ಜಿಲ್ಲಾ ಸುದ್ದಿಗಳು
ಮೊಬೈಲ್, ರೀಸ್ಟವಾಚ್ ನಿಷೇಧ
ಪರೀಕ್ಷಾ ಉಪ ಅಧೀಕ್ಷಕರನ್ನು ಹೊರತುಪಡಿಸಿ ಉಳಿದ ಎಲ್ಲ ಪರೀಕ್ಷಾ ಸಿಬ್ಬಂದಿ ಹಾಗೂ ಅಭ್ಯರ್ಥಿಗಳು ಮೊಬೈಲ್ ಮತ್ತು ರಿಸ್ಟವಾಚ್‍ಗಳನ್ನು ಪರೀಕ್ಷಾ ಕೇಂದ್ರಕ್ಕೆ ತರುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾಧಿಕಾರಿಗಳು
ಬಾಗಲಕೋಟೆ : ಜಿಲ್ಲೆಯಲ್ಲಿ ಆಗಸ್ಟ 28 ಮತ್ತು 29 ರಂದು ಸಾಮಾನ್ಯ ಪ್ರವೇಶ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆ ಸುಸೂತ್ರವಾಗಿ ನಡೆಸಲು ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಸಾಮಾನ್ಯ ಪ್ರವೇಶ ಪರೀಕ್ಷೆ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಒಟ್ಟು 16 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 6000 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆಯಲಿದ್ದಾರೆ. ಬಾಗಲಕೋಟೆಯಲ್ಲಿ 5 ಕೇಂದ್ರಗಳಲ್ಲಿ 2184 ವಿದ್ಯಾರ್ಥಿಗಳು, ಜಮಖಂಡಿಯ 4 ಕೇಂದ್ರಗಳಲ್ಲಿ 1152, ಮುಧೋಳದ 2 ಕೇಂದ್ರಗಳಲ್ಲಿ 840, ಬನಹಟ್ಟಿಯ 2 ಕೇಂದ್ರಗಳಲ್ಲಿ 696, ಹುನಗುಂದ 2 ಕೇಂದ್ರಗಳಲ್ಲಿ 768 ಹಾಗೂ ಬಾದಾಮಿಯ 1 ಪರೀಕ್ಷಾ ಕೇಂದ್ರದಲ್ಲಿ 360 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆಂದು ತಿಳಿಸಿದರು.
ಪರೀಕ್ಷೆಯಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆಯದಂತೆ 16 ಜನ ವೀಕ್ಷಕರನ್ನು ನೇಮಿಸಲಾಗಿದ್ದು, ಪರೀಕ್ಷೆಯ ಮೇಲ್ವಿಚಾರಣೆ ಮಾಡಲಿದ್ದಾರೆ. ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸುವ ನಿಟ್ಟಿನಲ್ಲಿ ತಹಶೀಲ್ದಾರರ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸರಕಾರಿ ಕಾಲೇಜುಗಳ ಪ್ರಾಚಾರ್ಯರನ್ನೊಳಗೊಂಡ 6 ತಂಡಗಳನ್ನು ನೇಮಿಸಲಾಗಿದ್ದು, ಸದರಿ ತಂಡವು ಪ್ರಥಮ ಮತ್ತು ದ್ವಿತೀಯ ಅಧಿವೇಶನ ಪರೀಕ್ಷೆಗೆ ಅನುಗುಣವಾಗಿ ಸಮಯಕ್ಕೆ ಸರಿಯಾಗಿ ಪ್ರಶ್ನೆ ಪತ್ರಿಕೆ ತಲುಪಿಸುವ ಕಾರ್ಯವಾಗಬೇಕು ಎಂದು ತಿಳಿಸಿದರು.
ಪ್ರಶ್ನೆ ಪತ್ರಿಕೆಗಳು ಹಾಗೂ ಓಎಂಆರ್ ಉತ್ತರ ಪತ್ರಿಕೆಗಳು ಪರೀಕ್ಷಾ ಕೊಠಡಿಯಿಂದ ಬಿಟ್ಟು ಹೊರಗೆ ಹೋದರೆ ಅದಕ್ಕೆ ಪ್ರಶ್ನೆ ಪತ್ರಿಕೆ ಪಾಲಕರೇ ನೇರ ಹೊಣೆಗಾರರಾಗುತ್ತಿದ್ದು, ಪರೀಕ್ಷೆಯ ಪ್ರತಿಯೊಂದು ಅವಧಿಯಲ್ಲಿಯೂ ಪ್ರಶ್ನೆ ಪತ್ರಿಕೆ ಪಾಲಕರು ಪರೀಕ್ಷಾ ಕೊಠಡಿಯ ಮೇಲ್ವಿಚಾರಣೆ ಮಾಡಬೇಕು. ಪರೀಕ್ಷಾ ಮುಗಿದ ತಕ್ಷಣ ಉಪ ಮುಖ್ಯ ಅಧೀಕ್ಷಕರಿಗೆ ಕೊಠಡಿ ಮೇಲ್ವಿಚಾರಕರು ಒಪ್ಪಿಸುವ ಉಪಯೋಗಿಸಿದ ಮತ್ತು ಉಪಯೋಗಿಸದ ಓಎಂಆರ್ ಉತ್ತರ ಪತ್ರಿಕೆ, ಉಳಿದ ಪ್ರಶ್ನೆ ಪತ್ರಿಕೆಗಳನ್ನು ಪರಿಶೀಲಿಸಲು ಸೂಚಿಸಿದರು.
ಜಿಲ್ಲೆಯಲ್ಲಿ ಸ್ಥಾಪಿಸಲಾದ 16 ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ ವ್ಯವಸ್ಥೆ ಹಾಗೂ ಪ್ರಶ್ನೆ ಪತ್ರಿಕಾರ ಸಾಗಾಣಿಕಾ ತಂಡಕ್ಕೆ ಸೂಕ್ತ ಎಸ್ಕಾರ್ಟ ಒದಗಿಸಲು ಪೊಲೀಸ್ ಇಲಾಖೆಗೆ ತಿಳಿಸಿದರು. ಪರೀಕ್ಷಾ ಕೇಂದ್ರದ ಸುತ್ತ ನಿಷೇಧಿತ ಪ್ರದೇಶವೆಂದು ಘೋಷಿಸಲಾಗುತ್ತಿದ್ದು, ಸುತ್ತ ಮುತ್ತಲರಿವು ಝರಾಕ್ಸ್ ಅಂಗಡಿಗಳನ್ನು ಮುಚ್ಚಿಸಲು ಕ್ರಮವಹಿಸಲು ತಿಳಿಸಿದರು. ಜಿಲ್ಲಾ ಖಜಾನೆ ಅಧಿಕಾರಿಗಳು ಪರೀಕ್ಷಾ ಗೌಪ್ಯ ವಸ್ತುಗಳ ಹಸ್ತಾಂತರ ಹಾಗೂ ತಮ್ಮ ಅಧೀನದಲ್ಲಿ ಬರುವ ಉಪ ಖಜಾನಾಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಜಿಲ್ಲಾಧಿಕಾರಿಗಳು ತಿಳಿಸಿದರು.
ಪರೀಕ್ಷಾ ಕೇಂದ್ರದ ಮುಂದೆ ಆರೋಗ್ಯ ತಪಾಸಣಾ ಕೇಂದ್ರ ಸ್ಥಾಪಿಸಿ, ಇಬ್ಬರು ಅರೆ ವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜಿಸಿ, ತುರ್ತು ಕಾರ್ಯಕ್ಕಾಗಿ ಜಿಲ್ಲಾ ಮತ್ತು ತಾಲೂಕಾ ಕೇಂದ್ರದಲ್ಲಿ ಒಂದು ಅಂಬುಲೆನ್ಸ್ ಸಿದ್ದತೆಯಲ್ಲಿ ಇಟ್ಟುಕೊಳ್ಳಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ತಿಳಿಸಿದರು. ಪರೀಕ್ಷಾ ಮುನ್ನ ಮತ್ತು ಪರೀಕ್ಷಾ ದಿನಗಳಂದು ಪರೀಕ್ಷಾ ಕೊಠಡಿಗಳನ್ನು ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಸ್ಯಾನಿಟೈಜರ್ ಮಾಡಲು ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಿಗೆ ಸೂಚಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಶಿಧರ ಪೂಜಾರ ಪರೀಕ್ಷಾ ಸಿದ್ದತೆ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ ಸೇರಿದಂತೆ ಪರೀಕ್ಷಾ ವೀಕ್ಷಕರು, ಮುಖ್ಯ ಅಧೀಕ್ಷಕರು, ತಹಶೀಲ್ದಾರರು ಉಪಸ್ಥಿತರಿದ್ದರು.
Be the first to comment