬಾಗಲಕೋಟೆ ತಾಲೂಕಿನ ಟಿ.ಎ.ಪಿ.ಸಿ.ಎಂ.ಎಸ್ (9972773936), ಪಿ.ಕೆ.ಪಿ.ಎಸ್ ಹಳ್ಳೂರ (9901325201), ಪಿಕೆಪಿಎಸ್ ಬಾದಾಮಿ (9611358837), ಕೆರೂರ, ಪಿಕೆಪಿಎಸ್ ಬೀಳಗಿ (9611344629), ಟಿ.ಎ.ಪಿ.ಸಿ.ಎಂ.ಎಸ್ ಹುನಗುಂದ (9480262655) ಎಫ್‍ಪಿಓ ಸೂಳೇಭಾವಿ (9008215922), ಅಮರಾವತಿ, ಪಿ.ಕೆ.ಪಿ.ಎಸ್ ಕರಡಿ, ಪಿಕೆಪಿಎಸ್ ಇಲಕಲ್ಲ (7022780360), ಟಿ.ಎ.ಪಿ.ಸಿ.ಎಂ.ಎಸ್ ಜಮಖಂಡಿ(9448223654), ಟಿ.ಎ.ಪಿ.ಸಿ.ಎಂ.ಎಸ್ ಮುಧೋಳ (9900209792), ಪಿಕೆಪಿಎಸ್ ಲೋಕಾಪೂರ, ಸಿ.ಎಸ್.ಗುತ್ತಿ (9611667464) ಯಲ್ಲಿ ಸ್ಥಾಪಿಸಲಾಗಿದೆ.

ಬಾಗಲಕೋಟೆ :ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಹೆಸರುಕಾಳನ್ನು ಪ್ರತಿ ಕ್ವಿಂಟಲ್‍ಗೆ 7275 ರೂ.ಗಳಂತೆ ಖರೀದಿಸಲು ಜಿಲ್ಲೆಯಲ್ಲಿ ಆಗಸ್ಟ 30 ರಿಂದ ರೈತರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ತಿಳಿಸಿದರು.

ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಶುಕ್ರವಾರ ಈ ಕುರಿತು ಜರುಗಿದ ಜಿಲ್ಲಾ ಟಾಸ್ಕಪೋರ್ಸ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹೆಸರುಕಾಳು ಖರೀದಿಗೆ ನೊಂದಣಿ ಕಾಲಾವಧಿಯನ್ನು ಸರಕಾರ ಆದೇಶ ಹೊರಡಿಸಿದ ದಿನದಿಂದ 45 ದಿನಗಳ ವರೆಗೆ ಹಾಗೂ ಖರೀದಿ ಪ್ರಕ್ರಿಯೆ 90 ದಿನಗಳವರೆಗೆ ನಿಗಧಿಪಡಿಸಲಾಗಿದೆ. ಪ್ರತಿ ಎಕರೆಗೆ ಗರಿಷ್ಠ 4 ಕ್ವಿಂಟಲ್‍ನಂತೆ ಹಾಗೂ ಪ್ರತಿ ರೈತರಿಂದ ಗರಿಷ್ಠ 6 ಕ್ವಿಂಟಲ್ ಎಫ್.ಎ.ಕ್ಯೂ ಗುಣಮಟ್ಟದ ಹೆಸರುಕಾಳನ್ನು ಮಾತ್ರ ಖರೀದಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಸಕ್ತ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 31540 ಹೆಕ್ಟೆರ್ ಪ್ರದೇಶಗಳಲ್ಲಿ ಹೆಸರು ಬಿತ್ತನೆ ಮಾಡಲಾಗಿದೆ. ಸರಕಾರವು ಕೃಷಿ ಇಲಾಖೆಯಿಂದ ನೀಡಿರುವ ರೈತರ ನೊಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ (ಫ್ರುಟ್ಸ್) ಗುರುತಿನ ಸಂಖ್ಯೆ ಮೂಲಕ ನೋಂದಾಯಿತ ರೈತರಿಂದ ಮಾತ್ರ ಖರೀದಿಸಲಾಗುತ್ತಿದೆ. ಈ ಗುರುತಿನ ಸಂಖ್ಯೆ ಹೊರತುಪಡಿಸಿ ಬೇರಾವುದೇ ದಾಖಲೆಗಳು ತರುವುದು ಅವಶ್ಯವಿರುವದಿಲ್ಲ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಸಂಸ್ಥೆಯನ್ನು ರಾಜ್ಯದ ವತಿಯಿಂದ ಖರೀದಿ ಸಂಸ್ಥೆಯನ್ನಾಗಿ ಗುರುತಿಸಲಾಗಿದೆ. ನೊಂದಣಿ ಹಾಗೂ ಖರೀದಿಗೆ ಜಿಲ್ಲೆಯಲ್ಲಿ ಒಟ್ಟು 14 ಕೇಂದ್ರಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.

ಕೇಂದ್ರ ಸರಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಪಾಲಿಸಬೇಕು. ರೈತರ ಫ್ರುಟ್ಸ್ ಗುರುತಿನ ಸಂಖ್ಯೆಯ ನೊಂದಾವಣೆ ಕಡ್ಡಾಯವಾಗಿದ್ದು, ಅಂತಹ ರೈತರಿಂದ ಮಾತ್ರ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಅವಕಾಶವಿರುತ್ತದೆ. ಖರೀದಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳಾದ ಅಂತರ್‍ಜಾಲ ವ್ಯವಸ್ಥೆ, ಕಂಪ್ಯೂಟರ್, ಪ್ರೀಂಟರ್ ಮತ್ತು ಅದಕ್ಕೆ ಬೇಕಾಗುವ ಇನ್ನೀತರ ಅಗತ್ಯ ಉಪಕರಣಗಳು, ಲೇಖನ ಸಾಮಗ್ರಿಗಳ ವ್ಯವಸ್ಥೆ ಮಾಡಿಕೊಂಡು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಖರೀದಿ ಕೇಂದ್ರಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಮಾರ್ಕೆಟ್ ಪೆರಡರೇಷನ್‍ನ ಪ್ರತಿನಿಧಿ ಶ್ರೀಧರ ಕುಲಕರ್ಣಿ (9449864458) ಇವರನ್ನು ಸಂಪರ್ಕಿಸುವಂತೆ ತಿಳಿಸಿದರು.

ಖರೀದಿ ಪ್ರಕ್ರಿಯೆಯ ನಂತರ ಪಾವತಿಗೆ ಕ್ರಮಕೈಗೊಳ್ಳಬೇಕು. ರೈತರ ಹೆಸರಿನ ಆಧಾರ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಮಾತ್ರ ಉತ್ಪನ್ನದ ಮೌಲ್ಯವು ಡಿಬಿಟಿ ಮೂಲಕ ಜಮಾ ಆಗುವಂತೆ ಪಾವತಿಗೆ ಕ್ರಮಕೈಗೊಳ್ಳಬೇಕು. ಖರೀದಿ ಕೇಂದ್ರದಲ್ಲಿ ರೈತರ ಹೆಸರಿನಲ್ಲಿ ವರ್ತಕರು ತರುವ ಕಡಲೆಕಾಳನ್ನು ಖರೀದಿಸಂತೆ ಹಾಗೂ ಖರೀದಿ ಸಂಸ್ಥೆಗಳ ಯಾವುದೇ ರೀತಿಯ ದುರುಪಯೋಗ ಆಗದಂತೆ ಎಲ್ಲ ಮುನ್ನಚ್ಚರಿಕಾ ಕ್ರಮಗಳನ್ನು ವಹಿಸತಕ್ಕದ್ದು. ಮೇಲ್ವಿಚಾರಣೆಗಾಗಿ ತಾಲೂಕಾ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಜಂಟಿ ಕೃಷಿ ನಿರ್ದೇಶಕಿ ಡಾ.ಚೇತನಾ ಪಾಟೀಲ, ಕೃಷಿ ಮಾರುಕಟ್ಟೆ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಎ.ಲಕ್ಕುಂಡಿ, ಮಾರ್ಕೆಟ್ ಪೆರಡರೇಷನ್‍ನ ಪ್ರತಿನಿಧಿ ಶ್ರೀಧರ ಕುಲಕರ್ಣಿ, ಸೇರಿದಂತೆ ಆಯಾ ತಾಲೂಕಿನ ಎಪಿಎಂಸಿ ಕಾರ್ಯದರ್ಶಿಗಳು, ಪಿಕೆಪಿಎಸ್, ಎಫ್‍ಪಿಓಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*